ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ನವನಗರದ ಸೆಕ್ಟರ್ ನಂ.108ರಲ್ಲಿರುವ ನಾಯಿಗಳ ಸಂತಾನ ಹರಣ ಚಿಕತ್ಸಾ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರಗಳಲ್ಲಿನ ನಾಯಿಗಳ ಆರೈಕೆ, ಶಸ್ತ್ರಚಿಕಿತ್ಸೆ, ಚಿಕಿತ್ಸೆಯ ನಂತರದ ಮೇಲ್ವಿಚಾರಣೆ, ಸ್ವಚ್ಛತೆ ಹಾಗೂ ಮೂಲಸೌಲಭ್ಯಗಳನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು ಕೇಂದ್ರದ ವ್ಯವಸ್ಥೆ ಮತ್ತು ಕಾರ್ಯನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಬೀದಿ ನಾಯಿಗಳ ಸಂಖ್ಯೆಯನ್ನು ಮಾನವೀಯ ರೀತಿಯಲ್ಲಿ ನಿಯಂತ್ರಿಸುವಲ್ಲಿ ಸಂತಾನಹರಣ ಕಾರ್ಯಕ್ರಮ ಮಹತ್ವದ ಪಾತ್ರವಹಿಸುತ್ತದೆ. ಪ್ರಾಣಿಗಳ ಕಲ್ಯಾಣದ ಜತೆಗೆ ಸಾರ್ವಜನಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.ಇದಕ್ಕೂ ಪೂರ್ವದಲ್ಲಿ ಮುಚಖಂಡಿ ವ್ಯಾಪ್ತಿಯಲ್ಲಿ ಮುಚಖಂಡಿ ವ್ಯಾಪ್ತಿಯ ಗುಡ್ಡದ ಪ್ರದೇಶದಲ್ಲಿ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿ ನೆಟ್ಟು ಅದರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಮರಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಗಿಡ ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಲು ವ್ಯಾಪಕ ಪ್ರಮಾಣದಲ್ಲಿ ವೃಕ್ಷಾರೋಪಣೆಯಾಗಬೇಕು. ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಸಸಿ ನೆಡುವ ಮೂಲಕ ಆಚರಿಸುವಂತಾಗಬೇಕು ಎಂದರು. ಉಪ ಲೋಕಾಯುಕ್ತರ ಪರ್ಸನಲ್ ಸೆಕರೇಟರಿ ಹಾಗೂ ವಿಶೇಷ ನ್ಯಾಯಾಧೀಶ ಅರವಿಂದ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹೀರೆ, ಲೋಕಾಯುಕ್ತ ಇಲಾಖೆಯ ಎಸ್.ಪಿ ನಂದಗಾಂವಿ, ಡಿವಾಯ್.ಎಸ್.ಪಿ ಸುರೇಶ ರೆಡ್ಡಿ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಶೀಲ್ದಾರ ವಾಸುದೇವ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.