ಸಾರಾಂಶ
ಮುಡಾ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಬಿಜೆಪಿಯವರು ನೂರು ಸುಳ್ಳು ಪೋಣಿಸಿದರೂ ಅದನ್ನು ಸತ್ಯ ಎಂದು ರುಜುವಾತು ಮಾಡಲಾಗದು ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಚನ್ನಪಟ್ಟಣ: ಮುಡಾ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಬಿಜೆಪಿಯವರು ನೂರು ಸುಳ್ಳು ಪೋಣಿಸಿದರೂ ಅದನ್ನು ಸತ್ಯ ಎಂದು ರುಜುವಾತು ಮಾಡಲಾಗದು ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನೂರು ಸುಳ್ಳು ಹೇಳುತ್ತಿದ್ದು, ಏನೇ ಮಾಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪ ನಿಜ ಮಾಡಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ನಾವು ಆರ್ಥಿಕವಾಗಿ ದಿವಾಳಿಯಾಗುತ್ತೇವೆ ಎಂಬ ಪ್ರತಿಪಕ್ಷಗಳ ದುರಾಲೋಚನೆ ಹುಸಿಯಾಗಿದೆ. ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದ್ದು, ಇತ್ತೀಚಿನ ವರದಿಯಿಂದ ಅದು ಸಾಬೀತಾಗಿದೆ. ಪ್ರಸ್ತುತ ಹಣಕಾಸು ಸಾಲಿನ ಆರಂಭಿಕ ಏಳು ತಿಂಗಳ ಅವಧಿಯಲ್ಲಿ ಕರ್ನಾಟಕ ಗಣನೀಯ ಆರ್ಥಿಕ ಪ್ರಗತಿ ಸಾಧಿಸಿದ್ದು, ೧,೦೩,೬೮೩ ಕೋಟಿ ರು. ಆದಾಯ ಸಂಗ್ರಹ ಮಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಫಲ ಎಲ್ಲ ವರ್ಗಗಳಿಗೂ ತಲುಪಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದರು. ಸರ್ವ ಜನಾಂಗದವರನ್ನು ಭೇಟಿ ಮಾಡಿ ಕಷ್ಟಸುಖಗಳನ್ನು ಆಲಿಸಿದರು. ಪಾದಯಾತ್ರೆ ವೇಳೆ ಮಹಿಳೆಯರು ಅನುಭವಿಸುತ್ತಿರುವ ಕಷ್ಟಗಳನ್ನು ಕಂಡು, ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಸೂಚಿಸಿದರು. ಹೀಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.
ಸಿಎಂ ಕೈ ಬಲಪಡಿಸಿ: ಸಿಎಂ ಸಿದ್ದರಾಮಯ್ಯ ಅವರ ಕೈಬಲಪಡಿಸಲು ಈ ಉಪ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಚನ್ನಪಟ್ಟಣದಲ್ಲಿ ನಮ್ಮ ಅಭ್ಯರ್ಥಿಗೆ ಜಯ ಖಚಿತ. ಯೋಗೇಶ್ವರ್ ನೇರ ಮಾತಿನ ವ್ಯಕ್ತಿ, ಬಿಜೆಪಿಯವರಿಂದ ಮೋಸ ಹೋಗಿ ನಮ್ಮ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ಇಲ್ಲಿ ಗೆದ್ದರೆ ರಾಜ್ಯಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಒಳಿತಾಗುವುದು ಎಂದು ಹೇಳಿದರು.