ಯುಪಿಎಯಿಂದಲೇ ರಾಜ್ಯಕ್ಕೆ ಹೆಚ್ಚುಬರ ಅನ್ಯಾಯ: ಎಚ್‌ಡಿಕೆ ಆರೋಪ

| Published : Apr 29 2024, 01:43 AM IST / Updated: Apr 29 2024, 09:42 AM IST

HDK

ಸಾರಾಂಶ

ಬರ ಪರಿಹಾರ ವಿಷಯದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು: ಬರ ಪರಿಹಾರ ವಿಷಯದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಭಾನುವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಲ್ಪ ಪರಿಹಾರ ಕೊಟ್ಟು ರಾಜ್ಯದ ಜನರಿಗೆ ವಂಚನೆ ಎಸಗಿದ್ದು ಯುಪಿಎ ಸರ್ಕಾರ ಎಂದು ಆರೋಪಿಸಿದರು.

 ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 4,860 ಕೋಟಿ ರು. ಕೊಟ್ಟರೆ ಸಾಕು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಈಗ ಕೇಂದ್ರ ಸರ್ಕಾರ 3,454 ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಿದೆ. ಈಗ ನೋಡಿದರೆ ನಾವು 18,172 ಕೋಟಿ ರು. ಕೇಳಿದ್ದು ಎಂದು ಹೇಳುತ್ತಿದ್ದಾರೆ. ಇವರು ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನನಗಿರುವ ಮಾಹಿತಿ ಪ್ರಕಾರ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2004ರಿಂದ 2013ರವರೆಗಿನ ಅವಧಿಯಲ್ಲಿ ವಿವಿಧ ಸಂದರ್ಭದಲ್ಲಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಬರ ಪರಿಹಾರಕ್ಕಾಗಿ ಕೇವಲ ಶೇ.8ರಷ್ಟು ಹಣ ನೀಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ, ಅಂದರೆ 2014ರಿಂದ ಇಲ್ಲಿಯವರೆಗೆ ಈಗ ಬಿಡುಗಡೆ ಆಗಿರುವ 3,454 ಕೋಟಿ ರು. ಹೊರತುಪಡಿಸಿ ಶೇ.38ರಷ್ಟು ಬರ ಪರಿಹಾರ ಹಣ ರಾಜ್ಯಕ್ಕೆ ಬಂದಿದೆ.

 ಕಾಂಗ್ರೆಸ್ ಸರ್ಕಾರ ಶೇ.8ರಷ್ಟು ಕೊಟ್ಟರೆ, ಈಗಿನ ಎನ್‌ಡಿಎ ಸರ್ಕಾರ ಶೇ.38ರಷ್ಟು ಹಣ ಕೊಟ್ಟಿದೆ. ಅನ್ಯಾಯ ಯಾರಿಂದ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಸುಳ್ಳುಗಳನ್ನು ಹೇಳುತ್ತಾ ಅಪಪ್ರಚಾರ ಮಾಡುವುದನ್ನು ಬಿಟ್ಟು ಕೇಂದ್ರದಿಂದ ಬಂದಿರುವ ಹಣವನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡಲಿ ಎಂದು ಕಿವಿಮಾತು ಹೇಳಿದರು.