ಸಾರಾಂಶ
ಕಲಗಾರು ಲಕ್ಷ್ಮೀನಾರಾಯಣ ಹೆಗಡೆ.
ಕನ್ನಡಪ್ರಭ ವಾರ್ತೆ ತಾಳಗುಪ್ಪಈ ಬಾರಿಯ ಮಳೆಯ ಆರ್ಭಟದಿಂದಾಗಿ ಮಲೆನಾಡಿನ ಅಡಕೆ ಬೆಳೆಗಾರರು ತತ್ತರಿಸುವಂತಾಗಿದೆ. ಸಾಂಪ್ರದಾಯಿಕ ಅಡಕೆ ಬೆಳೆಗಾರರು ಹಿಂದೆಂದೂ ಕಾಣದ ಕೊಳೆ ರೋಗದಿಂದ ಬದುಕಿನ ತುತ್ತನ್ನೇ ಕಳೆದುಕೊಂಡಿದ್ದಾರೆ.
ತಿಂಗಳುಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ಅಡಕೆ ಗೊನೆಗಳಿಗೆ ಔಷಧ ಸಿಂಪಡಿಸಲೂ ಸಾಧ್ಯವಾಗದ ಪರಿಸ್ಥಿತಿಯುಂಟಾಗಿ ವಾಡಿಕೆಯ ಫಸಲಿನ ಶೇ. 35ರಷ್ಟು ಬೆಳೆಯೂ ಕೈಗೆ ಸಿಗದಂತಾಗಿದೆ. ಸಾಗರ ತಾಲೂಕಿನ ಎಲ್ಲಾ ಹೋಬಳಿ ಪ್ರದೇಶದಲ್ಲಿ ಕೊಳೆ ರೋಗ ವ್ಯಾಪಿಸಿದೆ. ತಾಳಗುಪ್ಪ ಹೋಬಳಿಯ ಬಚ್ಚಗಾರು, ತಲವಾಟ, ಹಿರೇಮನೆ, ಭಾರಂಗ ಹೋಬಳಿಯ ಅಡ್ಮನೆ, ಅರಳಗೋಡು, ಬಿಳಿಗಾರು, ಕಟ್ಟಿನಕಾರು ಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.ಅತಿ ಸಣ್ಣ ಬೆಳೆಗಾರರೊಬ್ಬರು 11 ಗುಂಟೆ ತೋಟದಿಂದ 15 ಡಬ್ಬಗಳಷ್ಟು ಕೊಳೆ ಅಡಕೆಯನ್ನು ನಜ್ಜೂರು ಸಾಬರಿಗೆ ಕೇವಲ 65 ರೂಪಾಯಿಯಂತೆ ಮಾರಿದ್ದಾರೆ. ಇನ್ನೂ ಸುಮಾರು ಅಷ್ಟೇ ಅಂಗಳದಲ್ಲಿದೆ ಎಂದರೆ ಬೆಳೆಗಾರರ ಪರಿಸ್ಥಿತಿಯ ಅರಿವಾಗಬಹುದು. ಮೂರು ಗೊನೆಯುಳ್ಳ ಅಡಕೆ ಫಸಲಿನಲ್ಲಿ ಕನಿಷ್ಟ ಒಂದು ಗೊನೆ ಯಷ್ಟಾದರೂ ಸಿಕ್ಕುವಂತಾದರೆ ಅದೇ ಪುಣ್ಯ ಎನ್ನುವಂತಾಗಿದೆ.
ಗಬ್ಬು ನಾರುತ್ತಿವೆ:ಉದುರಿದ ಅಡಕೆಗಳಲ್ಲಿ ಹೆಬ್ಬೆಟ್ಟಿಗಿಂತಲೂ ದೊಡ್ಡ ಅಡಿಕೆಗಳನ್ನು ಹರಸಾಹಸ ಮಾಡಿ ಕೆಲವರು ಸುಲಿದು ಬೇಯಿಸಿ ನೀರಿನಲ್ಲಿ ಮುಳುಗಿಸಿಟ್ಟರೆ, ಇನ್ನೂ ಕೆಲವರು ಹಾಗೇ ಮನೆಯಂಗಳದಲ್ಲಿ ಹರಡಿದ್ದಾರೆ. ಕೊಳೆ ರೋಗಕ್ಕೆ ತುತ್ತಾದ ಅಡಕೆಗಳ ಮೇಲೆ ಮುಗ್ಗಲು ಫಂಗಸ್ ಕಟ್ಟಿ ಕೊಳೆಯುತ್ತಿರುವುದರಿಂದ ಮನೆ ತುಂಬಾ ಗಬ್ಬುನಾತ ಬೀರುತ್ತಿದೆ. ಹಾಗಾಗಿ ಆರ್ಥಿಕವಾಗಿ ಬಿದ್ದ ಹೊಡೆತ ಹಾಗೂ ಮನೆಯಂಗಳದ ವಾಯು ಮಾಲಿನ್ಯದಿಂದಾಗಿ ಬೆಳೆಗಾರನ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮವಾದಲ್ಲಿ ಆಶ್ಚರ್ಯವೇನೂ ಇಲ್ಲ.
ಸರ್ಕಾರದ ನೀತಿ ಏನು?:ತೋಟಗಾರಿಕಾ ಇಲಾಖೆಯಲ್ಲಿ ಹಿಂದಿನಿಂದಲೂ ಸಬ್ಸಿಡಿ ದರದಲ್ಲಿ 5 ರಿಂದ 6 ಕಿ.ಮೀ. ತುತ್ತ ವಿತರಿಸುವ ಕ್ರಮ ಇದೆ. ಆದರೆ, ಈಚೆಗೆ ಅದನ್ನು ಎಲ್ಲಾ ತೋಟ ಗಾರಿಕಾ ಬೆಳೆಗಳಿಗೆ ವಿಸ್ತರಿಸಿ, ರೈತರು ಖರೀದಿಸಿದ ಬಿಲ್ ಹಾಗೂ ಅಗತ್ಯ ದಾಖಲೆ ಪಡೆದು ಶೇ.30 ರಷ್ಟನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾವಣೆ ಮಾಡಲಾಗುತ್ತಿದೆ. ಸಾಗರ ತಾಲೂಕಿನಲ್ಲಿ ಅಂದಾಜು 13,500 ಹೆಕ್ಟೇರ್ ಅಡಕೆ ತೋಟಗಳಿವೆ. ಸರ್ಕಾರದಿಂದ ಕೇವಲ 2.35 ಲಕ್ಷ ಅನುದಾನ ಮಾತ್ರ ದೊರೆ ತಿದ್ದು, ಅಧಿಕಾರಿಗಳು ಮೊದಲು ಬಂದವರಿಗೆ ಆದ್ಯತೆ ನೀಡುವ ಕ್ರಮ ಅನುಸರಿಸುತ್ತಿದ್ದಾರೆ. ತೋಟಗಾರಿಕಾ ಇಲಾಖೆಗೆ ಅಡಕೆ ಬೆಳೆ ಹಾನಿ ಸಮೀಕ್ಷೆ ಸೂಚನೆ ಇಲ್ಲ ಎಂದು ಇಲಾಖೆ ಅಧಿಕಾರಿಗಳ ಮಾಹಿತಿ.
ಭರಪೂರ ಕೊಳೆ ಅಡಕೆ ವ್ಯಾಪಾರಕೊಳೆ ಅಡಕೆ ವ್ಯಾಪಾರಸ್ಥರಿಗಂತೂ ಈ ಬಾರಿ ಎಲ್ಲೆಂದರಲ್ಲಿ ಅಡಕೆಗಳ ರಾಶಿ ರಾಶಿ ದೊರಕುತ್ತಿದೆ. ಕೃಷಿ ತಜ್ಞರ ಸಲಹೆ ಹಾಗೂ ಸ್ವಾನುಭವದಿಂದ ಮರಕ್ಕೆ ರೋಗ ತಗುಲದಂತೆ ಎಚ್ಚರಿಕೆ ವಹಿಸಿದ ಬೆಳೆಗಾರರು ಉದುರಿದ ಕೊಳೆ ಅಡಕೆಗಳನ್ನು ಹೆಕ್ಕಿ ಮಳೆ ಬಂದ ಸಮಯದಲ್ಲಿ ಹೊಳೆ ಹಳ್ಳಗಳಿಗೆ ಸುರಿದಿದ್ದಾರೆ. ಸ್ವಲ್ಪ ಬೆಳವಣಿಗೆ ಕಂಡಿರುವ ಅಡಕೆಯನ್ನು ಸ್ಥಳೀಯ ಕೊಳೆ ಅಡಕೆ ವ್ಯಾಪಾರಿಗಳಿಗೆ ಡಬ್ಬಗಳಲ್ಲಿ ತುಂಬಿ 60-70 ರೂಪಾಯಿಗಳಿಗೆ ಮಾರುತ್ತಿದ್ದಾರೆ. ಇನ್ನು, ಸಿರ್ಸಿಯ ತೋಟಗಾರ್ ಸೊಸೈಟಿಯು ಆಗಸ್ಟ್ 15ರಿಂದ ಕೊಳೆ ಅಡಕೆಯನ್ನು ಟೆಂಡರ್ ಮೂಲಕ ಖರೀದಿಸುವ ವ್ಯವಸ್ಥೆ ಕಲ್ಪಿಸುತ್ತಿದೆ.