ಶ್ರೀ ಕ್ಷೇತ್ರ ಕದ್ರಿಯಲ್ಲಿ ದೇವಳದ ಸಹಯೋಗದೊಂದಿಗೆ ಸೆ.4 ರಂದು ಕಲ್ಕೂರ ಪ್ರತಿಷ್ಠಾನ ಹಮ್ಮಿಕೊಂಡಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಪೂರ್ವಭಾವಿ ಸ್ಪರ್ಧೆಗಳು ಭಾನುವಾರ ನಗರದ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಜರಗಿತು.
ಮಂಗಳೂರು: ಶ್ರೀ ಕ್ಷೇತ್ರ ಕದ್ರಿಯಲ್ಲಿ ದೇವಳದ ಸಹಯೋಗದೊಂದಿಗೆ ಸೆ.4 ರಂದು ಕಲ್ಕೂರ ಪ್ರತಿಷ್ಠಾನ ಹಮ್ಮಿಕೊಂಡಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಪೂರ್ವಭಾವಿ ಸ್ಪರ್ಧೆಗಳು ಭಾನುವಾರ ನಗರದ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಜರಗಿತು.
ಸ್ಪರ್ಧೆಗಳ ಉದ್ಘಾಟನೆಯನ್ನು ಸ್ಪರ್ಧಾಳು ಮಕ್ಕಳು ದೀಪ ಬೆಳಗುವ ಮೂಲಕ ನೆರವೇರಿಸಿದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಮಕ್ಕಳಲ್ಲಿ ಪುರಾಣದ ಬಗೆಗಿನ ಜ್ಞಾನ, ಮತ್ತು ಧಾರ್ಮಿಕ ಚಿಂತನೆ ವೃದ್ಧಿಸ ಬೇಕೆಂಬ ಮಹತ್ವಾಕಾಂಕ್ಷೆ ಇರಿಸಿಕೊಂಡು ಈ ಸ್ಪರ್ಧೆಗಳನ್ನು ಕಳೆದ ನಾಲ್ಕುವರೆ ದಶಕಗಳಿಂದಲೂ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರೋತ್ಸಾಹ ಲಭಿಸುತ್ತಿರುವುದು ತೃಪ್ತಿ ತಂದಿದೆ ಎಂದರು.
ಹಿರಿಯ ಧಾರ್ಮಿಕ ಮುಖಂಡ ಸುರೇಂದ್ರ ರಾವ್ ಉರ್ವ ಶುಭಹಾರೈಸಿದರು.ಶ್ರೀ ಕೃಷ್ಣನ ಕುರಿತಾದ ಹಾಡುಗಳನ್ನು ಹಾಡುವ ‘ಶ್ರೀ ಕೃಷ್ಣ ಗಾನ ವೈಭವ’ ಸ್ಪರ್ಧೆಯನ್ನು ಶಿಶು, ಬಾಲ, ಕಿಶೋರ ಹಾಗೂ ತರುಣ ಎಂಬ 4 ವಿಭಾಗಗಳಲ್ಲಿ ನಡೆಸಲಾಯಿತು. ‘ರಂಗೋಲಿಯಲ್ಲಿ ಶ್ರೀ ಕೃಷ್ಣ ರಚನಾ ಸ್ಪರ್ಧೆ’ಯನ್ನು 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಂಗೋಲಿ ಪುಡಿ ಬಳಸುವ ಮೂಲಕ ಚುಕ್ಕಿ ರಂಗೋಲಿ ಹಾಗೂ ಹೈಸ್ಕೂಲ್ ಮೇಲ್ಪಟ್ಟು ಮುಕ್ತ ವಿಭಾಗದಲ್ಲಿ ಚುಕ್ಕಿ ರಹಿತ (ಫ್ರೀಹ್ಯಾಂಡ್) ವಿನ್ಯಾಸದಿಂದ ‘ರಂಗೋಲಿಯಲ್ಲಿ ಶ್ರೀ ಕೃಷ್ಣ’ ರಚನಾ ಸ್ಪರ್ಧೆ ನಡೆಯಿತು. ಕೃಷ್ಣನ ಕುರಿತಾದ ಕಥೆ ಹೇಳುವ ‘ಕೃಷ್ಣ ಕಥಾ ಸ್ಪರ್ಧೆ’ಯನ್ನು 1ನೇ ತರಗತಿಯಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ವಿಭಾಗ, 8ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪ್ರೌಢ ಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಯಿತು.
ಪ್ರಮುಖರಾದ ಕದ್ರಿ ನವನೀತ ಶೆಟ್ಟಿ, ಶಿವಪ್ರಸಾದ್ ಪ್ರಭು, ಸುಧಾಕರ ರಾವ್ ಪೇಜಾವರ, ಪಮ್ಮಿ ಕೊಡಿಯಾಲ್ ಬೈಲ್ ಮತ್ತಿತರರು ಇದ್ದರು. ದಯಾನಂದ ಕಟೀಲ್ ಸ್ವಾಗತಿಸಿದರು.