ಸಾರಾಂಶ
ತಾಲೂಕಿನ ಕುಣಿಕೆನಹಳ್ಳಿಯ ಶ್ರೀ ಕೆಂಪಮ್ಮ ದೇವಿಯ ಮತ್ತು ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ರದ್ದು ಮಾಡಿ ತಾಲೂಕು ಆಡಳಿತ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಕುಣಿಕೆನಹಳ್ಳಿಯ ಶ್ರೀ ಕೆಂಪಮ್ಮ ದೇವಿಯ ಮತ್ತು ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ರದ್ದು ಮಾಡಿ ತಾಲೂಕು ಆಡಳಿತ ಆದೇಶಿಸಿದೆ.ಶ್ರೀ ಕೆಂಪಮ್ಮ ದೇವಿ ದೇವಾಲಯದ ಜಾತ್ರಾ ಮಹೋತ್ಸವ ಏ. 5ರಿಂದ ಪ್ರಾರಂಭವಾಗಬೇಕಿತ್ತು. ಜಾತ್ರೆ ಸಂಬಂಧ ಪರಿಶಿಷ್ಠ ಜಾತಿಯ ಜನರು ವಾಸಿಸುತ್ತಿರುವ ಕಾಲೋನಿಗೆ ಮಾಹಿತಿ ನೀಡದೇ ಜಾತ್ರಾ ಕಾರ್ಯಕ್ರಮದಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಅದೇ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಜಗದೀಶ್ ಎಂಬುವವರು ಪೊಲೀಸ್ ಮತ್ತು ಕಂದಾಯ ಇಲಾಖಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ತಾಲೂಕು ದಂಡಾಧಿಕಾರಿ ಎನ್. ಎ.ಕುಂಇ ಅಹಮದ್ ತಾಲೂಕು ಕಚೇರಿಯಲ್ಲಿ ಶಾಂತಿ ಸಭೆ ಕರೆದಿದ್ದರು. ಆ ವೇಳೆ ದಲಿತ ಸಮುದಾಯದ ಜಗದೀಶ್ ರವರ ಬೆಂಬಲಿಗರು ಮತ್ತು ಗ್ರಾಮದ ಗುಡಿಗೌಡರಾದ ಗಂಗಾಧರ್ ಸೇರಿದಂತೆ ಗ್ರಾಮದ ಹಲವಾರು ಮಂದಿ ಶಾಂತಿ ಸಭೆಗೆ ಆಗಮಿಸಿದ್ದರು.
ಜಗದೀಶ್ ಪರಿಶಿಷ್ಟ ಜಾತಿಯವರನ್ನು ಜಾತ್ರೆಗೆ ಕರೆಯದೇ ಜಾತ್ರೆ ನಡೆಸುತ್ತಿದ್ದಾರೆ. ಅಲ್ಲದೇ ಗ್ರಾಮದಲ್ಲಿ ನಮಗೆ ಭಯದ ವಾತಾವರಣ ಇದೆ. ನಮಗೆ ರಕ್ಷಣೆ ನೀಡಿ ಎಂದು ಆಗ್ರಹಿಸಿದರು. ಅಲ್ಲದೇ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ರಚಿಸುವ ಸಮಿತಿಯಲ್ಲಿ ಪರಿಶಿಷ್ಠರಿಗೂ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದರು.ಈ ವೇಳೆ ಮಾತನಾಡಿದ ಗ್ರಾಮದ ಗುಡಿಗೌಡರಾದ ಗಂಗಾಧರ್, ಗ್ರಾಮದ ಜಾತ್ರೆಗೆ ಕರೆಯುವ ಜವಾಬ್ದಾರಿಯನ್ನು ಪರಿಶಿಷ್ಠ ಜಾತಿಗೆ ಸೇರಿದ ವ್ಯಕ್ತಿಗೆ ನೀಡಲಾಗಿದೆ. ಆತ ಆ ಸಮುದಾಯದವರು ಹಣ ನೀಡದ ಕಾರಣ ಜಾತ್ರೆಗೆ ಡಂಗೂರ ಸಾರಿಸುವುದಿಲ್ಲ ಎಂದು ಹೇಳಿದ್ದಾನೆ. ಇದಕ್ಕೂ ನಮಗೂ ಸಂಬಂಧವಿಲ್ಲ. ದೇವರ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ರಚಿಸಲಾಗುವ ಸಮಿತಿಗಳಲ್ಲಿ ಎಲ್ಲ ಸಮುದಾಯದವರನ್ನೂ ಪರಿಗಣಿಸಲಾಗಿದೆ. ಆದರೆ ಗುಡಿಗೌಡ ಪದವಿ ಅನಾದಿಕಾಲದಿಂದಲೂ ಗ್ರಾಮ ಮುಖಂಡರೊಬ್ಬರೇ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಗುಡಿಗೌಡರ ನೇತೃತ್ವದಲ್ಲೇ ಎಲ್ಲಾ ಧಾರ್ಮಿಕ ಕಾರ್ಯಗಳು ನಡೆಯುವುದು ಗ್ರಾಮಗಳ ಪದ್ದತಿ. ಆದರೆ ಈಗ ಏಕಾಏಕಿ ಜವಾಬ್ದಾರಿ ಹಂಚಿಕೆ ಮಾಡಿ ಎಂದರೆ ಆಗದು ಎಂದು ಸಭೆಗೆ ತಿಳಿಸಿದರು. ಈ ವೇಳೆ ಮಾತನಾಡಿದ ತಹಸೀಲ್ದಾರ್ ಎನ್. ಎ.ಕುಂಇ ಅಹಮದ್ ರವರು ತಾವೇ ತಾಲೂಕು ಆಡಳಿತದ ಪರವಾಗಿ ಕುಣಿಕೇನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಜಾತ್ರಾ ಮಹೋತ್ಸವ ಕುರಿತು ಪ್ರಚಾರ ಮಾಡಿಸುವೆ ಎಂದು ಹೇಳಿದರು. ಆಗ ಜಗದೀಶ್ ಈ ಹಿಂದೆ ಏಕೆ ಪ್ರಚಾರ ಮಾಡಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು. ಅಲ್ಲದೇ ಪರಿಶಿಷ್ಟ ಜನಾಂಗಕ್ಕೆ ಸಮಿತಿಯ ಜವಾಬ್ದಾರಿ ನೀಡಲೇಬೇಕೆಂದು ಪಟ್ಟು ಹಿಡಿದರು. ತಹಸೀಲ್ದಾರ್ ಮತ್ತು ಇನ್ನಿತರರು ಎಷ್ಟೇ ಹೇಳಿದರೂ ಸಹ ಜಗದೀಶ್ ತಮ್ಮ ಪಟ್ಟು ಬಿಡದ ಕಾರಣ ಶಾಂತಿ ಸಭೆಯಲ್ಲಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಗ್ರಾಮದ ಮುಖಂಡರು ತಾವು ಜಾತ್ರಾ ಮಹೋತ್ಸವವನ್ನೇ ರದ್ದು ಮಾಡುವುದಾಗಿ ಘೋಷಿಸಿ ಸಭೆಯಿಂದ ಹೊರ ನಡೆದರು. ಎರಡು ಸಮುದಾಯದ ನಡುವೆ ಭಿನ್ನಾಭಿಪ್ರಾಯವಿರುದರಿಂದ ಜಾತ್ರಾ ವೇಳೆ ಅಹಿತಕರ ಘಟನೆ ಸಂಭವಿಸಬಹುದು ಎಂಬ ಶಂಕೆ ಇರುವ ಕಾರಣ ಜಾತ್ರಾ ಮಹೋತ್ಸವವನ್ನು ರದ್ದು ಮಾಡಿ ತಹಸೀಲ್ದಾರ್ ಕುಂ ಇ ಅಹಮದ್ ಆದೇಶ ನೀಡಿದರು.ಗ್ರಾಮದಲ್ಲಿ ಶಾಂತಿ ನೆಲೆಸುವ ಸಲುವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಂದು ಕೆಎಸ್ ಆರ್ ಪಿ ಮತ್ತು ಡಿಆರ್ ವ್ಯಾನ್ ನ್ನು ರವಾನಿಸಲಾಗುವುದು ಎಂದು ತಿಳಿದುಬಂದಿದೆ.