ಬಡವರ ಬೆನ್ನಿಗೆ ಸದಾ ನಿಲ್ಲುವ ಉಪ್ಪಿನಬೆಟಗೇರಿ ಸಹೋದರರು

| Published : Aug 16 2024, 12:47 AM IST

ಸಾರಾಂಶ

ತೊಂದರೆಯಲ್ಲಿದ್ದ ಎಲ್ಲರಿಗೂ ದಿನಸಿ ಹಾಗೂ ಹಣ್ಣು, ತರಕಾರಿ ನೀಡುವ ಮೂಲಕ ಸಾಂತ್ವನ ಹೇಳಿ ಉಪ್ಪಿನಬೆಟಗೇರಿ ಸಹೋದರರು ಸಹಾಯ ಹಸ್ತ

ಶರಣು ಸೊಲಗಿ ಮುಂಡರಗಿ

ಸಮಾಜ ಸೇವೆ, ಬಡವರು, ದೀನ ದಲಿತರು, ಶೋಷಿತರಿಗೆ ನೆರವಿನ ವಿಚಾರ ಬಂದಾಗ ಉಪ್ಪಿನ ಬೆಟಗೇರಿ ಸಹೋದರರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ತಮ್ಮ ಕೈಲಾದ ಸಹಾಯ ಹಸ್ತ ಚಾಚುತ್ತಾರೆ. ರವೀಂದ್ರ ಉಪ್ಪಿನ ಬೆಟಗೇರಿ, ಶ್ರೀನಿವಾಸ ಉಪ್ಪಿನಬೆಟಗೇರಿ ಅವರ ಇಂತಹ ಕಾರ್ಯಗಳಿಂದಲೇ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಂಡು, ಮಾದರಿಯಾಗಿದ್ದಾರೆ.

ನಾಡಿನಾದ್ಯಂತ ಕೊರೋನಾ ಹೆಮ್ಮಾರಿ ಅಟ್ಟಹಾಸ ಮೆರೆದ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು ತೊಂದರೆಯಲ್ಲಿದ್ದರು. ಈ ಸಂದರ್ಭದಲ್ಲಿ ನಿಮ್ಮ ಜೊತೆಯಲ್ಲಿ ನಾವಿದ್ದೇವೆ ಎಂದು ತೊಂದರೆಯಲ್ಲಿದ್ದ ಎಲ್ಲರಿಗೂ ದಿನಸಿ ಹಾಗೂ ಹಣ್ಣು, ತರಕಾರಿ ನೀಡುವ ಮೂಲಕ ಸಾಂತ್ವನ ಹೇಳಿ ಉಪ್ಪಿನಬೆಟಗೇರಿ ಸಹೋದರರು ಸಹಾಯ ಹಸ್ತ ಚಾಚಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಬಡವರು, ಕಾರ್ಮಿಕರು ಕೆಲಸವಿಲ್ಲದೇ ತೊಂದರೆಯಲ್ಲಿದ್ದಾಗ ತಮ್ಮ ಜಮೀನಿನಲ್ಲಿ‌ ಬೆಳೆದ ಲಕ್ಷಾಂತರ ರು.ಗಳ ಬೆಲೆಬಾಳುವ ಬಾಳೆ ಹಣ್ಣು ಹಾಗೂ ಖರೀದಿಸಿದ ತರಕಾರಿಗಳನ್ನು ಎಸ್.ಎಸ್.ಪಾಟೀಲ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಉಚಿತವಾಗಿ ಹಂಚಿದರು.

ಮುಖ್ಯಮಂತ್ರಿ ಕೊರೋನಾ ಪರಿಹಾರ ನಿಧಿಗೂ ₹1 ಲಕ್ಷ ದೇಣಿಗೆ ನೀಡಿ ಸರ್ಕಾರದ ಜತೆಗೂ ಕೈ ಜೋಡಿಸಿ ಮಾನವೀಯತೆ ಮೆರೆದಿದ್ದರು.

ಇಷ್ಟೇ ಅಲ್ಲದೇ ಉಪ್ಪಿನ ಬೆಟಗೇರಿ ಸಹೋದರರು ತೊಂದರೆಯಲ್ಲಿರುವ ಅನೇಕ ವಿಶ್ವಕರ್ಮ ಸಮಾಜ ಬಾಂಧವರಿಗೆ ಕೊರೋನಾದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹಗಲಿರುಳೆನ್ನದೇ ಕಾರ್ಯ ನಿರ್ವಹಿಸಿದ ವೈದ್ಯರು ಸೇರಿದಂತೆ ಸರ್ವ ಸಿಬ್ಬಂದಿಗೆ, ಎಪಿಎಂಸಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿನ ಬಡವರಿಗೆ ಹಣ್ಣು, ತರಕಾರಿ ದಿನಸಿ ವಿತರಿಸಿ ಸಹಾಯ ಹಸ್ತ ಚಾಚಿದ್ದಾರೆ.

ರವೀಂದ್ರ ಉಪ್ಪಿನಬೆಟಗೇರಿಯವರು ಈ ಹಿಂದೆ ಮುಂಡರಗಿ ಪುರಸಭೆ ಅಧ್ಯಕ್ಷರಾಗಿ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ನೂರಾರು ನಿರಾಶ್ರಿತರಿಗೆ ಸೂರು ನೀಡಿದ್ದಾರೆ. ಎಪಿಎಂಸಿ ಅಧ್ಯಕ್ಷರಾಗಿಯೂ ಸಹ ರೈತರಿಗೆ ಉಪಯೋಗವಾಗುವ ಅನೇಕ ಕಾರ್ಯ ಮಾಡಿದ್ದಾರೆ.

ಸಿನಿಮಾ ಮಂದಿರ ನಿರ್ಮಾಣ: ಮುಂಡರಗಿ ಪಟ್ಟಣದಲ್ಲಿ ಈ ಹಿಂದೆ ಇದ್ದ ಎರಡು ಚಿತ್ರಮಂದಿರಗಳು ಇದೀಗ ಸ್ಥಗಿತವಾಗಿದ್ದು, ಜನತೆಗೆ ಮನರಂಜನೆಗೆ ಒಂದೇ ಒಂದು ಚಿತ್ರಮಂದಿರ ಇಲ್ಲವಾಗಿತ್ತು. ಇದನ್ನರಿತ ರವೀಂದ್ರ ಹಾಗೂ ಶ್ರೀನಿವಾಸ ಉಪ್ಪಿನಬೆಟಗೇರಿ ಸಹೋದರರು ಪಟ್ಟಣದ ಕೊರ್ಲಹಳ್ಳಿ ಹಾಗೂ ಕಲಕೇರಿ ರಸ್ತೆಯ ಬ್ಯಾಲವಾಡಗಿ ವೃತ್ತದಲ್ಲಿ ಛೋಟುಮಹಾರಾಜ್ ಶ್ರೀಸಿನೇಮಾಸ್ ಚಿತ್ರಮಂದಿರ ನಿರ್ಮಾಣ ಮಾಡುವ ಮೂಲಕ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಜನತೆಗೆ ಮನರಂಜನೆ ನೀಡಲು ಮುಂದಾಗಿದ್ದಾರೆ.

ಇಂದು ಛೋಟುಮಹಾರಾಜ್ ಶ್ರೀಸಿನೆಮಾಸ್ ಚಿತ್ರಮಂದಿರ ಉದ್ಘಾಟನೆಗೊಳ್ಳಲಿದ್ದು, ನಾಡಿನ ಪೂಜ್ಯರು, ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ವಿವಿಧ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ.

ರವೀಂದ್ರ ಉಪ್ಪಿನಬೆಟಗೇರಿ ಪುರಸಭೆ ಅಧ್ಯಕ್ಷ, ಎಪಿಎಂಸಿ ಅಧ್ಯಕ್ಷರಾಗಿ ಸಾರ್ವಜನಿಕ ಬದುಕಿನಲ್ಲಿ ಜಾತ್ಯಾತೀತ, ಪಕ್ಷಾತೀತವಾಗಿ ಅನೇಕ ಜನೋಪಯೋಗಿ ಕಾರ್ಯ ಮಾಡುತ್ತಾ ಬಂದಿದ್ದು, ಇದೀಗ ಜನತೆಗೆ ಮನರಂಜನೆ ಒದಗಿಸುವ ಉದ್ದೇಶದಿಂದ ಚಲನಚಿತ್ರ ಮಂದಿರ ಪ್ರಾರಂಭಿಸಿದ್ದು, ಅದು ಯಶಸ್ವಿಯಾಗಿ ನೆರವೇರುವಂತಾಗಲಿ ಎಂದು ಗಣ್ಯರಾದ ವೈ.ಎನ್. ಗೌಡರ ಹಾಗೂ ಕರಬಸಪ್ಪ ಹಂಚಿನಾಳ ತಿಳಿಸಿದ್ದಾರೆ.