ಯುಪಿಐ ವ್ಯವಸ್ಥೆಯನ್ನೇ ನಂಬಿ ಜೇಬಿನಲ್ಲಿ ಹಣವಿಲ್ಲದೆ ಬಸ್ ಹತ್ತುವ ಪ್ರಯಾಣಿಕರು. ಬಸ್ ಎರಡು-ಮೂರು ಕಿಮೀ ಸಾಗಿದ ಬಳಿಕ ಪಾವತಿ ವಿಫಲವಾದರೆ ಕೈಯಲ್ಲಿ ಹಣವಿಲ್ಲದೆ ಮುಜುಗರ ಅನುಭವಿಸುವಂತಾಗಿದೆ.

ರಾಘು ಕಾಕರಮಠ

ಅಂಕೋಲಾ: ಚಿಲ್ಲರೆ ಸಮಸ್ಯೆಗೆ ತೆರೆ ಎಳೆದು, ಸಾರಿಗೆ ಬಸ್ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ಪರಿಚಯಿಸಲಾಗಿದ್ದ ಯುಪಿಐ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯೇ ಇದೀಗ ಪ್ರಯಾಣಿಕರಿಗೆ ಕಿರಿಕಿರಿ ತಂದೊಡ್ಡುತ್ತಿದೆ.

ಟಿಕೆಟ್‌ಗಾಗಿ ಮೊಬೈಲ್‌ನಲ್ಲಿ ಪಾವತಿ ಮಾಡಿದರೆ ಹಣ ಕಡಿತವಾಗುತ್ತದೆ. ಆದರೆ ಟಿಕೆಟ್ ಮಾತ್ರ ಕೈ ಸೇರುವುದಿಲ್ಲ. ಹಣವೂ ಹೋಯಿತು. ಟಿಕೆಟ್ ಕೂಡ ಬರಲಿಲ್ಲ ಎಂಬ ಪರಿಸ್ಥಿತಿ ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.

ಸಾರಿಗೆ ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಇಲ್ಲದೆ, ಕೇವಲ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಷಣಾರ್ಧದಲ್ಲಿ ಟಿಕೆಟ್ ಪಡೆಯುವ ವ್ಯವಸ್ಥೆ ಆರಂಭವಾದಾಗ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಕಳೆದ ಎರಡ್ಮೂರು ತಿಂಗಳಿಂದ ಯುಪಿಐ ಪಾವತಿಯಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಎಚ್ಚೆತ್ತ ಕೆಲವೊಂದು ಡಿಪೋಗಳಲ್ಲಿ ಯುಪಿಐ ಪಾವತಿಯನ್ನು ಅಧಿಕಾರಿಗಳ ಆದೇಶದ ಅನ್ವಯ ರದ್ದುಪಡಿಸಲಾಗಿದೆ. ಮೊಬೈಲ್‌ನಿಂದ ಹಣ ಕಡಿತವಾದರೂ ಟಿಕೆಟ್ ಜನರೇಟ್ ಆಗದಿರುವುದು ಪ್ರಮುಖ ಸಮಸ್ಯೆಯಾಗಿದೆ. ಮತ್ತೊಂದೆಡೆ, ಕಡಿತವಾದ ಹಣ ಮರುಪಾವತಿಯಾಗಲು ಎರಡು ದಿನಗಳವರೆಗೆ ಕಾಯಬೇಕಾದ ಸ್ಥಿತಿ ಎದುರಾಗುತ್ತಿದೆ. ಇದರಿಂದ ಕೆಲವೆಡೆ ಪ್ರಯಾಣಿಕರು ನಿರ್ವಾಹಕರೊಂದಿಗೆ ವಾಗ್ವಾದ ನಡೆಸುವ ಪ್ರಸಂಗವೂ ಉಂಟಾಗುತ್ತಿದೆ.

ಈ ಮೊದಲು ಕ್ಯು ಆರ್ ಕೋಡ್ ಹೊಂದಿರುವ ಯುಪಿಐ ಟ್ಯಾಗ್‌ಅನ್ನು ನಿರ್ವಾಹಕರಿಗೆ ನೀಡಲಾಗಿತ್ತು. ಅದಕ್ಕೆ ಪ್ರಯಾಣಿಕರು ಸ್ಕ್ಯಾನ್ ಮಾಡುತ್ತಿದ್ದರು. ಆದರೆ ಇಲಾಖೆ ಈ ಟ್ಯಾಗ್‌ಅನ್ನು ರದ್ದು ಪಡಿಸಿ ಟಿಕೇಟ್ ಯಂತ್ರದಲ್ಲಿಯೇ ಜನರೇಟ್ ಆಗುವ ಕ್ಯು ಆರ್ ಕೋಡ್‌ಗೆ ಪಾವತಿ ಮಾಡುವ ವ್ಯವಸ್ಥೆ ತರಲಾಗಿದೆ. ಕೆಲವೊಮ್ಮೆ ಆ್ಯಪ್‌ನ ತಾಂತ್ರಿಕ ಸಮಸ್ಯೆ ಹಾಗೂ ನೆಟವರ್ಕ್ ಸಮಸ್ಯೆಯಿಂದ ಟಿಕೆಟ್ ಬರುತ್ತಿಲ್ಲ. ಟಿಕೆಟ್ ಬರದೇ ಇದ್ದರೆ ಇನ್ನೊಬ್ಬರಿಗೆ ಟಿಕೆಟ್ ಕೊಡಲು ಸಾಧ್ಯವಾಗದ ಅಸಹಾಯಕ ಸ್ಥಿತಿ ನಿರ್ವಾಹಕರದ್ದಾಗಿದೆ.

ಇನ್ನೂ ಗಂಭೀರ ಸಂಗತಿಯೆಂದರೆ, ಯುಪಿಐ ವ್ಯವಸ್ಥೆಯನ್ನೇ ನಂಬಿ ಜೇಬಿನಲ್ಲಿ ಹಣವಿಲ್ಲದೆ ಬಸ್ ಹತ್ತುವ ಪ್ರಯಾಣಿಕರು. ಬಸ್ ಎರಡು-ಮೂರು ಕಿಮೀ ಸಾಗಿದ ಬಳಿಕ ಪಾವತಿ ವಿಫಲವಾದರೆ ಕೈಯಲ್ಲಿ ಹಣವಿಲ್ಲದೆ ಮುಜುಗರ ಅನುಭವಿಸುವಂತಾಗಿದೆ. ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಮಧ್ಯದಾರಿಯಲ್ಲೇ ಇಳಿಸಬೇಕಾದ ಪರಿಸ್ಥಿತಿಯೂ ಎದುರಾಗಿದೆ.

ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಿದ್ದ ಯುಪಿಐ: ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಎಲ್ಲರಿಗೂ ಟಿಕೆಟ್ ನೀಡುವುದರ ಜತೆಗೆ, ಪ್ರತಿಯೊಬ್ಬರಿಗೂ ಸರಿಯಾದ ಚಿಲ್ಲರೆ ನೀಡುವುದು ನಿರ್ವಾಹಕರಿಗೆ ಸವಾಲಾಗಿತ್ತು. ಚಿಲ್ಲರೆ ವಿಚಾರದಲ್ಲಿ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ, ಟಿಕೆಟ್ ಪಡೆಯದೆ ತಪ್ಪಿಸಿಕೊಳ್ಳುವ ಯತ್ನ, ಚಿಲ್ಲರೆ ಮರಳಿಸದಿರುವ ಆರೋಪಗಳೂ ಕೇಳಿಬರುತ್ತಿದ್ದವು.ಡಿಜಿಟಲ್ ಪೇಮೆಂಟ್‌ಗೆ ಪ್ರಯಾಣಿಕರ ಒಲವು

ಗೂಗಲ್ ಪೇ, ಫೋನ್‌ ಪೇ, ಪೇಟಿಎಂ ಸೇರಿದಂತೆ ವಿವಿಧ ಡಿಜಿಟಲ್ ಪೇಮೆಂಟ್ ಆ್ಯಪ್‌ಗಳ ಬಳಕೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿಯೂ ಯುಪಿಐ ಪಾವತಿ ವ್ಯವಸ್ಥೆ ಇರಬೇಕು ಎಂಬುದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು. ವ್ಯವಸ್ಥೆ ಆರಂಭವಾದ ಬಳಿಕ ಪ್ರಯಾಣಿಕರು ಹಾಗೂ ನಿರ್ವಾಹಕರಲ್ಲೂ ಅನುಕೂಲದ ಭಾವನೆ ಮೂಡಿತ್ತು. ಆದರೆ ತಾಂತ್ರಿಕ ದೋಷಗಳು ಪದೇಪದೇ ಕಾಣಿಸಿಕೊಳ್ಳುತ್ತಿರುವುದು ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವಂತೆ ಮಾಡಿದೆ. ಶೇ. 17ರಷ್ಟು ಯುಪಿಐ ಪಾವತಿ

ಅಂಕೋಲಾ ಸಾರಿಗೆ ಡಿಪೋದಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಟಿಕೆಟ್ ಹಣ ಸಂಗ್ರಹದಲ್ಲಿ ಅಂದಾಜು ಶೇ. 17ರಷ್ಟು ಮೊತ್ತ ಯುಪಿಐ ಮೂಲಕ ಪಾವತಿಯಾಗುತ್ತಿತ್ತು. ಆದರೆ ಇತ್ತೀಚಿನ ತಾಂತ್ರಿಕ ಸಮಸ್ಯೆಯಿಂದಾಗಿ ಯುಪಿಐ ಪಾವತಿಯ ಪ್ರಮಾಣ ಕುಸಿದಿರುವುದು ಗಮನಾರ್ಹವಾಗಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ಇಚ್ಛಾಶಕ್ತಿ ತೋರಲಿ: ಯುಪಿಐ ಸೌಲಭ್ಯದಿಂದ ಬಸ್ ಪ್ರಯಾಣವೂ ಸ್ಮಾರ್ಟ್ ಆಗಲಿದೆ ಎಂಬ ಆಶಾಭಾವನೆ ಮೂಡಿತ್ತು. ಆದರೆ ಈಗ ಅದೇ ವ್ಯವಸ್ಥೆ ಪ್ರಯಾಣಿಕರಿಗೆ ಉರುಳಾಗಿದೆ. ಎಲ್ಲರ ಬಳಿಯೂ ನಗದು ಇರುವುದಿಲ್ಲ. ಯುಪಿಐ ನಂಬಿ ಬಸ್ ಹತ್ತಿದರೆ ಮಧ್ಯದಾರಿಯಲ್ಲಿ ಸಂಕಷ್ಟ ಎದುರಾಗುವಂತಾಗಿದೆ. ಈ ಅವ್ಯವಸ್ಥೆಯನ್ನು ಸಾರಿಗೆ ಇಲಾಖೆ ಕೂಡಲೇ ಬಗೆಹರಿಸಲು ಇಚ್ಛಾಶಕ್ತಿ ಮೆರೆಯಬೇಕು ಎಂದು ಗಣಪತಿ ನಾಯ್ಕ, ಅವರ್ಸಾ ತಿಳಿಸಿದರು.

ತಾಂತ್ರಿಕ ಸಮಸ್ಯೆ: ಯುಪಿಐ ಟಿಕೆಟ್‌ಗೆ ತಾಂತ್ರಿಕವಾಗಿ ಸಮಸ್ಯೆಯಾಗಿದೆ. ಈ ಬಗ್ಗೆ ಶಿರಸಿ ವಿಭಾಗೀಯ ಕಚೇರಿಗೆ ವರದಿ ಮಾಡಲಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ಬಂದಿದೆ. ತಾಂತ್ರಿಕ ಕಾರಣದಿಂದ ಆಗುತ್ತಿರುವ ಅಡಚಣೆಗೆ ಪ್ರಯಾಣಿಕರು ಸಹ ಇಲಾಖೆಯೊಡನೆ ಸಹಕರಿಸುವಂತಾಗಬೇಕು ಎಂದು ಅಂಕೋಲಾ ಸಾರಿಗೆ ಡಿಪೋದ ಘಟಕ ವ್ಯವಸ್ಥಾಪಕರಾದ ಸಂತೋಷ ವೆರ್ಣೇಕರ ತಿಳಿಸಿದರು.