100‌ ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ

| Published : Mar 09 2025, 01:47 AM IST

ಸಾರಾಂಶ

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಕರೆಯಲಾಗಿದ್ದ ಕುಂದುಕೊರತೆ ಸಭೆಯಲ್ಲಿ ಛಲವಾದಿ ಮಹಾಸಭಾ ಹನೂರು ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100‌ ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು‌, ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಪ್ರಜಾಸೌಧ ಕಟ್ಟಡವನ್ನು ಅತಿ ಶೀಘ್ರದಲ್ಲಿ ನಿರ್ಮಾಣ ಮಾಡಬೇಕು ಎಂದು ಛಲವಾದಿ ಮಹಾಸಭಾ ಹನೂರು ತಾಲೂಕು ಅಧ್ಯಕ್ಷ ಬಸವರಾಜು ಒತ್ತಾಯಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರ್ಕಾರ ಬಜೆಟ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಸರ್ಕಾರ ಉಪ ವಿಭಾಗ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು‌, ಕ್ಷೇತ್ರ ವ್ಯಾಪ್ತಿಯ ಮೂರು ಕೆರೆಗಳು ನೀರು ತುಂಬಿಸುವ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು ಒಟ್ಟಾರೆ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

2018ರಲ್ಲಿ ಹನೂರು ತಾಲೂಕು ಘೋಷಣೆಗಷ್ಟೇ ಸೀಮಿತವಾಗಿದೆ. ಇದುವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ, ಕಚೇರಿಗಳು ಹನೂರು ಪಟ್ಟಣಕ್ಕೆ ಸ್ಥಳಾಂತರ ಆಗದೆ ಇರುವುದರಿಂದ ಕಾಡಂಚಿನ ಗ್ರಾಮಗಳ ಜನರು ಪ್ರತಿನಿತ್ಯ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಕಚೇರಿಗೆ ಬಂದು ಅಲೆದಾಡುತ್ತಿದ್ದಾರೆ. ತಮ್ಮ ಕೆಲಸ ಕಾರ್ಯಗಳ ಸಂಬಂಧ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿರುವ ರೆಕಾರ್ಡ್ ರೂಂನಲ್ಲಿ ಕಳ್ಳತನವಾಗಿ ಮೂರು ವರ್ಷಗಳು ಕಳೆದಿದೆ. ಇದುವರೆಗೂ ಪೊಲೀಸರು ಕಳ್ಳರನ್ನು ಪತ್ತೆ ಮಾಡಿಲ್ಲ ಮೇಲ್ನೋಟಕ್ಕೆ ಅಧಿಕಾರಿಗಳೇ ದುಡ್ಡಿಗಾಗಿ ಕಳ್ಳತನ ಮಾಡಿಸಿರಬಹುದು ಎಂಬ ಅನುಮಾನ ಕಾಡುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹನೂರು ತಾಲೂಕು ಕೇಂದ್ರಕ್ಕೆ ಬರುವ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಶಾಸಕರು ಅಧಿಕಾರಿಗಳ ಸಭೆ ಕರೆದು ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಪ್ರತಿಯೊಂದು ಕಚೇರಿಗಳಲ್ಲೂ ಅಧಿಕಾರಿಗಳ ಕೊರತೆ ನೀಗಿಸಬೇಕು ಎಂದರು. ಹನೂರು ತಾಲೂಕು ಕೇಂದ್ರವಾಗಿ 8 ವರ್ಷಗಳು ಕಳೆಯುತ್ತಿದ್ದರು ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ ಕರೆಯದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಸಿ ಸಭೆ ಕರೆಯಬೇಕು ಎಂದು ತಿಳಿಸಿದರು.

ಹನೂರು ಕ್ಷೇತ್ರದ ಶಾಸಕರು ಅಭಿವೃದ್ಧಿಯಿಂದ ಗೆದ್ದಿಲ್ಲ ಬದಲಾಗಿ ಹಣ ಬಲದಿಂದ ಗೆದ್ದಿರುವುದರಿಂದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗಿಲ್ಲ, ಇವರೇ ವಾರದಲ್ಲಿ ಎರಡು ದಿನ ಮಾತ್ರ ಬರುವುದರಿಂದ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು?. ಸಭೆಯಲ್ಲಿ ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶ್ರೀಕಂಠ ಮೂರ್ತಿ ನಿರ್ದೇಶಕ ನಿಂಗರಾಜು ಸದಸ್ಯರಾದ ಪ್ರಭುಸ್ವಾಮಿ, ಬಸವಲಿಂಗಯ್ಯ ಮೇಘರಾಜು, ಅಂಕರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.