ಗ್ರಾಮ ಸೌಧದಲ್ಲಿ ಸಾರ್ವಜನಿಕರ ಸಮಸ್ಯೆ ಕುರಿತ ನಿಷ್ಪಕ್ಷಪಾತ ಚರ್ಚೆ ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು ಒಟ್ಟಾರೆ ಗ್ರಾಮದ ಅಭಿವೃದ್ಧಿಯಾಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಗ್ರಾಮ ಸೌಧದಲ್ಲಿ ಸಾರ್ವಜನಿಕರ ಸಮಸ್ಯೆ ಕುರಿತ ನಿಷ್ಪಕ್ಷಪಾತ ಚರ್ಚೆ ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು ಒಟ್ಟಾರೆ ಗ್ರಾಮದ ಅಭಿವೃದ್ಧಿಯಾಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ಶಿರಾ ತಾಲೂಕಿನ ಭೂಪಸಂದ್ರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ಚುನಾವಣೆಗಳು ದುಬಾರಿ ಆಗುತ್ತಿರುವುದರಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಎಲ್ಲರ ಪ್ರೀತಿ ವಿಶ್ವಾಸದಿಂದ ಆಯ್ಕೆಯಾಗಿ ಬರಬೇಕು. ಆಗ ಮಾತ್ರ ಸಂವಿಧಾನ ಯಶಸ್ವಿಗೊಳ್ಳಲು ಸಾಧ್ಯ ಎಂದ ಅವರು ಒಂದು ವರದಿಯ ಪ್ರಕಾರ ೨೦೭೫ ವೇಳೆಗೆ ಕುಡಿಯಲು ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಹೇಳಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಿರಾದಲ್ಲಿ ಬರಗಾಲ ಇರಬಾರದು ಶಾಶ್ವತ ಬರಗಾಲ ಮುಕ್ತ ತಾಲೂಕಾಗಬೇಕು ಎಂಬ ಉದ್ದೇಶದಿಂದ ಹೇಮಾವತಿ, ಭದ್ರ, ಎತ್ತಿನ ಹೊಳೆಯಿಂದ ನೀರು ತರಲು ಕ್ರಮ ಕೈಗೊಂಡಿದ್ದೇನೆ. ತುಮಕೂರು ಜಿಲ್ಲೆಯ ಜನರ ಪುಣ್ಯದಿಂದ ಮೇಕೆದಾಟು ಯೋಜನೆಯ ಸಂಬಂಧ ಇದ್ದ ಪ್ರಕರಣವನ್ನು ಸುಪ್ರಿಂ ಕೋರ್ಟ್ ವಜಾ ಮಾಡಿ ಇದರಿಂದ ನಮ್ಮ ತಾಲೂಕಿಗೆ ಅನುಕೂಲವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಕನಸು ಗ್ರಾಮಗಳು ಉದ್ದಾರವಾಗದ ಹೊರತು ದೇಶ ಅಭಿವೃದ್ಧಿಯಾಗುವುದಿಲ್ಲ ಎಂಬುದು. ಆ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿ ಬಗ್ಗೆ ಕುಳಿತು ಚರ್ಚಿಸಲು, ಸಾರ್ವಜನಿಕರ ಕೆಲಸ ಕಾರ್ಯ ಮಾಡಲು ಒಂದು ಸುಸಜ್ಜಿತ ಕಟ್ಟಡ ಬೇಕು. ಅಂತಹ ಕಟ್ಟಡಗಳನ್ನು ಶಿರಾ ತಾಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಮಾಡುವ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಶ್ರಮಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದರು.ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ಗ್ರಾಮ ಪಂಚಾಯಿತಿಗೆ ಒಂದು ಶಕ್ತಿ ಕೊಟ್ಟಿದ್ದಾರೆ. ಹಲವಾರು ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಶಾಸಕರ ಅನುದಾನದಿಂದ ಹಣ ನೀಡುತ್ತಿರುವುದು ಶ್ಲಾಘನೀಯ. ಗ್ರಾಮ ಪಂಚಾಯಿತಿಗೆ ಮೊದಲು ಒಂದು ಕಟ್ಟಡ ಅವಶ್ಯಕ. ಅಂತಹ ಕಟ್ಟಡ ನಿರ್ಮಾಣವಾದರೆ ಗ್ರಾಮ ಅಭಿವೃದ್ಧಿ ಸಾಧ್ಯ. ಇದರಿಂದ ಜನಪರವಾದ ನಿಲುವು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭೂಪಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ ಎಲ್ ಜಗದೀಶ್ ಗೌಡ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಹರೀಶ್, ಪಿಡಿಓ ರಮೇಶ್ ನಿಗಮದ, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್, ಬಗರಕುಂ ಕಮಿಟಿ ಸದಸ್ಯ ನವೀನ್ ಯಲದಬಾಗಿ, ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷರಾದ ರಂಗನಾಥ್ ಗೌಡ, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ್, ಮುಖಂಡರಾದ ತೇಜೆಶ್ವರ್, ಕುಮಾರ್ ಮಾಷ್ಟರ್, ರಂಗನಾಥ್, ತಿಪ್ಪೇಸ್ವಾಮಿ, ರೇಣುಕಾ ಪ್ರಸಾದ್, ಮುನಿರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.