ಸಾರಾಂಶ
ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ತರುವಲ್ಲಿ ಪಂಚಾಯತಿ ಮಟ್ಟದ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.
ಬಸವನಬಾಗೇವಾಡಿ : ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ತರುವಲ್ಲಿ ಪಂಚಾಯತಿ ಮಟ್ಟದ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.
ತಾಲೂಕಿನ ಕಾನ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಾಧಿಕಾರಿಗಳ ಕಾರ್ಯಾಲಯ, ಜಾಯವಾಡಗಿಯ ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಕಾನ್ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಣಕಾಲ ಪಂಚಾಯತಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹಂತ ಹಂತವಾಗಿ ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತದೆ. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಗಂಭೀರವಾಗಿ ಪರಿಗಣಿಸದೇ ಸ್ಪರ್ಧಾತ್ಮಕವಾಗಿ ಭಾಗವಹಿಸುವದು ತುಂಬಾ ಮುಖ್ಯವಾಗಿದೆ ಎಂದರು.ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ.ನಾಗಾವಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸೂಪ್ತ ಪ್ರತಿಭೆಯನ್ನು ಅನಾವರಣ ಮಾಡಬೇಕು. ಸದೃಢ ದೇಹವಿದ್ದರೆ ಸದೃಢವಾದ ಮನಸ್ಸು ಇರುತ್ತದೆ.
ನಿರಂತರ ವ್ಯಾಯಾಮ, ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಸದೃಢವಾದ ದೇಹ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ವೈ.ಆರ್.ಮೇಲಿನಮನಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್.ಅಂಗಡಿ, ಬಿ.ಎಸ್.ಓದಿ, ಎನ್.ಬಿ.ಹಿರೇಮಠ, ಪಿ.ಎಂ.ಚಿತ್ತರಗಿ, ಪಿ.ವೈ.ಹರಿಜನ, ಆರ್.ಆರ್.ಮೇಲಿನಮನಿ, ಎ.ಬಿ.ನಾಯಕ, ಎಸ್.ಪಿ.ಸಜ್ಜನ, ನಿಂಗಯ್ಯ ಮಠ, ರಿಶಿನಾ ಇತರರು ಇದ್ದರು. ಜೆ.ಬಿ.ಹಳಿಮನಿ ಸ್ವಾಗತಿಸಿ, ನಿರೂಪಿಸಿದರು. ನಂತರ ಕಣಕಾಲ ಪಂಚಾಯಿತಿ ಮಟ್ಟದಲ್ಲಿರುವ ಎಲ್ಲ ಪ್ರಾಥಮಿಕ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿದರು.