ಬೆಳಗಾವಿಯಲ್ಲಿ ನವೆಂಬರ್ 11ರಂದು ನಡೆಯಲಿರುವ ಪತ್ರಿಕಾ ವಿತರಕರ 6ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ಪಟ್ಟಣದ ಪುರಸಭೆ ಸಭಾಭವನದಲ್ಲಿ ಸವಣೂರು ತಾಲೂಕು ಪತ್ರಿಕಾ ವಿತರಕರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಅನಾವರಣಗೊಳಿಸಲಾಯಿತು.
ಸವಣೂರು:ಬೆಳಗಾವಿಯಲ್ಲಿ ನವೆಂಬರ್ 11ರಂದು ನಡೆಯಲಿರುವ ಪತ್ರಿಕಾ ವಿತರಕರ 6ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ಪಟ್ಟಣದ ಪುರಸಭೆ ಸಭಾಭವನದಲ್ಲಿ ಸವಣೂರು ತಾಲೂಕು ಪತ್ರಿಕಾ ವಿತರಕರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಅನಾವರಣಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ ಅವರು, ಪ್ರತಿದಿನ ಬೆಳಿಗ್ಗೆ ಜನರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುವ ಮೂಲಕ ಪತ್ರಿಕಾ ವಿತರಕರು ಸಾರ್ವಜನಿಕರಿಗೆ ಸುದ್ದಿ ಮತ್ತು ಮಾಹಿತಿ ತಲುಪಿಸುವ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಇಂತಹ ಶ್ರಮಜೀವಿಗಳ ಜೀವನಮಟ್ಟ ಸುಧಾರಣೆ ಹಾಗೂ ಆರ್ಥಿಕ ಭದ್ರತೆಗಾಗಿ ಪುರಸಭೆ ವತಿಯಿಂದ ನಲ್ಮ್ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.ಬೆಳಗಾವಿಯಲ್ಲಿ ನಡೆಯಲಿರುವ ಸಮ್ಮೇಳನವು ರಾಜ್ಯದ ವಿವಿಧ ಜಿಲ್ಲೆಗಳ ವಿತರಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಇಂತಹ ಸಮ್ಮೇಳನಗಳು ವಿತರಕರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಹಕ್ಕುಗಳ ಕುರಿತು ಚರ್ಚಿಸಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಸಮ್ಮೇಳನದ ಯಶಸ್ವಿ ಆಯೋಜನೆಗೆ ಅಗತ್ಯವಿರುವ ಸಹಕಾರವನ್ನು ಪುರಸಭೆ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಕ್ರಯ್ಯ ಹಿರೇಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕಾ ವಿತರಕರು ಎದುರಿಸುತ್ತಿರುವ ಸಮಸ್ಯೆಗಳು, ವೃತ್ತಿಪರ ಸವಾಲುಗಳು ಹಾಗೂ ಸಂಘಟನೆಯ ಅಗತ್ಯತೆಯ ಕುರಿತು ಮಾತನಾಡಿದರು. ಪತ್ರಿಕಾ ವಿತರಕರ ಹಿತಾಸಕ್ತಿ ಕಾಪಾಡುವುದು, ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವುದು ಮತ್ತು ಸಂಘಟನೆಯನ್ನು ತಾಲೂಕು ಮಟ್ಟದಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಸಂಘ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಬೆಳಗಾವಿ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿತರಕರು ಭಾಗವಹಿಸಿ ಸಂಘಟನೆಯ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೇಂದ್ರ ಜಂಬಗಿ ಮಾತನಾಡಿ
ಪತ್ರಿಕೆಗಳ ಪ್ರಸಾರ ಮತ್ತು ಜನಪ್ರಿಯತೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪತ್ರಕರ್ತರು ಸುದ್ದಿ ಸಂಗ್ರಹಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರೆ, ಆ ಸುದ್ದಿಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನು ವಿತರಕರು ನಿರ್ವಹಿಸುತ್ತಾರೆ. ಆದ್ದರಿಂದ ಪತ್ರಿಕಾ ವಿತರಕರಿಗೆ ಸರ್ಕಾರ ಇನ್ನಷ್ಟು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು, ಅವರ ವೃತ್ತಿಗೆ ಸಾಮಾಜಿಕ ಭದ್ರತೆ ಮತ್ತು ಸೂಕ್ತ ಗೌರವ ದೊರೆಯುವಂತಾಗಬೇಕು ಎಂದರು.ಸಭೆಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ 6ನೇ ರಾಜ್ಯ ಸಮ್ಮೇಳನದ ಸಿದ್ಧತೆಗಳು, ವಿತರಕರ ಭಾಗವಹಿಸುವಿಕೆ ಹಾಗೂ ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಲಾಂಛನ ಬಿಡುಗಡೆ ಕಾರ್ಯಕ್ರಮದ ಮೂಲಕ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳಾದ ನಾಗರಾಜ ಕುರಗೋಡಿ, ರಾಮು ಕುದ್ರೆ, ಚಂದ್ರಶೇಖರ ಅಕ್ಕಿ, ಮಂಜುನಾಥ ಪಿಳ್ಳೆ, ಅಶೋಕ ಕಾಳಕೆಟ್ಟಿ, ಆನಂದ ಮತ್ತಿಗಟ್ಟಿ, ಅಶೋಕ ಉಳ್ಳಿಟ್ಟಿ, ಶಿವರಾಜ ಯಲವಿಗಿ, ಆನಂದ ಬಡ್ನಿ, ನಿಂಗಪ್ಪ ಸೇರಿದಂತೆ ಸಂಘದ ಸದಸ್ಯರು ಹಾಗೂ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.