22ರಿಂದ ಉಪ ಲೋಕಾಯುಕ್ತರ ಪ್ರವಾಸ: ಸಾರ್ವಜನಿಕರಿಂದ ನೇರ ದೂರು ಸ್ವೀಕಾರ

| Published : Apr 19 2025, 12:32 AM IST

22ರಿಂದ ಉಪ ಲೋಕಾಯುಕ್ತರ ಪ್ರವಾಸ: ಸಾರ್ವಜನಿಕರಿಂದ ನೇರ ದೂರು ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಮೂರ್ತಿ ಹಾಗೂ ಉಪ ಲೋಕಾಯುಕ್ತ ಬಿ.ವೀರಪ್ಪ ಏ.22 ರಿಂದ 26 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಏ.24ರಂದು ಜಿಲ್ಲಾಧಿಕಾರಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಸಾರ್ವಜನಿಕರಿಂದ ನೇರವಾಗಿ ದೂರು ಅರ್ಜಿಗಳನ್ನು ಸ್ವೀಕರಿಸುವರು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್.ಬಿ. ಇಟ್ನಾಳ್ ಹೇಳಿದ್ದಾರೆ.

- ವಿವಿಧ ಸ್ಥಳಗಳ ವೀಕ್ಷಣೆ, ಇಲಾಖೆಗಳಿಗೆ ಭೇಟಿ: ಜಿಪಂ ಸಿಇಒ

- - -

ದಾವಣಗೆರೆ: ನ್ಯಾಯಮೂರ್ತಿ ಹಾಗೂ ಉಪ ಲೋಕಾಯುಕ್ತ ಬಿ.ವೀರಪ್ಪ ಏ.22 ರಿಂದ 26 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಏ.24ರಂದು ಜಿಲ್ಲಾಧಿಕಾರಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಸಾರ್ವಜನಿಕರಿಂದ ನೇರವಾಗಿ ದೂರು ಅರ್ಜಿಗಳನ್ನು ಸ್ವೀಕರಿಸುವರು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್.ಬಿ. ಇಟ್ನಾಳ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಉಪ ಲೋಕಾಯುಕ್ತರ ಭೇಟಿ ಹಿನ್ನೆಲೆ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಏ.23ರಂದು ವಿವಿಧ ಸ್ಥಳಗಳ ವೀಕ್ಷಣೆ ಹಾಗೂ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಏ.24ರಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕರಿಸಿ, ನೇರವಾಗಿ ವಿಚಾರಣೆ ನಡೆಸುವರು. ಏ.25ರಂದು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ತುಂಗಭದ್ರಾ ಸಭಾಂಗಣದಲ್ಲಿ ಲೋಕಾಯುಕ್ತದಲ್ಲಿ ಬಾಕಿ ಇರುವ ಬಾಕಿ ಪ್ರಕರಣಗಳನ್ನು ದೂರುದಾರರ ಸಮಕ್ಷಮ ವಿಚಾರಣೆ ನಡೆಸುವರು ಎಂದರು.

ಸಾರ್ವಜನಿಕರು ಸರ್ಕಾರಿ ಇಲಾಖೆಗಳಲ್ಲಿ ಸಲ್ಲಿಸಿದ ಅರ್ಜಿಗಳನ್ನು ವಿಲೆಮಾಡದೇ ಬಾಕಿ ಇಟ್ಟಿರುವ ಬಗ್ಗೆ ಮತ್ತು ದುರಾಡಳಿತ, ಕರ್ತವ್ಯ ನಿರ್ವಹಣೆಯಲ್ಲಿ ವಿಫಲತೆ, ಯೋಜನೆಗಳು ಮತ್ತು ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಫಲತೆ ಮತ್ತು ಅವ್ಯಹಾರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಬಹುದು. ದೂರು ನೀಡಲು ಆಗಮಿಸುವ ಸಾರ್ವಜನಿಕರಿಗೆ ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಿ ಸ್ವೀಕರಿಸಲಾಗುತ್ತದೆ. ಸಾರ್ವಜನಿಕರಿಗೆ ಊಟ, ಆಸನದ ವ್ಯವಸ್ಥೆ ಕಲ್ಪಿಸಲಾಗುವುದು. ಯಾವುದೇ ಆತಂಕವಿಲ್ಲದೆ ಕುಂದುಕೊರತೆ ಅರ್ಜಿಗಳನ್ನು ನೀಡಬಹುದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ, ಅಪರ ಡಿಸಿ ಪಿ.ಎನ್.ಲೋಕೇಶ್, ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಉಪಸ್ಥಿತರಿದ್ದರು.

- - -

-15ಕೆಡಿವಿಜಿ38:

ದಾವಣಗೆರೆಯಲ್ಲಿ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಉಪ ಲೋಕಾಯುಕ್ತರ ಭೇಟಿ ಹಿನ್ನೆಲೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.