ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ: ಗುಂಡೂರಾವ್‌

| Published : Feb 11 2024, 01:47 AM IST

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ: ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಜರುಗಿದ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್‍ರೀಚ್ ಸರ್ವೀಸ್ ಸೆಂಟರ್‌ನ ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕ ಉದ್ಘಾಟನೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಈ ಹಿಂದೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಸರಬರಾಜು ಮಾಡುವಲ್ಲಿ ಒಂದಷ್ಟು ತೊಡಕುಗಳಾಗಿವೆ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಉಚಿತ ಸೇವೆ ಸಿಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಡೀ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣಕ್ಕೆ ಮುಂದಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಕುಂದಾಪುರ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಜರುಗಿದ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್‍ರೀಚ್ ಸರ್ವೀಸ್ ಸೆಂಟರ್‌ನ ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಉಚಿತ ಔಷಧ ಸಿಕ್ಕರೆ ಜನೌಷಧಿ ಕೇಂದ್ರದ ಅಗತ್ಯ ಇರುವುದಿಲ್ಲ. ಅದಕ್ಕಾಗಿಯೇ ಔಷಧ ಸರಬರಾಜು ವ್ಯವಸ್ಥೆಗಳನ್ನು ಪೂರ್ತಿಯಾಗಿ ಸುಧಾರಣೆ ಮಾಡುತ್ತಿದ್ದೇವೆ. ಸರ್ಕಾರಿ ಸೇವೆಗಳು ಅತ್ಯಂತ ಸುಲಭವಾಗಿ ಜನಸಾಮಾನ್ಯರಿಗೆ ಸಿಗಬೇಕು. ಕಾರ್ಯಕ್ರಮ ಘೋಷಣೆ ಮಾಡುವುದು ಮುಖ್ಯವಲ್ಲ. ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿದ್ದೇವೆ ಎಂದರು.ಆಸ್ಪತ್ರೆ ಉನ್ನತೀಕರಣಕ್ಕೆ ಆದ್ಯತೆ:ಇಡೀ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ವಹಣೆ ಕಾಣದೆ ಹದಗೆಟ್ಟ ಡಯಾಲಿಸಿಸ್ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇಡೀ ರಾಜ್ಯದಲ್ಲಿ 800 ನೂತನ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವ ಕೆಲಸವನ್ನು ಮಾಡಿದ್ದೇವೆ. ಇದರ ಭಾಗವಾಗಿ ಇಂದು ಕುಂದಾಪುರದಲ್ಲೂ ಪ್ರಾರಂಭಿಸಿದ್ದೇವೆ. 108 ಆಂಬುಲೆನ್ಸ್ ಸೇವೆಯಲ್ಲೂ ಸಾಕಷ್ಟು ಲೋಪದೋಷಗಳಿವೆ. ಆಂಬುಲೆನ್ಸ್ ನಿರ್ವಹಣೆಗಾಗಿ ಹೊಸ ಟೆಂಡರ್ ಅನ್ನು ಕರೆಯುತ್ತಿದ್ದೇವೆ. ಹೊಸ ತಂತ್ರಜ್ಞಾನ ಉಪಯೋಗಿಸಿಕೊಂಡು ಆಧುನೀಕರಣಕ್ಕೆ ಒತ್ತು ಕೊಟ್ಟು ತುರ್ತು, ಗುಣಮಟ್ಟದ ಸೇವೆ ನೀಡಲು ಸಂಪೂರ್ಣ ಬದಲಾವಣೆಗೆ ಮುಂದಾಗಿದ್ದೇವೆ. ಈಗಾಗಲೇ 272 ಹೊಸ ಆಂಬುಲೆನ್ಸ್‌ಗಳನ್ನು ಹಸ್ತಾಂತರಿಸಿದ್ದೇವೆ. ಸುಮಾರು 500 ಕೋಟಿ ರು. ಅನುದಾನವನ್ನು ಈಗಾಗಲೇ ಇರುವ ಆಸ್ಪತ್ರೆಗಳ ಉನ್ನತೀಕರಣಕ್ಕೆ ಇಟ್ಟಿದ್ದೇವೆ. ಈ ಅನುದಾನದಲ್ಲಿ ಕುಂದಾಪುರ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಗಳು ಉನ್ನತೀಕರಣಗೊಳ್ಳಲಿವೆ ಎಂದರು.ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಪುಷ್ಪಲತಾ, ರಾಜೇಶ್ವರಿ ದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಐ.ಪಿ ಗಡಾದ ಉಪಸ್ಥಿತರಿದ್ದರು.ವಾಕ್ ಶ್ರವಣ ಘಟಕವನ್ನು ಕೊಡಮಾಡಿದ ದಾನಿ ಶಿವರಾಮ್ ಪುತ್ರನ್, ರೋಟರಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ, ವೈದ್ಯಾಧಿಕಾರಿ ರೋಬರ್ಟ್ ರೆಬೆಲ್ಲೊ, ಭಾನುಪ್ರಕಾಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.ಆಸ್ಪತ್ರೆಯ ಸಿಬ್ಬಂದಿ ವೀಣಾ, ನಯನ, ಶೋಭಾ ನಾಡಗೀತೆ ಹಾಡಿದರು. ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೊ ಪ್ರಸ್ತಾಪಿಸಿ ಸ್ವಾಗತಿಸಿದರು. ವೀಣಾ ವಂದಿಸಿದರು.