ಉಪ್ಪಿನಂಗಡಿ: 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

| Published : Sep 10 2024, 01:34 AM IST

ಸಾರಾಂಶ

ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಇಲ್ಲಿನ ಶ್ರೀ ಲಕ್ಷಿಕ್ಷ್ಮಿ ವೆಂಕಟ್ರಮಣ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ೪೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸೆ.೮ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಹೇಶ್ ಕಜೆ ಧಾರ್ಮಿಕ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಆಹಂಕಾರ ಇಲ್ಲದ ನಡೆ, ನಿಷ್ಕಲ್ಮಶ ಭಕ್ತಿಗೆ ಭಗವಂತ ಒಲಿಯುತ್ತಾನೆಯೇ ವಿನಃ ಡಂಭಾಚಾರಕ್ಕೆ ಭಗವಂತನ ಒಲುಮೆ ಸಿಗದು ಎಂದು ನ್ಯಾಯವಾದಿ ಮಹೇಶ್ ಕಜೆ ಹೇಳಿದ್ದಾರೆ.

ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಇಲ್ಲಿನ ಶ್ರೀ ಲಕ್ಷಿಕ್ಷ್ಮಿ ವೆಂಕಟ್ರಮಣ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ೪೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸೆ.೮ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಗಣಪತಿ ದೇವರ ಕಥೆಯಲ್ಲಿ, ಆರಾಧನೆಯಲ್ಲಿ, ದೇಹದ ರೂಪದಲ್ಲಿ ಜ್ಞಾನವೂ ಇದೆ. ವಿಜ್ಞಾನವೂ ಅಡಕವಾಗಿದೆ. ಹಾಗೂ ಜೀವನ ಮೌಲ್ಯದ ಸಂದೇಶಗಳಿವೆ. ಆದ್ದರಿಂದಲೇ ಗಣಪತಿ ನಾಡು- ನುಡಿ- ಗಡಿಯನ್ನು ಮೀರಿ ಬೆಳಗಿದ ವಿಶ್ವನಾಯಕ. ಆದ್ದರಿಂದ ನಮ್ಮನ್ನು ನಾವು ಮೊದಲು ಅರಿತುಕೊಂಡು ನಡೆ- ನುಡಿಯಲ್ಲಿ ಗಣಪತಿಯಂತಾಗಬೇಕು. ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ದೇವರಂತಾಗಬೇಕು ಎಂದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ ಮಾತನಾಡಿ, ಜೀವನದಲ್ಲಿ ಭಕ್ತಿ, ಶೃದ್ಧೆ, ನಿಷ್ಠೆ ನಮ್ಮದಾದಾಗ ಭಗವಂತನ ಕೃಪಾದೃಷ್ಟಿ ದೊರೆಯಲು ಸಾಧ್ಯ ಎಂದರು.

ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತೀಯ ಭೂಸೇನೆಯ ಅಧಿಕಾರಿ ಸುಧೀರ್ ಶೆಟ್ಟಿ, ಭಾರತೀಯ ಸೇನೆ ಸೇರಲು ಯುವ ಪಡೆ ಮುಂದೆ ಬರಬೇಕಿದೆ. ಸೇನೆ ಎಂದರೆ ಸಾವು ಎಂಬ ಭ್ರಮೆ ನಾವು ಮೊದಲು ಬಿಡಬೇಕು. ಭಗತ್‌ಸಿಂಗ್‌ರಂತವರು ಬೇಕು. ಆದರೆ ಅವರು ಪಕ್ಕದ ಮನೆಯಲ್ಲಿ ಹುಟ್ಟಲಿ ಎಂದು ಆಶಿಸುವ ನಮ್ಮ ಮನಸ್ಸುಗಳು ಬದಲಾಗಿ, ಪ್ರತಿ ಮನೆ- ಮನೆಯಲ್ಲೂ ಭಗತ್‌ಸಿಂಗ್‌ರಂತವರು ಹುಟ್ಟಬೇಕೆಂಬ ಕನಸು ನಮ್ಮದಾಗಬೇಕಿದೆ ಎಂದರು.

ಪೌರ ಕಾರ್ಮಿಕರಿಗೆ ಗೌರವದ ಸನ್ಮಾನ:

ಉಪ್ಪಿನಂಗಡಿಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಆನಂದ, ಸುಂದರ, ತನಿಯ, ಮನೋಜ್, ಯಮುನಾ, ಪ್ರೇಮಾ, ಆನಂದ, ರಾಕೇಶ್ ಅವರನ್ನು ಗೌರವಿಸಲಾಯಿತು.

ಹಿಂದೂಪರ ಸಂಘಟನೆಗಳ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಸಮಿತಿ ಕೋಶಾಧಿಕಾರಿ ಚಂದ್ರಹಾಸ ಹೆಗ್ಡೆ, ಉಪಾಧ್ಯಕ್ಷ ಯು. ಯತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶರತ್ ಕೋಟೆ, ಕೀರ್ತನ್ ಕುಮಾರ್ ಕೊಯ್ಲ, ಪ್ರಮುಖರಾದ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ರವೀಶ್ ಎಚ್.ಟಿ., ಜಗದೀಶ್ ಶೆಟ್ಟಿ, ಕರಾಯ ರಾಘವೇಂದ್ರ ನಾಯಕ್, ಗೋಪಾಲ ಹೆಗ್ಡೆ, ವಿಶ್ವನಾಥ ಶೆಟ್ಟಿ ಕಂಗ್ವೆ, ಅನಂತರಾಯ ಕಿಣಿ, ಹರೀಶ್ ಪೈ,ಗೋಪಾಲ ಹೆಗ್ಡೆ, ಸುಬ್ರಹ್ಮಣ್ಯ ಶೆಣೈ, , ವಿದ್ಯಾಧರ ಜೈನ್, ಶಶಿಧರ ಶೆಟ್ಟಿ, ಯು ರಾಜೇಶ್ ಪೈ, ಐ ಚಿದಾನಂದ ನಾಯಕ್, ಡಾ. ಎಂ ಆರ್ ಶೆಣೈ, ಡಾ . ನಿರಂಜನ್ ರೈ, ಬಿಪಿನ್, ಗಂಗಾಧರ ಟೈಲರ್, ಸ್ವಣೇಶ್ ಗಾಣಿಗ ಮತ್ತಿತರರು ಇದ್ದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಸ್ವಾಗತಿಸಿದರು. ಪ್ರಕೃತಿ ದೇವಾಡಿಗ ಪ್ರಾರ್ಥಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ ವಂದಿಸಿದರು.