ಸಾರಾಂಶ
ಉಲುಕ್ ಉಪ್ಪಿನಂಗಡಿ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಯುಕ್ತ ಉಪ್ಪಿನಂಗಡಿಯ ಹೃದಯ ಭಾಗದಲ್ಲಿ ಹೆದ್ದಾರಿಯ ಉಭಯ ಪಾರ್ಶ್ವದಲ್ಲಿ ಹಲವು ಅಡಿ ಎತ್ತರದ ಕಾಂಕ್ರೀಟ್ ತಡೆಗೋಡೆ ನಿರ್ಮಾಣವಾಗುತ್ತಿವೆ. ಉಪ್ಪಿನಂಗಡಿ ಸನಿಹದಲ್ಲೇ ಎರಡು ತಡೆಗೋಡೆಗಳು ನಿರ್ಮಾಣದ ಬೆನ್ನಿಗೆಯೇ ಮುರಿದು ಬಿದ್ದ ಕಹಿ ಘಟನಾವಳಿಗಳು ನಡೆದಿದ್ದು, ಅದರ ಪರಿಣಾಮ ಈಗ ನಿರ್ಮಾಣವಾಗುತ್ತಿರುವ ಈ ತಡೆಗೋಡೆಯ ಬಗ್ಗೆಯೂ ಜನರ ಮನದಲ್ಲಿ ಭೀತಿ ಮೂಡಿದೆ. ಅಧಿಕಾರಿಗಳು ಜನರ ಮನದ ಭೀತಿ ನಿವಾರಿಸಲು ಮುಂದಾಗಬೇಕಾಗಿದೆ.
ಕಾಮಗಾರಿಗೆ ಪೂರಕವಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಾಣವಾಗಿದ್ದು, ೨೦೨೩ ರ ಮಳೆಗಾಲದಲ್ಲಿ ಇದೇ ಭಾಗದ ನಟ್ಟಿಬೈಲ್ ಪಾರ್ಶ್ವದಲ್ಲಿ ನಿರ್ಮಿಸಲಾದ ತಡೆಗೋಡೆ ಮಳೆಯಿಂದ ನೆನೆದ ಮಣ್ಣಿನ ಒತ್ತಡ ತಾಳಲಾರದೆ ಕುಸಿದು ಬಿದ್ದಿತ್ತು. ಈ ಭಾಗದಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳ ಸಹಿತ ಎಲ್ಲವೂ ಪತನಗೊಂಡಿತ್ತು. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿರಲಿಲ್ಲ.ಈ ಬಾರಿಯ ಮಳೆಗಾಲದಲ್ಲಿ ಪುತ್ತೂರು ಉಪ್ಪಿನಂಗಡಿ ನಡುವಣದ ರಾಜ್ಯ ಹೆದ್ದಾರಿಯಲ್ಲಿ ೩೪ ನೇ ನೆಕ್ಕಿಲಾಡಿಯ ಆದರ್ಶನಗರ ಎಂಬಲ್ಲಿ ನಿರ್ಮಿಸಲಾದ ತಡೆಗೋಡೆ ಒಂದೇ ಮಳೆಗೆ ಬುಡದಿಂದಲೇ ತುಂಡಾಗಿ ಬಿದ್ದು ಸಮಸ್ಯೆ ಸೃಷ್ಟಿಸಿತ್ತು. ಪ್ರಸಕ್ತ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆಯು 15 ಅಡಿಗಿಂತಲೂ ಹೆಚ್ಚು ಎತ್ತರವಿದ್ದು, ತಡೆಗೋಡೆಯ ದಪ್ಪ ಮಾತ್ರ ೨ ಅಡಿಯ ಆಸುಪಾಸಿನಲ್ಲಿದೆ. ಈ ತಡೆಗೋಡೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಹೊಂದಿಕೊಂಡಿರುವ ಮಾರ್ಗ ಶಾಲಾ ಮಕ್ಕಳ ಸಂಚಾರದ ರಸ್ತೆಯಾಗಿದ್ದು, ಕಣ್ಣ ಮುಂದೆ ಘಟಿಸಿದ ಎರಡು ದುರ್ಘಟನೆಗಳಿಂದಾಗಿ ಜನರಲ್ಲಿ ಈ ತಡೆಗೋಡೆಯ ಬಗ್ಗೆ ಭೀತಿ ಮೂಡಿದೆ.
ಯೋಜನೆಗನುಗುಣ ನಿರ್ಮಾಣ:ಈ ಬಗ್ಗೆ, ಹೆಸರು ಹೇಳಲಿಚ್ಛಿಸದ ಇಲಾಖಾ ಇಂಜಿನಿಯರ್ ಒಬ್ಬರು ಪ್ರತಿಕ್ರಿಯಿಸಿ, ಇಡೀ ಕಾಮಗಾರಿ ದೆಹಲಿಯಲ್ಲಿ ಅನುಮೋದಿತ ಯೋಜನೆಯಂತೆಯೇ ನಡೆಯುತ್ತಿದೆ. ಗುಣಮಟ್ಟದೊಂದಿಗೆ ನಡೆಯುತ್ತಿರುವುದರಿಂದ ಯಾವುದೇ ಭೀತಿ ಅನಗತ್ಯ ಎಂದಿದ್ದಾರೆ.
ಕಳೆದ ವರ್ಷ ಮಳೆಗೆ ಬಿದ್ದ ತಡೆಗೋಡೆಯೂ ದೆಹಲಿಯಿಂದ ಅನುಮೋದಿತ ರೀತಿಯಲ್ಲೇ ಗುಣಮಟ್ಟದೊಂದಿಗೆ ನಿರ್ಮಾಣವಾಗಿತ್ತಲವೇ ಎಂದು ಪ್ರಶ್ನಿಸಿದಾಗ, ಅದರ ಬಿಲ್ ಪಾವತಿಸಲಾಗಿಲ್ಲ ಎಂದಿದ್ದಾರೆ. ಬಿಲ್ ಪಾವತಿಸದಿರುವುದು ಮುಖ್ಯವಲ್ಲ. ಘಟನೆಯಿಂದ ಜೀವ ಹಾನಿಯಾಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದರೆ ಮೌನವೇ ಉತ್ತರವಾಗಿತ್ತು.------------------------ಜನರ ಭೀತಿಯ ಬಗ್ಗೆ ಸ್ಪಷ್ಟನೆ ಬಯಸಿ ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆ ಎಂಜಿನಿಯರ್ ರಘುನಾಥ ರೆಡ್ಡಿ ಅವರನ್ನು ಸಂಪರ್ಕಿಸಿದಾಗ, ಅವರು ಕಾಮಗಾರಿ ಗುಣಮಟ್ಟದ ಬಗ್ಗೆ ಸಂದೇಹ ಬೇಡ, ಹೆದ್ದ್ದಾರಿಯ ಇನ್ನೊಂದು ಪಾರ್ಶ್ವದ ತಡೆಗೋಡೆಯು ಸನಿಹದಲ್ಲಿದ್ದ ದೊಡ್ಡ ಚರಂಡಿಯಿಂದಾಗಿ ಕಳೆದ ವರ್ಷ ಬಿದ್ದಿದೆಯೇ ವಿನಃ ಗುಣಮಟ್ಟ ದೋಷದಿಂದಲ್ಲ ಎಂದು ತಿಳಿಸಿದ್ದಾರೆ.
-ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ....................ಕಳೆದ ವರ್ಷ ಇದೇ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ನಿರ್ಮಿಸಲಾದ ತಡೆಗೋಡೆ ಮಳೆಯ ಒತ್ತಡ ಸಿಲುಕಿ ಬಿದ್ದಿತ್ತು. ಈ ಬಾರಿ ನೆಕ್ಕಿಲಾಡಿಯ ಆದರ್ಶನಗರ ಎಂಬಲ್ಲಿಯೂ ನಿರ್ಮಿಸಲಾದ ತಡೆಗೋಡೆಯು ಬಿದ್ದಿದೆ. ಮಾತ್ರವಲ್ಲದೆ ಗೋಳಿತೊಟ್ಟು ಪರಿಸರದಲ್ಲಿ ಕಡಿಮೆ ಎತ್ತರದ ತಡೆಗೋಡೆಗಳೂ ಕೂಡಾ ತುಂಡರಿಸಲ್ಪಟ್ಟಿದೆ. ನಿರ್ಮಿಸುವಾಗ ಎಲ್ಲರೂ ತಮ್ಮ ತಮ್ಮ ಪಾಂಡಿತ್ಯವನ್ನು ಮುಂದಿರಿಸಿ ಗುಣಮಟ್ಟದ ಬಗ್ಗೆ ಮಾತನಾಡುತ್ತಾರೆ. ಬಿದ್ದ ಬಳಿಕ ಅದಕ್ಕೊಂದು ಕಾರಣ ಕೊಡುತ್ತಾರೆ. ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಅದು ಬೀಳುವುದಿಲ್ಲ ಎನ್ನುವುದಕ್ಕೆ ಸಂಬಂಧಿಸಿದ ಅಧಿಕಾರಿಗಳು ಖಾತ್ರಿ ನೀಡಬೇಕಿದೆ.
-ಪ್ರಶಾಂತ್ ಡಿಕೋಸ್ಟ, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ.