ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ಕ್ಷೇತ್ರದ ಗೊಟ್ಟಗೆರೆ ಕೆರೆಯ ಅವ್ಯವಸ್ಥೆ ಕಂಡು ಉಪ ಲೋಕಾಯುಕ್ತರು ಕೆಂಡಾಮಂಡಲ ಆದ ಘಟನೆ ಶುಕ್ರವಾರ ನಡೆಯಿತು.ಕೆರೆಗೆ ಸೇರಿರುವ ಕಲುಷಿತ ನೀರನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು, ಅನುದಾನ ಹಣದ ಸಮರ್ಪಕ ಬಳಕೆಯ ವರದಿ ಸಲ್ಲಿಸಬೇಕು, ಶೀಘ್ರದಲ್ಲೇ ತಂತಿಬೇಲಿ ನಿರ್ಮಾಣ ಮಾಡಿ, ಅಕ್ಕಪಕ್ಕದ ಅಪಾರ್ಟ್ಮೆಂಟ್ ಒಳಚರಂಡಿ ನೀರು ಕೆರೆಗೆ ಸೇರದಂತೆ ಕ್ರಮವಹಿಸಬೇಕು. ಜಲಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಕೆರೆಗಳನ್ನು ಸಂರಕ್ಷಿಸಬೇಕು ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಮತ್ತು ಬಿ.ವೀರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ಕೆರೆಯ ಅವ್ಯವಸ್ಥೆಯ ಬಗ್ಗೆ ವಿ ಸೇವ್ ಸಂಘಟನೆಯು ‘ಕನ್ನಡಪ್ರಭ’ ವರದಿಯನ್ನು ಟ್ಯಾಗ್ ಮಾಡಿ ಹಸಿರು ನ್ಯಾಯಾಧೀಕರಣ ಹಾಗೂ ಲೋಕಾಯುಕ್ತರಿಗೆ ನೀಡಿದ ದೂರಿನನ್ವಯದ ಆಧಾರದ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಂಡು ಕೆರೆಗೆ ಧೀಡಿರ್ ಭೇಟಿ ನೀಡಿದರು. ಸುಂದರ ಕೆರೆಗೆ ಕಲುಷಿತ ನೀರು ಸೇರಿ ಗಬ್ಬು ನಾರುತ್ತಿರುವ ದುಸ್ಥಿತಿ ಕಂಡು ಜಲಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಅಲ್ಲದೇ ಕೆರೆಯ ಒಳಗೆ ಅನಧಿಕೃತವಾಗಿ ಬೋರ್ವೆಲ್‌ಗಳನ್ನು ಅಳವಡಿಸಿ ವಿದ್ಯುಚ್ಛಕ್ತಿ ಪಡೆಯಲಾಗಿದ್ದರೂ ಮಾಹಿತಿ ಇಲ್ಲದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕೆರೆಯ ಪಕ್ಕ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಿದವರು ಯಾರು? ₹11 ಕೋಟಿಗೂ ಹೆಚ್ಚು ಹಣ ಅನುದಾನ ಪಡೆದಿದ್ದರೂ ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಿಲ್ಲ ಏಕೆ? ಕೆರೆಗೆ ಕಲುಷಿತ ನೀರು ಸೇರದಂತೆ ಕ್ರಮವಹಿಸಿಲ್ಲ ಏಕೆ? ಸಾಂಕ್ರಾಮಿಕ ರೋಗರುಜಿನಗಳ ಬಂದರೆ ಹೊಣೆ ಯಾರು? ಎಂದು ಅಧಿಕಾರಿಗಳ ಮೈಚಳಿ ಬಿಡಿಸಿದರು.
ಸ್ಥಳೀಯರು ಒಳಗೊಂಡಂತೆ ವಿಶೇಷ ತಾಂತ್ರಿಕ ಸಮಿತಿಯನ್ನು ರಚಿಸಿ ಜಂಟಿ ಆಯುಕ್ತರು, ಕೆರೆ ಅಭಿವೃದ್ಧಿ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. 15 ದಿನಗಳ ಒಳಗೆ ಕೆರೆಯನ್ನು ಸ್ವಚ್ಛಗೊಳಿಸಬೇಕು. ಒಂದು ವೇಳೆ ನೋಟಿಸ್‌ಗೆ ಉತ್ತರ ನೀಡಲು ವಿಫಲರಾದರೆ ಅಥವಾ ಕೆರೆಯ ಸಂರಕ್ಷಣೆಗೆ ಮುಂದಾಗದೆ ಹೋದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಉಪಲೋಕಾಯುಕ್ತರಿಗೆ ಬೆಂಗಳೂರು ನಗರ ಜಿಲ್ಲಾ ಎಸಿ ರಜನಿಕಾಂತ್, ಜಂಟಿ ಆಯುಕ್ತ ಎಂ.ಅಜಿತ್, ಡಿವೈಎಸ್ಪಿ ನಾಗೇಶ್ ಅಸ್ಲರ್, ಕಾರ್ಯದರ್ಶಿ ಕಿರಣ್, ಜಲಮಂಡಳಿ ಇಇ ಪ್ರದೀಪ್, ಎಇಇ ರಂಗಪ್ಪ, ಕೆರೆ ಅಭಿವೃದ್ಧಿ ಪ್ರಾಧಿಕಾರ ಇಇ ಇಂದ್ರಾಣಿ, ವಲಯ ಆಯುಕ್ತೆ ರಮ್ಯಾ, ಎಇ ಉಷಾ ಇದ್ದರು.ಕೆರೆ ವಾಸನೆಗೆ ತಲೆತಿರುಗಿ ಬಿದ್ದ ಉಪಲೋಕಾಯುಕ್ತ
ಕೆರೆಯ ದುರ್ನಾತ ತಡೆಯದೆ ಉಪಲೋಕಾಯುಕ್ತ ಬಿ.ವೀರಪ್ಪ ತಲೆತಿರುಗಿ ಬಿದ್ದ ಘಟನೆ ನಡೆಯಿತು. ಕೂಡಲೇ ಪೋಲಿಸರು ಕಾರಿನಲ್ಲಿ ವೀರಪ್ಪ ಅವರನ್ನು ಕೂರಿಸಿ ಆರೈಕೆ ಮಾಡಿದರು.