ಜಿಲ್ಲಾಸ್ಪತ್ರೆ, ವಸತಿ ನಿಲಯಕ್ಕೆ ಉಪಲೋಕಾಯುಕ್ತರ ದಿಢೀರ್ ಭೇಟಿ, ಪರಿಶೀಲನೆ

| Published : Jun 17 2024, 01:30 AM IST

ಜಿಲ್ಲಾಸ್ಪತ್ರೆ, ವಸತಿ ನಿಲಯಕ್ಕೆ ಉಪಲೋಕಾಯುಕ್ತರ ದಿಢೀರ್ ಭೇಟಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಯ ಪ್ರತಿ ಹಂತದ ವಾರ್ಡ್‌ಗಳಲ್ಲಿಯೂ ಇರುವ ರೋಗಿ ಮತ್ತು ಅವರ ಸಂಬಂಧಿಕರ ಆರೋಗ್ಯ ವಿಚಾರಿಸುತ್ತದೆ. ಆಸ್ಪತ್ರೆ ಉತ್ತಮ ಚಿಕಿತ್ಸೆ ಒದಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಗದಗ

ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಭಾನುವಾರ ಸಂಜೆ ಗದಗ ನಗರದ ಜಿಲ್ಲಾಸ್ಪತ್ರೆಗೆ ಧಿಡೀರ್ ಭೇಟಿ ನೀಡುವ ಮೂಲಕ ವ್ಯವಸ್ಥೆಯನ್ನು ಪರಿಶೀಲಿಸಿದರು.

ಸಾಮಾನ್ಯ ಮಹಿಳೆಯರ ಹಾಗೂ ಪುರುಷರ ವಾರ್ಡಿಗೆ ಭೇಟಿ ನೀಡಿದ ಉಪಲೋಕಾಯುಕ್ತರು ಒಳರೋಗಿಗಳ ಆರೋಗ್ಯ ವಿಚಾರಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಹಾಗೂ ಔಷಧಿ ಪಡೆಯಲು ಆಸ್ಪತ್ರೆ ನೌಕರರು ಹಣ ಪಡೆಯುತ್ತಾರೆಯೇ ಎಂಬುದನ್ನು ಚಿಕಿತ್ಸೆಗೆ ದಾಖಲಾದ ಒಳರೋಗಿಗಳನ್ನು ವಿಚಾರಿಸಿ ಮಾಹಿತಿ ಪಡೆದರು.

ಆಸ್ಪತ್ರೆಯ ಪ್ರತಿ ಹಂತದ ವಾರ್ಡ್‌ಗಳಲ್ಲಿಯೂ ಇರುವ ರೋಗಿ ಮತ್ತು ಅವರ ಸಂಬಂಧಿಕರ ಆರೋಗ್ಯ ವಿಚಾರಿಸುತ್ತದೆ. ಆಸ್ಪತ್ರೆ ಉತ್ತಮ ಚಿಕಿತ್ಸೆ ಒದಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು.ಈ ವೇಳೆ ಚಿಕಿತ್ಸೆಗೆ ಆಗಮಿಸಿದ ರೋಗಿಯ ಸಂಬಂಧಿಕನೊಬ್ಬ ಮಾತನಾಡಿ, ಆಸ್ಪತ್ರೆಗೆ ದಾಖಲಾಗಲು ಆಗಮಿಸುವ ರೋಗಿಗಳು ಮೇಲ್ಮಹಡಿಗೆ ಆಗಮಿಸಲು ಸಮಸ್ಯೆಯಾಗುತ್ತಿದೆ. ಈಗಿರುವ ವೀಲ್‌ಚೇರ್‌ಗಳ ಸಂಖ್ಯೆ ಕಡಿಮೆಯಿದ್ದು, ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಖ್ಯೆ ಅಧಿಕವಾಗಿದ್ದು, ವೀಲ್‌ಚೇರ್‌ಗಳ ಸಂಖ್ಯೆಗಳನ್ನು ಜಾಸ್ತಿ ಮಾಡಲು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತ ಕೆ.ಎನ್. ಫಣಿಂದ್ರ ಅವರು ತಕ್ಷಣ ಆಸ್ಪತ್ರೆಯ ಮುಖ್ಯಸ್ಥರು ರೋಗಿಗಳಿಗೆ ಮೆಲ್ಮಹಡಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.

ಲೋಕಾಯುಕ್ತ ತಂಡದ ಇನ್ನಿತರ ಸದ್ಯಸರು ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯ ಕುರಿತು ಉಪಲೋಕಾಯುಕ್ತರಿಗೆ ವರದಿ ನೀಡಿದರು. ಅವರ ವರದಿ ಆಧಾರದ ಮೇಲೆ ಜಿಮ್ಸ್ ನಿರ್ದೇಶಕ ಬಸವರಾಜ್ ಬೋಮ್ಮನಹಳ್ಳಿ ಅವರಿಗೆ ಆಸ್ಪತ್ರೆಯ ಮೆಡಿಕಲ್ ವೇಸ್ಟ್‌ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಬೇಕು. ವಾರ್ಡವಾರು ಕಸ ನಿರ್ವಹಣೆ ಹಾಗೂ ಮೆಡಿಕಲ್ ವೇಸ್ಟ ಅನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ನಿರ್ದೇಶಿಸಿದರು.

ಆಸ್ಪತ್ರೆಯ ಕೆಲವು ಶೌಚಾಲಯಗಳ ನಿರ್ವಹಣೆ ಕಳಪೆಯಾಗಿದ್ದು, ಸರಿಯಾಗಿ ನಿರ್ವಹಿಸಬೇಕು. ಇಡಿ ಜಿಲ್ಲಾಸ್ಪತ್ರೆಯ ಸ್ವಚ್ಛತೆ ಹಾಗೂ ಉತ್ತಮ ಚಿಕಿತ್ಸೆಗೆ ಆದ್ಯತೆ ವಹಿಸಬೇಕು ಎಂದು ತಿಳಿಸಿದರು.

ಲೋಕಾಯುಕ್ತ ಸಂಪನ್ಮೂಲ ಅಧಿಕಾರಿ ಪ್ರಕಾಶ ನಾಡಗೇರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಅಧೀಕ್ಷಕ ಸತೀಶ ಚಿಟಗುಬ್ಬಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಎಸ್ಪಿ ಬಿ.ಎಸ್. ನೇಮಗೌಡ, ಜಿಪಂ ಸಿಇಒ ಭರತ್ ಎಸ್., ಎಸಿ ಡಾ. ವೆಂಕಟೇಶ ನಾಯ್ಕ, ಡಿಎಚ್ಒ ಡಾ. ಎಸ್.ಎಸ್. ನೀಲಗುಂದ ಉಪಸ್ಥಿತರಿದ್ದರು.ವಸತಿ‌ ನಿಲಯಗಳಿಗೆ ಉಪಲೋಕಾಯುಕ್ತ ದಿಢೀರ್ ಭೇಟಿ

ಕನ್ನಡಪ್ರಭ ವಾರ್ತೆ ಗದಗ

ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಭಾನುವಾರ ರಾಜೀವ ಗಾಂಧಿ ನಗರದ ವಸತಿ ನಿಲಯ ಹಾಗೂ ಮುಂಡರಗಿ ರಸ್ತೆಯ ವಸತಿ ನಿಲಯಕ್ಕೆ ಅನೀರಿಕ್ಷಿತವಾಗಿ ಭೇಟಿ ನೀಡಿ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಂತರ ಪ್ರವಾಸಿ ಮಂದಿರಕ್ಕೆ ಕರೆಯಿಸಿ ಸಾಕಷ್ಟು ತರಾಟೆಗೆ ತೆಗೆದುಕೊಂಡು ಕೂಡಲೇ ಅಲ್ಲಿನ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಿದರು.ಲೋಕಾಯುಕ್ತ ಸಂಪನ್ಮೂಲ ಅಧಿಕಾರಿ ಪ್ರಕಾಶ ನಾಡಗೇರ, ಲೋಕಾಯುಕ್ತ ಉಪನಿಬಂಧಕ ಅಮರನಾರಾಯಣ ಕೆ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಎಸ್ಪಿ ಬಿ.ಎಸ್. ನೇಮಗೌಡ, ಜಿಪಂ ಸಿಇಒ ಭರತ್ ಎಸ್ ಮುಂತಾದವರು ಹಾಜರಿದ್ದರು.