ಕೋಲಾರ ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೆ: ಸಚಿವರ ಭರವಸೆ

| Published : Jan 27 2025, 12:47 AM IST

ಸಾರಾಂಶ

ಈಗಾಗಲೇ ರಾಯಚೂರು ಹಾಗೂ ಹಾಸನ ನಗರಸಭೆಗಳನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಕೆ ಮಾಡಲಾಗಿದೆ. ಅದರ ಜೊತೆಗೆ ಕೋಲಾರವನ್ನು ಸಹ ಮಹಾನಗರ ಪಾಲಿಕೆಯಾಗಿ ಮಾಡಬೇಕೆಂಬ ಆಶಯ ಹೊಂದಿದ್ದು ಪ್ರಯತ್ನ ಮುಂದುವರೆದಿದೆ. ಮುಂಬರುವ ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡುವ ಉದ್ದೇಶವಿದೆ. ಇದಕ್ಕಾಗಿ ಕೆಲವು ನಿಯಮಗಳ ಪಾಲನೆ ಮಾಡಬೇಕಾಗಿದೆ, ಮುಖ್ಯವಾಗಿ ೩ ಲಕ್ಷ ಜನಸಂಖ್ಯೆ ಇರಬೇಕೆಂಬ ನಿಯಮವಿದೆ, ಕೋಲಾರ ನಗರವ್ಯಾಪ್ತಿಯಲ್ಲಿ ೨,೫ ಲಕ್ಷ ಜನಸಂಖ್ಯೆ ಇದೆ, ಆದರೂ ಮುಂದಿನ ಬಜೆಟ್‌ನಲ್ಲಿ ಕೋಲಾರ ನಗರಸಭೆಯನ್ನು ಮಹಾನಗರಪಾಲಿಕೆ ಮಾಡಲು ಪ್ರಸ್ತಾಪ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಯಚೂರು ಹಾಗೂ ಹಾಸನ ನಗರಸಭೆಗಳನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಕೆ ಮಾಡಲಾಗಿದೆ. ಅದರ ಜೊತೆಗೆ ಕೋಲಾರವನ್ನು ಸಹ ಮಹಾನಗರ ಪಾಲಿಕೆಯಾಗಿ ಮಾಡಬೇಕೆಂಬ ಆಶಯ ಹೊಂದಿದ್ದು ಪ್ರಯತ್ನ ಮುಂದುವರೆಸಿರುವುದಾಗಿ ಹೇಳಿದರು. ಕೆಜಿಎಫ್‌ನಲ್ಲಿ ಟೌನ್‌ಶಿಪ್‌

ಈಗಾಗಲೇ ಕೆ.ಜಿ.ಎಫ್ ನಗರದಲ್ಲಿ ಟೌನ್‌ಶಿಫ್ ಮಾಡಲು ಹಿಂದಿನ ಸರ್ಕಾರದ ಪ್ರಸ್ತಾವನೆ ಕಾಂಗ್ರೆಸ್ ಸರ್ಕಾರವು ಕಾರ್ಯಗತಗೊಳಿಸಲು ಮುಂದಾಗಿದೆ, ಅದಕ್ಕೆ ಪೂರಕವಾಗಿ ೩೦೦ ಎಕರೆ ಜಾಗದಲ್ಲಿ ಟಾನ್‌ಶಿಫ್ ಇಂಟಿಗ್ರೇಟ್ ಅನುಷ್ಠಾನಕ್ಕೆ ಮುಂದಾಗಿದೆ. ಜಿಲ್ಲೆಗೆ ಎತ್ತಿನ ಹೊಳೆ ಯೋಜನೆಯ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ, ಯೋಜನೆಯಲ್ಲಿ ಉದ್ಭವವಾಗಿರುವ ತೊಡಕುಗಳನ್ನು ಕಾನೂನು ಬದ್ದವವಾಗಿ ಪರಿಹರಿಸುವ ಮೂಲಕ ಪ್ರಗತಿಯ ಹಾದಿಯಲ್ಲಿದೆ ಎಂದು ಹೇಳಿದರು..

ಕೆ.ಸಿ.ವ್ಯಾಲಿ ನೀರಿನಿಂದ ಜಿಲೆಯ ಕೃಷಿ ಮಣ್ಣಿನ ಆರೋಗ್ಯ ಹಾಳಾಗಿಲ್ಲ, ಕಳೆದ ಹತ್ತಾರು ವರ್ಷದಿಂದ ಬರಗಾಲ ಉಂಟಾಗಿತ್ತು, ಸಾವಿರಾರು ಅಡಿ ಕೊಳವೆ ಬಾವಿಯ ನೀರಿನಿಂದ ಕೃಷಿ ಮತ್ತು ತೋಟಗಾರಿಕೆ ಮಾಡಲಾಗುತ್ತಿತ್ತು, ಈ ಸಂದರ್ಭದಲ್ಲಿ ಬಳಸಲಾಗಿರುವ ಅತಿಹೆಚ್ಚಿನ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳಿಂದ ವ್ಯತ್ಯಾಸವಾಗಿರಬಹುದು ಹೊರತಾಗಿ ಕೆ.ಸಿ.ವ್ಯಾಲಿ ನೀರಿನಿಂದ ಮಣ್ಣಿನ ಆರೋಗ್ಯ ಹಾಳಾಗಿಲ್ಲ ಎಂದು ಸಮರ್ಥಿಸಿಕೊಂಡರು. ಹೈನುಗಾರಿಕೆಗೆ ಪ್ರೋತ್ಸಾಧನ

ಹೈನುಗಾರಿಕೆ ಪ್ರೋತ್ಸಾಹಿಸುವ ದೆಸೆಯಲ್ಲಿ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‌ಗೆ ೫ ರೂ ಪ್ರೋತ್ಸಾಹ ಧನ ವಿತರಣೆಗೆ ಮರುಚಾಲನೆ ನೀಡಲು ಶೀಘ್ರದಲ್ಲೇ ಕ್ರಮ ಜರುಗಿಸಲಾಗುವುದು, ಸರ್ಕಾರದಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ, ರಾಜ್ಯಾದಾದ್ಯಂತ ಹಲವಾರು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಲೆ ಇದೆ, ಅದೇ ರೀತಿ ಜಿಲ್ಲೆಯಲ್ಲಿ ಹಲವಾರು ಯೋಜನೆಯ ಕಾಮಗಾರಿಗಳು ಅನುಷ್ಠಾನಗೊಳಿಸಲು ಗುದ್ದಲಿ ಪೂಜೆಗಳು ನಡೆಯುತ್ತಲೆ ಇದೆ, ಯಾವುದೇ ಅಭಿವೃದ್ದಿ ಕಾಮಗಾರಿಗಳನ್ನು ಸ್ಥಗಿಸಗೊಳಿಸಿಲ್ಲ ಎಂದರು. ಡಿಸಿಸಿ ಬ್ಯಾಂಕ್‌ ಚುನಾವಣೆಗೆ ಕ್ರಮ

ಡಿಸಿಸಿ ಬ್ಯಾಂಕ್ ಮತ್ತು ಹಾಲು ಒಕ್ಕೂಟದ ಆಡಳಿತ ಮಂಡಳಿಯ ಚುನಾವಣೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ, ಡಿಸಿಸಿ ಬ್ಯಾಂಕ್ ಮೇಲೆ ಅವ್ಯವಹಾರದ ಆರೋಪದ ಜೊತೆಗೆ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಮಂಚೇನಹಳ್ಳಿ ಮತ್ತು ಚೇಳೂರು ಎರಡು ಕ್ಷೇತ್ರಗಳಾಗಿ ಹೊಸದಾಗಿ ಘೋಷಿಸಿದೆ. ನ್ಯಾಯಾಲಯದಲ್ಲಿನ ಪ್ರಕರಣಗಳು ಇತ್ಯಾರ್ಥವಾದ ಕೊಡಲೇ ಈ ಕ್ಷೇತ್ರಗಳ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಸಿ,ನಿರ್ದೇಶಕರನ್ನು ಆಯ್ಕೆ ಮಾಡಿ, ಆಡಳಿತ ಮಂಡಳಿ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಮೈಕ್ರೋ ಫೈನಾನ್ಸ್‌ಗೆ ಕಡಿವಾಣ

ರಾಜ್ಯದಲ್ಲಿ ಪ್ರಚಲಿತವಾಗಿರುವ ಮೈಕ್ರೋ ಫೈನಾನ್ಸ್ ಬಗ್ಗೆ ನನಗೂ ಆತಂಕವಿದೆ. ಈ ಬಗ್ಗೆ ಜಿಲ್ಲೆಯಲ್ಲಿ ಯಾರಿಗಾದರೂ ಮೈಕ್ರೋ ಫೈನಾನ್ಸಿಯರ್‌ಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ನೇರವಾಗಿ ಜಿಲ್ಲಾಧಿಕಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದೂರುಸಲ್ಲಿಸಬಹುದು, ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಶಾಸಕ ಡಾ.ಕೊತ್ತೂರು.ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿ.ಇ.ಒ ಪ್ರವೀಣ್ ಬಾಗೇವಾಡಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್ ಇದ್ದರು.