ಏ.13ರಂದು ಜಗಳೂರು ತಾಲೂಕು ಬಂದ್: ಗುರುಮೂರ್ತಿ

| Published : Mar 28 2024, 12:50 AM IST

ಸಾರಾಂಶ

ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ಶೀಘ್ರ ಜಾರಿ ಮಾಡಲು ಒತ್ತಾಯಿಸಿ, ಏ.13ಕ್ಕೆ ಜಗಳೂರು ತಾಲೂಕು ಸ್ವಯಂಪ್ರೇರಿತ ಬಂದ್ ಮಾಡಲಾಗುವುದು ಎಂದು ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಹಕ್ಕೊತ್ತಾಯ ನಿರ್ಣಯ ಮಾಡಿದ್ದಾರೆ.

ಜಗಳೂರು: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ಶೀಘ್ರ ಜಾರಿ ಮಾಡಲು ಒತ್ತಾಯಿಸಿ, ಏ.13ಕ್ಕೆ ಜಗಳೂರು ತಾಲೂಕು ಸ್ವಯಂಪ್ರೇರಿತ ಬಂದ್ ಮಾಡಲಾಗುವುದು ಎಂದು ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಹಕ್ಕೊತ್ತಾಯ ನಿರ್ಣಯ ಮಾಡಿದ್ದಾರೆ.

ತಾಲೂಕಿನ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ದಾಸೋಹ ಸಂಸ್ಕೃತಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಮಗ್ರ ನೀರಾವರಿಗಾಗಿ ಒತ್ತಾಯಿಸಿ ರೈತ ಹಕ್ಕೊತ್ತಾಯ ಸಮಾವೇಶದಲ್ಲಿ ಅವರು ಮಾತನಾಡಿದರು. ನೀರಿಗಾಗಿ ನಡೆಯುವ ಜಗಳೂರು ಪಟ್ಟಣ ಬಂದ್ ಶಾಂತಿಯುತವಾಗಿ ಇರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಇದು ಮೊದಲ ಹೆಜ್ಜೆಯಾಗಿದೆ ಎಂದರು.

ಮುಖ್ಯ ಅತಿಥಿ ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಶಾಸಕರಾಗಿದ್ದ ಸಂದರ್ಭ ಭದ್ರಾ ಮೇಲ್ದಂಡೆ ಯೋಜನೆ, 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಸಚಿವರಿಗೆ ಒತ್ತಡ ತಂದು ಅಭಿವೃದ್ಧಿಗೆ ಸಹಕರಿಸಲಾಗಿತ್ತು. ಸಮಗ್ರ ನೀರಾವರಿಗೆ ಜಾರಿ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದೆ ಎಂದರು.

ಚಿತ್ರದುರ್ಗ ಭದ್ರಾಮೇಲ್ದಂಡೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಎಂ. ಲಿಂಗಾರೆಡ್ಡಿ ಮಾತನಾಡಿ, ಜಗಳೂರು ಬಂದ್ ಯಶಸ್ವಿಗಾಗಿ ನಾವು ಕೈ ಜೋಡಿಸುತ್ತೆವೆ. ಇಂದೊಂದು ಪರಿಣಾಮಕಾರಿ ಹೋರಾಟವಾಗಲಿ ಎಂದು ಹೇಳಿದರು.

ಮೊಳಕಾಲ್ಮೂರು ತಾಲೂಕು ರೈತ ಮುಖಂಡರಾದ ಬೇಡರೆಡ್ಡಿಳ್ಳಿ ಶಿವಾರೆಡ್ಡಿ, ರಾಜ್ಯ ರೈತ ಮುಖಂಡ ಅರುಣಕುಮಾರ್ ಕುರಡಿ, ಹಿರಿಯ ದಲಿತ ಮುಖಂಡ ಬಿ.ಎಂ. ಹನುಮಂತಪ್ಪ, ಎಲ್.ಎಚ್. ಅರುಣಕುಮಾರ್, ದಾವಣಗೆರೆ ಅನುಭವ ಮಂಟಪದ ಅವರಗೆರೆ ರುದ್ರಮುನಿ, ಕಮ್ಯುನಿಸ್ಟ್ ಮುಖಂಡ ಪಾಲೇನಹಳ್ಳಿ ಪ್ರಸನ್ನಕುಮಾರ್ ಇನ್ನಿತರ ಮುಖಂಡರು ಬಂದ್‌ನಲ್ಲಿ ಭಾಗವಹಿಸುವುದಾಗಿ ಬೆಂಬಲ ವ್ಯಕ್ತಪಡಿಸಿದರು.

ನೀಲಗುಂದ ಗುಡ್ಡದ ಮಠದ ಶ್ರೀ ಚನ್ನಬಸವ ದೇವರು, ಮುಸ್ಟೂರು ದಾಸೋಹ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಅಧ್ಯಕ್ಷತೆ ಹಿರಿಯ ರೈತ ಹೋರಾಟಗಾರ ಗಡಿಮಾಕುಂಟೆ ಬಸವರಾಜಪ್ಪ ವಹಿಸಿದ್ದರು. ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್. ಓಬಳೇಶ್, ನಾಗಲಿಂಗಪ್ಪ, ಮಹಾಲಿಂಗಪ್ಪ, ಇನ್ನಿತರ ರೈತ ಮುಖಂಡರು ಭಾಗವಹಿಸಿದ್ದರು.