ಭದ್ರಾ ಮೇಲ್ದಂಡೆ ಅಬ್ಬಿನಹೊಳಲು ಭೂಸ್ವಾಧೀನ ತಲೆನೋವು ನಿವಾರಣೆ

| Published : Mar 08 2024, 01:49 AM IST

ಭದ್ರಾ ಮೇಲ್ದಂಡೆ ಅಬ್ಬಿನಹೊಳಲು ಭೂಸ್ವಾಧೀನ ತಲೆನೋವು ನಿವಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕೆ ತೊಡರಾಗಿದ್ದ ಅಬ್ಬಿನಹೊಳಲು ಭೂಸ್ವಾಧೀನದ ತಲೆನೋವು ಗುರುವಾರ ನಿವಾರಣೆಯಾಗಿದ್ದು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ಕಳೆದ 8 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಭೂಮಿ ವಶದ ಕಾರ್ಯ ಕಾನೂನಾತ್ಮಕ ಹೆಜ್ಜೆ ಮೂಲಕ ಈಡೇರಿದಂತಾಗಿದೆ.

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕೆ ತೊಡರಾಗಿದ್ದ ಅಬ್ಬಿನಹೊಳಲು ಭೂಸ್ವಾಧೀನದ ತಲೆನೋವು ಗುರುವಾರ ನಿವಾರಣೆಯಾಗಿದ್ದು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ಕಳೆದ 8 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಭೂಮಿ ವಶದ ಕಾರ್ಯ ಕಾನೂನಾತ್ಮಕ ಹೆಜ್ಜೆ ಮೂಲಕ ಈಡೇರಿದಂತಾಗಿದೆ.

ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಅಜ್ಜಂಪುರ ಬಳಿಯ ವೈ ಜಂಕ್ಷನ್‌ನಲ್ಲಿ 1.7 ಕಿಮೀ ಕಾಲುವೆ ನಿರ್ಮಾಣಕ್ಕೆ 33 ಮಂದಿ ರೈತರ 44 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಭೂಮಿ ಸ್ವಾಧೀನವಾಗಿ ಪಹಣಿ ಕೂಡಾ ಜಲ ಸಂಪನ್ಮೂಲ ಇಲಾಖೆ ಹೆಸರಲ್ಲಿತ್ತು. ಎಲ್ಲ ರೈತರು ಹಣ ಪಡೆದಿದ್ದು, ಮೂರ್ನಾಲ್ಕು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಕಾಲುವೆ ನಿರ್ಮಾಣದ ಕಾಮಗಾರಿಗೆ ಸಮಸ್ಯೆಯುಂಟಾಗಿತ್ತು. ಭೂ ಸ್ವಾಧೀನ ಸಮಸ್ಯೆ ಬಗೆ ಹರಿಸಿ ಕಾಲುವೆ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸುವಂತೆ ನೀರಾವರಿ ಹೋರಾಟ ಸಮಿತಿಗಳು ಆಗ್ರಹಿಸಿದ್ದವು. ಆದರೆ ಸರ್ಕಾರ ಮನಸ್ಸು ಮಾಡಿರಲಿಲ್ಲ.

ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಮಾರ್ಚ್ 3 ರಂದು ಅಬ್ಬಿನಹೊಳಲು ಗ್ರಾಮಕ್ಕೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅಲ್ಲಿನ ರೈತರೊಂದಿಗೆ ಮಾತುಕತೆ ನಡೆಸಿದ್ದರು. ಪರಿಹಾರದ ವಿಚಾರವದಲ್ಲಿ ಏನಾದರೂ ಅಸಮಧಾನ ಇದ್ದರೆ ಸರ್ಕಾರದ ಮಟ್ಟದಲ್ಲಿ ಕುಳಿತು ಬಗೆಹರಿಸಿಕೊಳ್ಳೋಣ. ಆದರೆ ಕಾಮಗಾರಿಗೆ ಅಡ್ಡಿ ಪಡಿಸುವುದು ಒಳ್ಳೆಯದಲ್ಲ. ಕಾನೂನಾತ್ಮಕ ಹೆಜ್ಜೆ ಇಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಮರು ದಿನವೇ ಮಾರ್ಚ ನಾಲ್ಕರಂದು ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್ , ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರನ್ನು ಭೇಟಿ ಮಾಡಿ ಕಾಮಗಾರಿ ಆರಂಭಿಸಲು ಸೂಕ್ತ ಭದ್ರತೆ ಒದಗಿಸುವಂತೆ ಕೋರಿದ್ದರು. ಈ ಹಿನ್ನಲೆ ಗುರುವಾರ 140 ಮಂದಿ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ಮುಖ್ಯ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್ ಭದ್ರತೆ ನಡುವೆ ಕಾಮಗಾರಿ ಆರಂಭಿಸಿದ್ದಾರೆ. ಈ ವೇಳೆ ಕೆಲ ರೈತರು ಸ್ಥಳಕ್ಕೆ ಆಗಮಿಸಿ ಅಡ್ಡಿಪಡಿಸಲು ಮುಂದಾಗಿದ್ದಾರೆ. ಹಾಲಿ ಈರುಳ್ಳಿ ಸೇರಿದಂತೆ ಇತರೆ ಫಸಲು ಇದ್ದು ಕೊಯ್ಲು ಮಾಡಿದ ನಂತರ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಉಪ ಮುಖ್ಯಮಂತ್ರಿಗಳು ಹೇಳಿದಂತೆ ಹೆಚ್ಚಿನ ಪರಿಹಾರ ನೀಡಿಕೆ ಸಮಸ್ಯೆ ಬಗೆ ಹರಿಸುವಂತೆ ವಿನಂತಿಸಿದ್ದಾರೆ.

ಡಿಸಿಎಂ ಅವರು ಬೆಂಗಳೂರಿನಲ್ಲಿ ಸಭೆ ಕರೆಯುವ ಪ್ರಸ್ತಾಪ ಮಾಡಿದ್ದಾರೆ. ಅವರ ಸಮ್ಮುಖದಲ್ಲಿ ಎಲ್ಲವೂ ಬಗೆ ಹರಿಯಲಿದೆ. ಸರ್ಕಾರದ ನಿರ್ದೇಶನದಂತೆ ಕಾಮಗಾರಿ ಆರಂಭಿಸಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಒತ್ತಡ ನಮ್ಮ ಮೇಲಿದೆ ಎಂದು ಮುಖ್ಯ ಇಂಜಿನಿಯರ್ ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಭೂಮಿ ವಶಪಡಿಸಿಕೊಳ್ಳುವ ಈ ಪ್ರಕ್ರಿಯೆ ಎಂಟು ವರ್ಷದ ಹಿಂದೆ ಮಾಡಿದ್ದರೆ ಇಷ್ಟೊತ್ತಿಗೆ ಭದ್ರಾ ನೀರನ್ನು ಇಡೀ ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ತುಂಬಿಸಬಹುದಿತ್ತು. ಕಾಮಗಾರಿ ಪುನಹ ಆರಂಭವಾಗಿರುವುದು ಚಿತ್ರದುರ್ಗ ಬ್ರಾಂಚ್ ಕಾಲುವೆ ನಿರ್ಮಾಣ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳುವ ಭರವಸೆಗಳು ಮೂಡಿದಂತಾಗಿದೆ.