ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟವನ್ನು ತಿಳಿದು ನಡೆಯಬೇಕು. ನಮ್ಮ ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ನಮ್ಮ ಜವಾಬ್ದಾರಿಗಳನ್ನು ಸಹ ನಾವು ಅರಿತುಕೊಳ್ಳಬೇಕು. ನಮ್ಮ ದೇಶದ ಭವಿಷ್ಯ ನಮ್ಮ ಯುವಜನತೆ ಮತ್ತು ವಿದ್ಯಾರ್ಥಿಗಳ ಕೈಯಲ್ಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸ್ವತಂತ್ರ ದೇಶ ಭಾರತದಲ್ಲಿ ಅಭಿವೃದ್ಧಿ ಜೊತೆಗೆ ಏಕತೆ, ಶಾಂತಿ, ಸಮಾನತೆ ಮತ್ತು ಸೌಹಾರ್ದತೆ ಕಾಪಾಡಿಕೊಂಡು ಪ್ರತಿಯೊಬ್ಬರು ಬದುಕು ನಡೆಸಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿಯಿಂದ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ದಿನವಾದ ಇಂದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ಹಾಗೂ ಸಂತೋಷದ ದಿನವಾಗಿದೆ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ಪವಿತ್ರ ದಿನದಂದು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟವನ್ನು ತಿಳಿದು ನಡೆಯಬೇಕು ಎಂದರು.

ನಮ್ಮ ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ನಮ್ಮ ಜವಾಬ್ದಾರಿಗಳನ್ನು ಸಹ ನಾವು ಅರಿತುಕೊಳ್ಳಬೇಕು. ನಮ್ಮ ದೇಶದ ಭವಿಷ್ಯ ನಮ್ಮ ಯುವಜನತೆ ಮತ್ತು ವಿದ್ಯಾರ್ಥಿಗಳ ಕೈಯಲ್ಲಿದೆ. ಅವರು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ ಹಾಗೂ ದೇಶಭಕ್ತಿಯೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಧ್ವಜಾರೋಹಣ ಮಾಡಿದ ತಹಸೀಲ್ದಾರ್ ಬಿ.ಎಸ್.ಶ್ರೇಯಸ್, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಏಕತೆ ಮತ್ತು ಅಖಂಡತೆ ಕಾಪಾಡುವ ಸಂಕಲ್ಪದೊಂದಿಗೆ ಈ ಸ್ವಾತಂತ್ರ್ಯ ದಿನ ಆಚರಿಸೋಣ ಎಂದರು.

ಈ ವೇಳೆ ತಾಪಂ ಇಒ ಎಂ.ಕೆ.ಸುಷ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವೈ.ತಿಮ್ಮೇಗೌಡ, ಪುರಸಭಾ ಮುಖ್ಯಾಧಿಕಾರಿ ಅಶೋಕ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್, ದಲಿತ ಮುಖಂಡ ಬಸ್ತಿ ರಂಗಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ತೆರ್ನೇನಹಳ್ಳಿ ಬಲದೇವ್, ಸಾರ್ವಜನಿಕರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಂಜುಳಾ, ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್, ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಪುರ ಪ್ರಮುಖರು ಉಪಸ್ಥಿತರಿದ್ದರು.

--------------

15ಕೆಎಂಎನ್ ಡಿ30

ಕೆ.ಆರ್.ಪೇಟೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಸಕ ಎಚ್.ಟಿ.ಮಂಜು ಮಾತನಾಡಿದರು.ನಾಲೆಗಳಿಗೆ ನೀರು ಹರಿಸುವುದು ಆದ್ಯತೆ:

ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಹೇಮಾವತಿ ನೀರಿನ ಬಗ್ಗೆ ಪ್ರಸ್ತಾಪಿಸಿದ ಶಾಸಕ ಎಚ್.ಟಿ.ಮಂಜು, ತಾಲೂಕಿನ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಅತ್ಯಂತ ಅವಶ್ಯಕ. ರೈತರ ಹಿತದೃಷ್ಟಿಯಿಂದ ನಾಲೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದರು.

ನೂತನ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆಗೆ ಹೇಮೆ ನೀರಿನ ಬಗ್ಗೆ ಮಾತನಾಡಿದ್ದು, ಈಗಾಗಲೇ ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸಲು ಅಗತ್ಯ ನೀರು ಬಿಡುಗಡೆ ಮಾಡಲಾಗಿದೆ. ಹೇಮಾವತಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಪರಿಗಣಿಸಿ ನದಿ ಅಣೆಕಟ್ಟೆ ಮಂದಗೆರೆ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಲು ಕ್ರಮವಹಿಸಲಾಗಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ ನಾವು ಸಹ ಖುಷಿಯಿಂದ ಇರಬಹುದು ಎಂದು ಶಾಸಕರು ತಿಳಿಸಿದರು.