ಸಾರಾಂಶ
ಗುರುವಾರ ದಿನವಿಡೀ ಮಳೆಯಾಗಿದ್ದು, ನದಿ ನೀರಿನ ಮಟ್ಟ ಸಾಯಂಕಾಲದ ವರೆಗೆ ೨೮ ಮೀಟರ್‌ನಲ್ಲಿತ್ತು.
ಉಪ್ಪಿನಂಗಡಿ: ಸತತವಾಗಿ ಸುರಿದ ಭಾರಿ ಮಳೆಗೆ ಬುಧವಾರ ರಾತ್ರಿ ನೇತ್ರಾವತಿ ನದಿಯು ಏಕಾಏಕಿ ಅಪಾಯದ ಮಟ್ಟವನ್ನು ಮೀರಿ ಹರಿದು ಜನತೆಯನ್ನು ನೆರೆ ಭೀತಿಗೆ ಒಳಪಡಿಸಿತು.
ಬುಧವಾರ ಮುಂಜಾನೆಯಿಂದಲೇ ಇಳಿಮುಖವಾಗಿ ಹರಿಯುತ್ತಿದ್ದ ನದಿಯು ಸಾಯಂಕಾಲವಾದಂತೆ ತುಸು ಚೇತರಿಕೆ ಕಂಡಿತು. ರಾತ್ರಿ ವೇಳೆ ನೀರಿನ ಮಟ್ಟ ಅಪಾಯದ ಮಟ್ಟಕ್ಕೇರಿ ಹರಿಯತೊಡಗಿತು. ತಡ ರಾತ್ರಿ ೨.೧೫ ರ ಹೊತ್ತಿಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ನದಿಯು ಉಕ್ಕಿ ಹರಿದು ದೇವಳದ ಮುಂಭಾಗದ ಪ್ರಾಂಗಣಕ್ಕೆ ವ್ಯಾಪಿಸಿತು. ೨ನೇ ಬಾರಿ ಸಂಗಮದ ನಿರೀಕ್ಷೆಯನ್ನು ಮೂಡಿಸಿತ್ತಾದರೂ ೨.೩೦ ರ ವೇಳೆ ಇಳಿಮುಖವಾಯಿತು. ಮಂಗಳವಾರ ರಾತ್ರಿಯಿಡೀ ನೆರೆ ಪೀಡಿತ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಡೆಸಿ ದಣಿದಿದ್ದ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ, ಕಂದಾಯ ಇಲಾಖಾಧಿಕಾರಿಗಳ ತಂಡ ಬುಧವಾರ ರಾತ್ರಿ ಅನಿರೀಕ್ಷಿತ ಪ್ರವಾಹದ ಭೀತಿ ಮೂಡಿದಾಗ ತಕ್ಷಣಕ್ಕೆ ಸ್ಥಳದಲ್ಲಿ ಕಾರ್ಯೋನ್ಮುಖರಾದರು. ಅಪಾಯ ಪ್ರದೇಶದ ನಿವಾಸಿಗರಿಗೆ ಎಚ್ಚರಿಕೆ ನೀಡಿ ರಾತ್ರಿಯಿಡೀ ಸನ್ನದ್ಧರಾಗಿದ್ದರು.ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಅಪಾಯದ ಸುಳಿವು ದೊರೆತಾಕ್ಷಣ ತಮ್ಮ ಮಗಳು ಅಳಿಯನೊಡಗೂಡಿ ತಗ್ಗು ಪ್ರದೇಶ, ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡಿ ಧ್ವನಿವರ್ಧಕದ ಮೂಲಕ ನಿವಾಸಿಗರನ್ನು ಎಚ್ಚರಿಸುವ ಕಾರ್ಯ ನಡೆಸಿದರು. ಈ ಮಧ್ಯೆ ಎಸ್ಕೆಎಸ್ಎಫ್ ವಿಖಾಯ ತಂಡ, ವಿಶ್ವಹಿಂದೂ ಪರಿಷತ್ ಬಜರಂಗ ದಳದ ಸ್ವಯಂಸೇವಕರ ತಂಡವೂ ಕಾರ್ಯನಿರ್ವಹಿಸಿತು.
ಗುರುವಾರ ದಿನವಿಡೀ ಮಳೆಯಾಗಿದ್ದು, ನದಿ ನೀರಿನ ಮಟ್ಟ ಸಾಯಂಕಾಲದ ವರೆಗೆ ೨೮ ಮೀಟರ್‌ನಲ್ಲಿತ್ತು.