ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರು
ಕಲ್ಯಾಣೋತ್ಸವದ ಮೂಲಕ ಧರ್ಮ ಮತ್ತು ಸಂಸ್ಕೃತಿಯ ಅನಾವರಣವಾಗುತ್ತಿದೆ. ಭಗವಂತನ ಕಲ್ಯಾಣ ಗುಣಗಳನ್ನು ಅನುಸರಿಸುವ ಕಾರ್ಯ ಭಕ್ತ ಸಮೂಹದಿಂದಲೂ ಆಗಬೇಕು. ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಧರ್ಮ ಸಂಗಮದ ಜೊತೆ ಸಂತ ಸಂಗಮವೂ ಆಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.ಅವರು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಶನಿವಾರ ರಾತ್ರಿ ಆಯೋಜಿಸಲಾದ ಶ್ರೀನಿವಾಸ ಕಲ್ಯಾಣೋತ್ಸವದ ‘ಧರ್ಮ ಸಂಗಮ’ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ಪ್ರಸ್ತುತ ಯುವ ಸನ್ಯಾಸಿಗಳು ಇಂತಹ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರತದ ಮೌಲ್ಯವನ್ನು ಉಳಿಸುವ ಸಂದರ್ಭ ಎಂದು ನಾವು ತಿಳಿದುಕೊಳ್ಳಬಹುದು. ಸನಾತನ ಹಿಂದೂ ಧರ್ಮದ ಸಂರಕ್ಷಣೆ ನಡೆಸುವ ಕಾರ್ಯ ನಮ್ಮಿಂದಲೇ ನಡೆಯಬೇಕಾಗಿದೆ. ಧರ್ಮವನ್ನು ರಕ್ಷಣೆ ಮಾಡುವವರನ್ನು, ಧರ್ಮವೇ ರಕ್ಷಿಸುತ್ತದೆ. ಒಂದಷ್ಟು ಎಚ್ಚರದಲ್ಲಿ ಧರ್ಮ ಸಂರಕ್ಷಣೆಯ ಕಾರ್ಯ ಮಾಡಬೇಕು ಎಂದರು. ಈಗಾಗಲೇ ವಿಧಾನಸಭೆಯಲ್ಲೂ ಅಲ್ಲೋಲ ಕಲ್ಲೋಲ ಆಗುತ್ತಿದೆ. ಲೋಕಸಭೆಯಲ್ಲೂ ಅದೇ ಆಗುತ್ತಿದೆ. ಅಂತೂ ಧರ್ಮ ಸಂವಿಧಾನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಅರಕಲಗೂಡು ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿ ಎಲ್ಲ ದೇಶಕ್ಕೆ ಆದರ್ಶಮಯ. ಪರಮಾತ್ಮನ ಕಲ್ಯಾಣದೊಂದಿಗೆ ನಮ್ಮ ಕಲ್ಯಾಣ ಆಗಬೇಕು. ಅದಕ್ಕಾಗಿ ಹಿಂದೂ ಸಂಸ್ಕೃತಿಯ ಮೇಲಾಗುವ ಆಗಂತುಕಗಳನ್ನು ತಡೆಯಬೇಕು. ನಿಸ್ವಾರ್ಥ ಭಾವನೆಯಿಂದ ಹಿಂದು ಸಂಘಟನೆಗಾಗಿ ಕಟಿಬದ್ಧರಾಗಬೇಕು ಎಂದರು.ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿ ಪ್ರಜೆಯೂ ದೇಶಕ್ಕಾಗಿ ಒಂದಷ್ಟು ಸಮಯವನ್ನು ತ್ಯಾಗ ಮಾಡಬೇಕು. ಇಂತಹ ತ್ಯಾಗ ಮನೋಭಾವನೆಯನ್ನು ಉಳ್ಳ ಪುತ್ತಿಲರಂತಹ ದೇಶ ಭಕ್ತರು ಹತ್ತಾರು ಮಂದಿ ಹುಟ್ಟಬೇಕು. ಸಂಘಟನೆಯ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ಮಾಡಬಹುದು. ಪುತ್ತಿಲರ ಯೋಜನೆ, ಯೋಚನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ಧರ್ಮ ರಕ್ಷಣೆಗೆ ಮನಸ್ಸು ಮಾಡಿದರೆ ಸಾಲದು ಮುಂದೆ ಬರಬೇಕು. ಧರ್ಮರಕ್ಷಣೆಗೆ ಮೊದಲು ದೇವರು, ನಂತರ ದೇಶ, ಅನಂತರ ನಾವು ಎಂಬ ವಿಚಾರ ಮುಂದಿಟ್ಟು ಸಂಘಟನೆಯ ಕೆಲಸ ಮಾಡಬೇಕು. ಧರ್ಮ ಆಚರಣೆ, ರಕ್ಷಣೆ ಮಾಡಿದರೆ ಅದೇ ದೇಶ ಸೇವೆ ಎಂದರು.
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಕಲಿಯುಗದಲ್ಲಿ ಭಗವಂತ ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ಪ್ರತಿ ವರ್ಷ ಅವತರಿಸುತ್ತಾನೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸ ಎಲ್ಲರ ಬಾಳಿಗೆ ಬೆಳಕು ನೀಡಲಿ, ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಭಾಗವಹಿಸಿ ಶ್ರೀ ದೇವರ ದರುಶನ ಪಡೆಯುವಂತೆ ವಿನಂತಿಸಿದರು.೧೦೦ ಮಂದಿಗೆ ಸಾಮೂಹಿಕ ವಿವಾಹ: ಪುತ್ತಿಲಪುತ್ತಿಲ ಪರಿವಾರದ ಸ್ಥಾಪಕ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಶ್ರೀನಿವಾಸನ ಪ್ರೇರಣೆಯಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಒಂದು ವರ್ಷದಲ್ಲಿ ಸುಮಾರು ೨೫ ಲಕ್ಷಕ್ಕೂ ಹೆಚ್ಚಿನ ಆರ್ಥಿಕ ಸೇವೆಯನ್ನು ಬಡ ಜನರಿಗೆ ನೀಡಿದೆ. ನೂರಾರು ಕುಟುಂಬಗಳ ನೋವಿಗೆ ಸ್ಪಂದಿಸುವ ಕೆಲಸಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶಿಕ್ಷಣ ಪಡೆದವರು ನಮಗೆ ಸ್ವಲ್ಪ, ಸಮಾಜಕ್ಕೆ ಎಲ್ಲವನ್ನು ಅರ್ಪಣೆ ಮಾಡುವ ಚಿಂತನೆಯೊಂದಿಗೆ ಧರ್ಮ ಜಾಗೃತಿ ಮಾಡುವ ಶಕ್ತಿ ಭಗವಂತ ನೀಡಿದ್ದಾನೆ. ಅದನ್ನು ಮುಂದುವರಿಸುತ್ತಿದ್ದೇವೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುವ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ನೇತೃತ್ವದಲ್ಲಿ ಮುಂದಿನ ವರ್ಷ ನೂರು ಮಂದಿಗೆ ಸಾಮೂಹಿಕ ವಿವಾಹವನ್ನು ಮಾಡುವ ಯೋಜನೆ, ಚಿಂತನೆ ನಮ್ಮ ಮುಂದಿದೆ ಎಂದರು.ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಶಶಾಂಕ್ ಕೊಟೇಚಾ, ಬೂಡಿಯಾರು ರಾಧಾಕೃಷ್ಣ ರೈ, ಚಂದಪ್ಪ ಮೂಲ್ಯ, ಕೋಶಾಧಿಕಾರಿ ಉದಯ ಕುಮಾರ್ ರೈ ಎಸ್. ಸಂಪ್ಯ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಉಪಸ್ಥಿತರಿದ್ದರು.ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸ್ವಾಗತ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ, ಸಹಸಂಚಾಲಕ ಮನೀಶ್ ಕುಲಾಲ್, ಹರೀಶ್ ಮರುವಾಲ, ಸಂತೋಷ್, ಅನಿಲ್ ತೆಂಕಿಲ, ಗಣೇಶ್ಚಂದ್ರ, ಪ್ರವೀಣ್ ಶೆಟ್ಟಿ ತಿಂಗಳಾಡಿ, ರಜನೀಶ್, ಶ್ರೀನಿವಾಸ ಕಲ್ಯಾಣೋತ್ಸದ ಕಡಬ ತಾಲೂಕು ಅಧ್ಯಕ್ಷ ವೆಂಕಟ್ರಮಣ ಕಡಬ, ನವೀನ್ ರೈ ಪಂಜಳ, ಸುನಿಲ್ ಬೊರ್ಕರ್, ಗುರು ತೆಂಕಿಲ, ಸುಜಿತ್ ಕಜೆ, ಪ್ರಜ್ವಲ್ ಘಾಟೆ, ಗಣೇಶ್ ಮುಕ್ರಂಪಾಡಿ ಅತಿಥಿಗಳನ್ನು ಗೌರವಿಸಿದರು.ವಿಜಯಶ್ರೀ ಮುಳಿಯ ಪ್ರಾರ್ಥಿಸಿದರು. ಶ್ರೀನಿವಾಸ ಕಲ್ಯಾಣೋತ್ಸವ ಸ್ವಯಂ ಸೇವಕ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿ, ಕಾರ್ಯದರ್ಶಿ ರವಿಕುಮಾರ್ ಕೆದಂಬಾಡಿ ಮಠ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್, ವಿಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು.ಸಭಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ಗಾನಸಿರಿ ಕಿರಣ್ ಕುಮಾರ್ ಪುತ್ತೂರು ಅವರಿಂದ ಭಕ್ತಿ ಗಾನಸುಧೆ ನಡೆಯಿತು. ಈ ಸಂದರ್ಭ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ ೧೦ ಗಂಟೆಯ ಬಳಿಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಚಾ ಪರ್ಕ ಕಲಾವಿದರಿಂದ ೯೨೧ನೇ ಪ್ರದರ್ಶನವಾಗಿ ಪುದರ್ ದೀತಿಜಿ ತುಳು ನಾಟಕ ಪ್ರದರ್ಶನಗೊಂಡಿತು.