ಯುವ ಸಂಭ್ರಮದಿಂದ ಪ್ರತಿಭೆಗಳ ಅನಾವರಣ

| Published : Oct 08 2024, 01:05 AM IST / Updated: Oct 08 2024, 01:06 AM IST

ಸಾರಾಂಶ

ತುಮಕೂರು: ತುಮಕೂರು ದಸರಾ ಅಂಗವಾಗಿ ಜಿಲ್ಲೆಯ ಯುವ ಪ್ರತಿಭೆಗಳ ಅನಾವರಣಗೊಲಿಸಲು ಯುವ ಸಂಭ್ರಮ ಉತ್ತಮ ವೇದಿಕೆಯಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ತುಮಕೂರು: ತುಮಕೂರು ದಸರಾ ಅಂಗವಾಗಿ ಜಿಲ್ಲೆಯ ಯುವ ಪ್ರತಿಭೆಗಳ ಅನಾವರಣಗೊಲಿಸಲು ಯುವ ಸಂಭ್ರಮ ಉತ್ತಮ ವೇದಿಕೆಯಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತ ಪಡಿಸಿದರು. ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಾಸ್ಯ ಚಕ್ರವರ್ತಿ ಟಿ.ಆರ್.ನರಸಿಂಹರಾಜು ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ 40 ವರ್ಷದೊಳಗಿನವರ ಜನಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸುವ ಮೂಲಕ ಅವರನ್ನು ಸರಿದಾರಿಯಲ್ಲಿ ನಡೆಸುವುದು ನಮ್ಮ ಜವಬ್ದಾರಿಯಾಗಿದೆ ಎಂದು ತಿಳಿಸಿದರು.ಜಿಲ್ಲೆಯು ಕಲಾ ಸಂಸ್ಕೃತಿಯ ನೆಲೆಬಿಡಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆಯುವುದರೊಂದಿಗೆ ಜಿಲ್ಲೆಗೆ ಕೀರ್ತಿ ತಂದಿರುವ ಕಲಾವಿದರನ್ನು ಯುವಜನತೆ ಮಾರ್ಗ ದರ್ಶಕರನ್ನಾಗಿಸಿಕೊಳ್ಳಬೇಕು. ಯುವ ಸಂಭ್ರಮದ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆಯನ್ನು ಕಲ್ಪಿಸಲಾಗಿದ್ದು, ಅಕ್ಟೋಬರ್ 10ರವರೆಗೆ ನಡೆಯುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸಾವಿರಾರು ಸ್ಥಳೀಯ ಕಲಾವಿದರು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ವಿಶ್ವದಲ್ಲೇ ಅತಿ ಹೆಚ್ಚು ಯುವಕ-ಯುವತಿಯರನ್ನು ಭಾರತ ಹೊಂದಿದ್ದು, ಯುವ ಜನತೆ ದೇಶದ ಶಕ್ತಿಯಾಗಿದ್ದಾರೆ. ಆದರೆ ದೇಶದ ಯುವ ಜನತೆ ನಿರಾಸಕ್ತಿಗೊಳಗಾಗುತ್ತಿರುವುದು ಅತಂಕ ಪಡುವಂತಾಗಿದ್ದು, ಯುವ ಜನತೆಯನ್ನು ಕ್ರೀಯಾಶೀಲರನ್ನಾಗಿಸಲು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಬೇಕು ಎಂದರು.ಈ ಸಂದರ್ಭದಲ್ಲಿ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮೆರಗು ಮೂಡಿಸಿದ ದಸರಾ ಮೆರವಣಿಗೆ ತಾಲೀಮು ತುಮಕೂರು ದಸರಾ ಅಂಗವಾಗಿ ಅಕ್ಟೋಬರ್ 12 ವಿಜಯದಶಮಿ ದಿನದಂದು ನಡೆಯುವ ಜಂಬೂಸವಾರಿ ಕಾರ್ಯಕ್ರಮದ ಪೂರ್ವ ತಾಲೀಮು ವೈಭವಯುತವಾಗಿ ಜರಗಿತು. ನಗರದ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಅವರು ದಸರಾ ಮೆರವಣಿಗೆ ತಾಲೀಮಿಗೆ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ಭವ್ಯ ಅಲಂಕೃತಗೊಂಡ ಕಾಡು ಸಿದ್ದೇಶ್ವರ ಮಠದ ಲಕ್ಷ್ಮಿ ಹಾಗೂ ಕರಿಬಸವೇಶ್ವರ ಮಠದ ಲಕ್ಷ್ಮಿ ಆನೆಗಳು ಗಜ ಗಾಂಭೀರ್ಯದೊಂದಿಗೆ ಹೆಜ್ಜೆ ಹಾಕಿದವು. ಮೆರವಣಿಗೆಯ ಮುಂದಡಿಯಲ್ಲಿ ಚಿಟ್ ಮೇಳ, ಕರಡಿ ಮಂಜಲು, ಗಿಳಿ ಕುಣಿತ, ನಂದಿ ಧ್ವಜ ಕುಣಿತ, ನಾಸಿಕ್ ಡೋಲ್ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಭಾಗವಹಿಸಿ ಆಕರ್ಷಕ ಪ್ರದರ್ಶನ ನೀಡಿದವು. ಅಲ್ಲದೆ ಜಿಲ್ಲೆಯ ರಾಷ್ಟ್ರೀಯ ಚಾಂಪಿಯನ್ ಕ್ರೀಡಾಪಟುಗಳು ಮತ್ತು ಸಾಂಪ್ರದಾಯಿಕ ಉಡುಗೆ ತೊಟ್ಟ ಸುಮಾರು 1 ಸಾವಿರಕ್ಕೂ ಹೆಚ್ಚು ಯುವಜನತೆ ಮೆರವಣಿಗೆ ರಂಗು ನೀಡಿದರು.ದೀಪಾಲಂಕೃತ ತುಮಕೂರಿನ ರಾಜ ಬೀದಿಗಳುತುಮಕೂರು ದಸರಾ 2024ರ ದಸರಾ ದೀಪಾಲಂಕಾರಕ್ಕಿಂದು ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ತುಮಕೂರಿನ ರಾಜ ಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ನಾಗರಿಕರನ್ನು ಪುಳಕಗೊಳಿಸಿದೆ. ನಗರದ ಬಟವಾಡಿ ವೃತ್ತದಿಂದ ಶಿವಕುಮಾರ ಸ್ವಾಮೀಜಿ ವೃತ್ತ, ಭದ್ರಮ್ಮ ಚೌಟ್ರಿ ವೃತ್ತ, ಟೌನ್ ಹಾಲ್ ವೃತ್ತ, ಕಾಲ್ ಟ್ಯಾಕ್ಸ್ ವೃತ್ತ ಹಾಗೂ ಗುಬ್ಬಿ ವೃತ್ತದ ವರೆಗೂ ಮತ್ತು ಶಿರಾ ಗೇಟ್ ನಿಂದ ಮರಳೂರು ದಿಣ್ಣೆ ವೃತ್ತವರೆಗೂ ಅಲ್ಲದೆ ನಗರದ ಪ್ರಮುಖ ಬೀದಿಗಳು ದೀಪಾಲಂಕಾರದಿಂದ ಮಧುವಣಗಿತ್ತಿಯಂತೆ ಸಿದ್ದವಾಗಿವೆ.ನಗರದ ವೃತ್ತಗಳಲ್ಲಿ ವಿದ್ಯುತ್ ದೀಪಗಳಿಂದ ಮೂಡಿದ ಚಾಮುಂಡಿ, ಕೃಷ್ಣ, ಲಕ್ಷ್ಮೀ ಸೇರಿದಂತೆ ವಿವಿಧ ದೇವರುಗಳ ಕಲಾಕೃತಿಗಳು ದೀಪಾಲಂಕಾರದ ಮೆರಗನ್ನು ಹೆಚ್ಚಿಸಿವೆ.