ಸಾರಾಂಶ
ಭದ್ರಾವತಿ: ತಾಲೂಕಿನ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕವಾಗಿ ಆರೋಗ್ಯ ಸೇವೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ಇದುವರೆಗೂ ಹೆಚ್ಚಿನ ಆಸಕ್ತಿ ವಹಿಸಿಲ್ಲ. ಇದರಿಂದಾಗಿ ತಾಲೂಕಿನ ಜನರು ಈಗಲೂ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರವನ್ನು ಅವಲಂಬಿಸಬೇಕಾಗಿದೆ. ತಾಲೂಕಿನಲ್ಲಿ ೧ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ೧ ಸಮುದಾಯ ಆರೋಗ್ಯ ಕೇಂದ್ರ ಹಾಗೂ ೧೧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಈ ಪೈಕಿ ಅಂತರಗಂಗೆ, ಅರಬಿಳಚಿ ಮತ್ತು ದೊಣಬಘಟ್ಟ ಆರೋಗ್ಯ ಕೇಂದ್ರಗಳನ್ನು ೨೪*೭ ಸೇವೆಗೆ ಮೀಸಲಿರಿಸಲಾಗಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಸೇವೆ ಲಭ್ಯವಾಗುತ್ತಿಲ್ಲ. ಹಲವಾರು ಸಮಸ್ಯೆಗಳಿದ್ದು, ಇದರಿಂದಾಗಿ ಬಡ ವರ್ಗದವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ತಾಲೂಕಿನಲ್ಲಿ ಕೃಷಿಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದೆ. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿಗೂ ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳು ಇಲ್ಲವಾಗಿದ್ದು, ಇದರಿಂದಾಗಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವುದು ಮುಂದುವರೆದಿದೆ.
ಅಲ್ಲದೆ ಕೆಲವು ತಪಾಸಣೆಗಳಿಗೆ ಹೊರಗೆ ಖಾಸಗಿ ನರ್ಸಿಂಗ್ ಹೋಂ ಅಥವಾ ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಗತ್ಯವಿರುವಷ್ಟು ವೈದ್ಯರು, ಸಿಬ್ಬಂದಿ ಇಲ್ಲದಿರುವ ಹಿನ್ನಲೆ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಗಂಟೆಗಟ್ಟಲೆ ಕಾಯಬೇಕಾಗಿದೆ.ಖಾಸಗಿ ಹಗಲು ದರೋಡೆ: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಹಲವು ನ್ಯೂನ್ಯತೆಗಳಿಂದ ಬೇಸತ್ತಿರುವ ಬಹುತೇಕ ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ನಗರದ ಕೆಲವು ಖಾಸಗಿ ಆಸ್ಪತ್ರೆಗಳು ಹಗಲು ದರೋಡೆಯಲ್ಲಿ ತೊಡಗಿವೆ. ಬಡ ರೋಗಿಗಳಿಂದ ಸುಲಿಗೆ ಮಾಡುತ್ತಿದ್ದು, ಬಡವರು ಸಾಲಸೋಲ ಮಾಡಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಈ ನಡುವೆ ಸರ್ಕಾರ ಬಡ ವರ್ಗದವರಿಗಾಗಿ ಹಲವಾರು ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅವುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳತ್ತಿಲ್ಲ. ಆರೋಗ್ಯ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳೋ ಅಥವಾ ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯವೋ ತಿಳಿಯದಾಗಿದೆ. ೧೫೦ ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಿ: ಸರ್ಕಾರ ಸುಮಾರು ೫೦ ವರ್ಷಗಳಿಗೂ ಹಳೇಯದಾದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಪ್ರಸ್ತುತ ೧೦೦ ಹಾಸಿಗೆಯಿಂದ ೧೫೦ ಹಾಸಿಗೆಗೆ ಮೇಲ್ದೆರ್ಜೆಗೇರಿಸಬೇಕಾಗಿದೆ. ಅಲ್ಲದೆ ಅಗತ್ಯವಿರುವ ವೈದ್ಯರು, ಸಿಬ್ಬಂದಿ ನೇಮಕಗೊಳಿಸಬೇಕಾಗಿದೆ. ಅಗತ್ಯವಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ತಪಾಸಣಾ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಗುಣಮಟ್ಟದ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿಸಿ: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ನಗರದ ಹೃದಯ ಭಾಗದಲ್ಲಿದ್ದು, ಇದರಿಂದಾಗಿ ತಾಲೂಕಿನ ದೂರದ ಗ್ರಾಮಗಳಲ್ಲಿನ ಬಡ ಜನರು ಹೆಚ್ಚಿನ ಚಿಕಿತ್ಸೆಗೆ ಬಂದು ಹೋಗಲು ಹೆಚ್ಚು ಶ್ರಮಪಡುವಂತಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಪ್ರಸ್ತುತ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಬೇಕಿದೆ.
ಶಾಸಕರಿಂದ ಸರ್ಕಾರಕ್ಕೆ ಪ್ರಸ್ತಾವನೆ : ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್‌ರವರು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ೧೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಭದ್ರಾಕಾಲೋನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಖಾಲಿ ಜಾಗವಿದ್ದು, ತಾಯಿ-ಮಗು ಆಸ್ಪತ್ರೆ ನಿರ್ಮಿಸಲು ಮತ್ತು ದೊಣಬಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸುಮಾರು ೮ ಕೋ.ರು. ವೆಚ್ಚದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದ್ದಾರೆ.