ಬೈಕ್, ಗೂಡ್ಸ್ ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

| Published : Mar 06 2024, 02:17 AM IST

ಸಾರಾಂಶ

ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜೀರ ನಿವಾಸಿ ಗುರುವಪ್ಪ ಅವರ ಪುತ್ರ ಶ್ರೀಜಿಸ್ (೨೦) ಮೃತ ವಿದ್ಯಾರ್ಥಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಬೈಕ್ ಹಾಗೂ ಮಿನಿ ಗೂಡ್ಸ್ ವಾಹನವೊಂದರ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜೀರ ನಿವಾಸಿ ಗುರುವಪ್ಪ ಅವರ ಪುತ್ರ ಶ್ರೀಜಿಸ್ (೨೦) ಮೃತ ವಿದ್ಯಾರ್ಥಿ. ಶ್ರೀಜಿಸ್‌ ರಾಮಕುಂಜ ಶಾರದಾ ನಗರದಲ್ಲಿರುವ ಚಿಕ್ಕಮ್ಮ ಅವರ ಮನೆಗೆ ಬಂದು ರಾತ್ರಿ ಅಲ್ಲಿಂದ ಆಲಂಕಾರು ಸಮೀಪದ ನೆಕ್ಕರೆಯಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಬೈಕ್‌ಗೆ ಪೆಟ್ರೋಲ್ ತುಂಬಿಸಿದರು. ಅಲ್ಲಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಕಡಬ ಕಡೆಗೆ ಹೋಗುತ್ತಿದ್ದ ಮಿನಿ ಗೂಡ್ಸ್ ನಡುವೆ ಗೋಳಿತ್ತಡಿ ಸಮೀಪ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶ್ರೀಜಿಸ್‌ರನ್ನು ತಕ್ಷಣ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತ ಶ್ರೀಜಿಸ್‌ ತಂದೆ ಗುರುವಪ್ಪ, ತಾಯಿ ಗಿರಿಜಾ, ಸಹೋದರರಾದ ಸುನೀಶ್ ಹಾಗೂ ಸುಜಿಸ್‌ ಅವರನ್ನು ಅಗಲಿದ್ದಾರೆ. ಮಿನಿ ಗೂಡ್ಸ್ ಚಾಲಕ ಬೆಳ್ತಂಗಡಿ ಮೂಲದ ಜಯೆಂದ್ರ ಆಚಾರ್ಯ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-----

ದುರಸ್ತಿ ವೇಳೆ ವಿದ್ಯುತ್ ತಂತಿ ಮೇಲೆ ತೆಂಗಿನ ಮರ ಬಿದ್ದು ತಾಂತ್ರಿಕ ಸಿಬ್ಬಂದಿ ಸಾವು ಮೂಲ್ಕಿ: ವಿದ್ಯುತ್‌ ಕಂಬಗಳ ದುರಸ್ತಿ ಕಾರ್ಯದ ಮೇಲೆ ತೆಂಗಿನ ಮರ ಕಂಬದ ಮೇಲೆ ಬಿದ್ದು, ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ತಾಂತ್ರಿಕ ಸಿಬ್ಬಂದಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಹಳೆಯಂಗಡಿಯಲ್ಲಿ ನಡೆದಿದೆ. ಕೆರೆಕಾಡು ನಿವಾಸಿ ಹರೀಶ್‌ (42) ಮೃತರು.ಹಳೆಯಂಗಡಿ ಸಮೀಪದ ಕೊಳುವೈಲು ಪ್ರದೇಶದಲ್ಲಿ ಬೀಸಿದ ಭಾರಿ ಗಾಳಿಗೆ ತೆಂಗಿನ ಮರಗಳ ಸಹಿತ, ಸುಮಾರು ಆರು ವಿದ್ಯುತ್ ಕಂಬಗಳು ಭಾನುವಾರ ಧರೆಗುರುಳಿದ್ದು ಸೋಮವಾರ ಗುತ್ತಿಗೆದಾರರ ಮೂಲಕ ನೂತನ ವಿದ್ಯುತ್ ಕಂಬ ಅಳವಡಿಕೆ ಕಾರ್ಯ ನಡೆಯುತ್ತಿತ್ತು. ವಿದ್ಯುತ್ ತಂತಿಗಳನ್ನು ಎಳೆದು ಜಂಪರ್ ಅಳವಡಿಸುವ ವೇಳೆ ಪಕ್ಕದಲ್ಲಿದ್ದ ಹಳೆ ಕಾಲದ ಭಾರಿ ಗಾತ್ರದ ತೆಂಗಿನ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಈ ಸಂದರ್ಭ ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ಕಂಬದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಂತ್ರಿಕ ಸಿಬ್ಬಂದಿ ಕಿನ್ನಿಗೋಳಿಯ ವಿದ್ಯುತ್‌ ಗುತ್ತಿಗೆದಾರ ಸಂಸ್ಥೆಯ ಉದ್ಯೋಗಿ ಕೆರೆಕಾಡು ನಿವಾಸಿ ಹರೀಶ್‌ (42) ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.----

ಅತಿ ವೇಗ, ಅಜಾಗರೂಕ ಚಾಲನೆ: ಬೈಕ್‌ಗೆ ಜೀಪ್‌ ಡಿಕ್ಕಿ, ಸವಾರ ಸಾವು ಉಳ್ಳಾಲ: ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಕ್ರ ಸಿಡಿದಿದೆ. ಬಳಿಕ ಮುಂಬದಿ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಡಿವೈಡರ್‌ಗೆ ಬಡಿದು ಮೃತಪಟ್ಟಿರುವ ಘಟನೆ ರಾ.ಹೆ66 ರ ಕೊಲ್ಯ ಬ್ರಹ್ಮಶ್ರೀ ಮಂದಿರ ಎದುರುಗಡೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಜೀಪಿನಲ್ಲಿದ್ದ ಯುವಕರು ಗಾಂಜಾ ನಶೆಯಲ್ಲಿದ್ದು, ಅವರ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊಲ್ಯ ನಿವಾಸಿ ಸಂತೋಷ್ ಬೆಳ್ಚಾಡ ( 45) ಮೃತರು. ಬಾಳೆಹಣ್ಣು ವ್ಯಾಪಾರಿಯಾಗಿದ್ದ ಅವರು ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಲ್ಲಿದ್ದ ಜೀಪ್ ಎದುರಿನಲ್ಲಿ ಧರ್ಮಸ್ಥಳದಿಂದ ಕಾಞಂಗಾಡ್‌ಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ಬಲೇನೋ ಕಾರಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಆಯತಪ್ಪಿದ ಕಾರು ಎದುರಿನಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಬೈಕ್ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಬೈಕ್ ಡಿವೈಡರ್‌ಗೆ ಬಡಿದ ಪರಿಣಾಮ ಸಂತೋಷ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ತೆರಳುವ ದಾರಿಮಧ್ಯೆ ಮೃತಪಟ್ಟರು. ವಿವಾಹಿತರಾಗಿದ್ದ ಸಂತೋಷ್ ಹೆತ್ತವರು, ಇಬ್ಬರು ಹೆಣ್ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದು, ಕುಟುಂಬದ ಆಧಾರಸ್ತಂಭವಾಗಿದ್ದರು.

ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಕೊಲ್ಯ ನಿವಾಸಿಗಳು ತಕ್ಷಣವೇ ಸ್ಥಳದಲ್ಲಿ ಸಂಚಾರಿ ಪೊಲೀಸರು, ಬ್ಯಾರಿಕೇಡ್ ಅಳವಡಿಸಲು ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಲೇ ಇದೆ. ಪೊಲೀಸರು ಯಾವುದೇ ಕ್ರಮ ವಹಿಸುತ್ತಿಲ್ಲ. ಇಂದು ನಡೆದಿರುವ ಅಪಘಾತಕ್ಕೆ ಗಾಂಜಾ ನಶೆಯೇ ಕಾರಣ. ಜೀಪಿನಲ್ಲಿದ್ದ ಮೂವರು ಯುವಕರು ನಶೆಯಲ್ಲಿದ್ದರಿಂದ ಘಟನೆ ನಡೆದಿದೆ. ತಕ್ಷಣವೇ ಮೂವರನ್ನು ತನಿಖೆಗೆ ಒಳಪಡಿಸಿ ಮೃತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸ್ಥಳೀಯ ಶೇಖರ್ ಕನೀರುತೋಟ ಆಗ್ರಹಿಸಿದ್ದಾರೆ.