60 ವರ್ಷಗಳ ನಂತರ ನಗರಸಭೆಯಾಗಿ ಮೇಲ್ದರ್ಜೆಗೆ; ನೂತನ ನಾಮಫಲಕ ಅನಾವರಣ

| Published : Sep 05 2025, 01:00 AM IST

ಸಾರಾಂಶ

1964ರ ಜನವರಿ 1ರಂದು ಮದ್ದೂರು ಪುರಸಭೆಯಾಗಿ ರೂಪಾಂತರಗೊಂಡಿತು. 60 ವರ್ಷಗಳ ನಂತರ ನಗರಸಭೆಯಾಗಿ ಮೇಲ್ದರ್ಜೆಗೊಂಡಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಎಂ.ಉದಯ್ ಪುರಸಭೆ ಜನ ಪ್ರತಿನಿಧಿಗಳೊಂದಿಗೆ ನಗರಸಭೆ ನಾಮಫಲಕ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೊಂಡ ಹಿನ್ನೆಲೆಯಲ್ಲಿ ನೂತನ ನಾಮಫಲಕವನ್ನು ಗುರುವಾರ ಅನಾವರಣಗೊಳಿಸಲಾಯಿತು.

1964ರ ಜನವರಿ 1ರಂದು ಮದ್ದೂರು ಪುರಸಭೆಯಾಗಿ ರೂಪಾಂತರಗೊಂಡಿತು. 60 ವರ್ಷಗಳ ನಂತರ ನಗರಸಭೆಯಾಗಿ ಮೇಲ್ದರ್ಜೆಗೊಂಡಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಎಂ.ಉದಯ್ ಪುರಸಭೆ ಜನ ಪ್ರತಿನಿಧಿಗಳೊಂದಿಗೆ ನಗರಸಭೆ ನಾಮಫಲಕ ಅನಾವರಣಗೊಳಿಸಿದರು.

ಪುರಸಭೆ ಆವರಣದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ನಾಮಫಲಕ ಅನಾವರಣಗೊಳಿಸಿದರು. ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಗೊರವನಹಳ್ಳಿ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಕೆಲವರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಸುದ್ದಿಗಾರರ ಎದುರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ವ್ಯಾಪ್ತಿಗೆ ಈ ನಾಲ್ಕು ಗ್ರಾಮಗಳನ್ನು ಸೇರ್ಪಡೆ ಮಾಡಿರುವ ಬಗ್ಗೆ ಗ್ರಾಪಂಗಳ ಸಾಮಾನ್ಯ ಸಭೆಗಳಲ್ಲಿ ಅನುಮೋದನೆ ಪಡೆದು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ರಾಜ್ಯಪಾಲರು ಅಂಕಿತ ಹಾಕಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಬಳಿಕವಷ್ಟೇ ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡೋಕೆ ಮುಂದಾದರೇ ಅದನ್ನು ವಿರೋಧ ಮಾಡೋದು ಕ್ಷೇತ್ರದಲ್ಲಿ ಮಾಮೂಲಿಯಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಗುರಿ. ನನ್ನ ಅಭಿವೃದ್ಧಿ ಕಾರ್ಯಗಳಲ್ಲಿ ವಿರೋಧ ವ್ಯಕ್ತಪಡಿಸಿದರೇ ರಾಜಿಯಾಗುವ ಮಾತೆ ಇಲ್ಲ ಎಂದು ಸಿಡಿಮಿಡಿಗೊಂಡರು.

ಈ ಹಿಂದೆ ರೈತ ಮುಖಂಡರು ಹಾಗೂ ಸಾರ್ವಜನಿಕರು ವಿರೋಧ ಮಾಡಿದರು. ಆಗ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಎಂದು ಹೇಳಿದ್ದೆ. ಆದರೆ, ಯಾರು ಸಹ ಮಾತುಕತೆಗೆ ಬರಲಿಲ್ಲ. ಈಗ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಅವರು ಸ್ವತಂತ್ರರಿದ್ದಾರೆ ಅವರು ಎಲ್ಲಿಗೆ ಬೇಕಾದರೂ ಹೋಗಲಿ ನಮ್ಮ ಉದ್ದೇಶ ಪಟ್ಟಣದ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದರು.

ಮದ್ದೂರು ಪಟ್ಟಣ ಹತ್ತಾರು ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ. ರಸ್ತೆ, ಒಳಚರಂಡಿ, ಫುಟ್ ಪಾತ್, ನಾಲೆಗಳ ನಿರ್ವಹಣಾ ಕೊರತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಂದ ಪಟ್ಟಣ ನರಳುತ್ತಿದೆ. ಸಾರ್ವಜನಿಕರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಹೀಗಾಗಿ ಮದ್ದೂರು ಪಟ್ಟಣವನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕಲಿದೆ. ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸಿದ್ದರಾಜು, ಪ್ರಮೀಳಾ, ಸಚ್ಚಿನ್, ಸುರೇಶ್ ಕುಮಾರ್, ಮಹೇಶ್, ಸರ್ವಮಂಗಳ, ಲತಾ ರಾಮು, ರತ್ನಮ್ಮ, ಸುಮಿತ್ರಾ, ಆಯಿಷಾ ಜುನೇದ್, ಸಿದ್ದರಾಜು, ನಾಮ ನಿರ್ದೇಶನ ಸದಸ್ಯ ಮೋಹನ್, ಕೃಷ್ಣಪ್ಪ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್ ಪುರಸಭಾ ಸಿಬ್ಬಂದಿ ಇದ್ದರು.