ಉಪ್ಪಿನಂಗಡಿ: ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಸಂಗಮ ತಾಣ, ನೆರೆ ಪೀಡಿತ ಪ್ರದೇಶವಾಗಿರುವ ಉಪ್ಪಿನಂಗಡಿಯಲ್ಲಿ ಜೂನ್ ತಿಂಗಳ ಅರ್ಧಾಂಶ ಮುಗಿಯುತ್ತಾ ಬಂದರೂ ಇನ್ನೂ ನೆರೆ ಮುಂಜಾಗ್ರತಾ ಸಭೆ ನಡೆಯದಿರುವುದು ಹಾಗೂ ಆಡಳಿತ ಯಂತ್ರ ಈ ನಿಟ್ಟಿನಲ್ಲಿ ಮೌನವಾಗಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜೂನ್ ತಿಂಗಳಿನಿಂದ ಮಳೆಗಾಲ ಪ್ರಾರಂಭಗೊಳ್ಳುವುದರಿಂದ ಮಳೆಗಾಲದಲ್ಲಿ ಸಂಭಾವ್ಯ ಅಪಾಯಗಳನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆ ನಿಟ್ಟಿನಲ್ಲಿ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲು ನಾಗರಿಕರ ಸಹಭಾಗಿತ್ವದಲ್ಲಿ ಪ್ರತಿ ವರ್ಷ ಉಪ್ಪಿನಂಗಡಿಯಲ್ಲಿ ನೆರೆ ಮುಂಜಾಗ್ರತಾ ಸಭೆಯನ್ನು ಕರೆಯಲಾಗುತ್ತಿದೆ. ಆದರೆ ಈ ಬಾರಿ ಇನ್ನೂ ಈ ನಿಟ್ಟಿನ ಸಭೆಯನ್ನು ಕರೆಯದಿರುವುದು ನಾಗರಿಕರಲ್ಲಿ ಕಳವಳ ಹಾಗೂ ಅಸಮಾಧಾನವನ್ನು ಉಂಟು ಮಾಡಿದೆ. ಸ್ಥಳೀಯ ಪಂಚಾಯಿತಿ ಆಡಳಿತದಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಆಡಳಿತಾಧಿಕಾರಿಗಳಿರುವುದರಿಂದ ಜನ ಸಮಾನ್ಯರ ಸಮಸ್ಯೆಗಳಿಗೆ ಸಂಬಧಿಧಿಸಿ ಸಂವೇದನಾಶೀಲತೆ ಇಲ್ಲದಿರುವುದು ಜನತೆಯನ್ನು ಕಾಡುತ್ತಿದೆ. ಇಲ್ಲಿನ ಕ್ರಿಯಾಶೀಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವರ್ಗಾವಣೆ ವಿಚಾರವಾಗಿ ಆಡಳಿತಾತ್ಮಕ ಪರ ವಿರೋಧ ನಿಲುವುಗಳೂ ಕೂಡ ಪ್ರಸಕ್ತ ಉಪ್ಪಿನಂಗಡಿಯ ಮೂಲ ಸೌಕರ್ಯದ ವಿಚಾರದಲ್ಲೂ ನಕಾರಾತ್ಮಕ ಫಲಿತಾಂಶವನ್ನು ನೀಡುತ್ತಿದೆ. ಚರಂಡಿ ಹೂಳೆತ್ತಿಲ್ಲ: ಸಾಮಾನ್ಯವಾಗಿ ಕೃತಕ ನೆರೆಯಂತಹ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ ಮಳೆಗಾಲ ಆರಂಭಕ್ಕೂ ಮುನ್ನವೇ ಗ್ರಾಮದ ಚರಂಡಿಗಳ ಹೂಳು ತೆಗೆಯುವ ಕಾರ್ಯವನ್ನು ಮಾಡಲಾಗುತ್ತದೆ. ಆದರೆ ಈ ಬಾರಿ ಅದರತ್ತ ಪಂಚಾಯಿತಿ ಆಡಳಿತದ ಚಿತ್ತ ಹರಿದಿಲ್ಲ. ಹಲವೆಡೆ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದೆ.ತ್ಯಾಜ್ಯ ಸಂಗ್ರಹದಲ್ಲೂ ಅವ್ಯವಸ್ಥೆ: ತ್ಯಾಜ್ಯ ನಿರ್ವಹಣೆ ಮತ್ತು ಗ್ರಾಮದ ಸ್ವ್ವಚ್ಚತೆ ನೆಲೆಗಟ್ಟಿನಲ್ಲಿ ಸ್ವಚ್ಚ ಗ್ರಾಮ ಪುರಸ್ಕಾರ ಪಡೆದಿದ್ದ ಈ ಗ್ರಾಮ ಪ್ರಸಕ್ತ ತ್ಯಾಜ್ಯ ಸಂಗ್ರಹಣಾ ಕಾರ್ಯದಲ್ಲಿ ತೀವ್ರ ತರಹದ ಲೋಪ ಗೋಚರಿಸುತ್ತಿದ್ದು, ದಿನ ನಿತ್ಯ ಸಂಗ್ರಹಗೊಳ್ಳುತ್ತಿರುವ ಇದೀಗ ವಾರದಲ್ಲಿ ಕೆಲವು ದಿನ ಮಾತ್ರ ಸಂಗ್ರಹಗೊಳ್ಳುವ ದೃಶ್ಯಾವಳಿಗಳು ಕಾಣಿಸುತ್ತಿದೆ. ಪರಿಣಾಮ ಹಸಿ ತ್ಯಾಜ್ಯ ಕೊಳೆತು ದುರ್ನಾತ ಬೀರುವಂತಾಗುತ್ತಿದ್ದು, ಮಳೆಗಾಲದ ಈ ಸಮಯದಲ್ಲಿ ರೋಗ ರುಜಿನಗಳು ಪ್ರಸಹರಿಸಲು ಕಾರಣವಾಗುತ್ತಿದೆ.
ನೈಜ ಕಾಳಜಿ ವ್ಯಕ್ತವಾಗಲಿ: ತ್ಯಾಜ್ಯ ನಿರ್ವಹಣೆ , ಚರಂಡಿಗಳ ಹೂಳು ತೆರವು ಸಹಿತ ಮಳೆಗಾಲದಲ್ಲಿ ನೆರೆ ಮುಂಜಾಗ್ರತಾ ಕ್ರಮ ಮತ್ತು ಆರೋಗ್ಯ ರಕ್ಷಣಾ ಕ್ರಮದ ನೆಲೆಯಲ್ಲಿ ಆಡಳಿತ ವ್ಯವಸ್ಥೆ ನೈಜ ಕಾಳಜಿ ವ್ಯಕ್ತಪಡಿಸಬೇಕು. ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವತ್ತ ಆಡಳಿತ ವ್ಯವಸ್ಥೆಯಿಂದ ಸಕಾರಾತ್ಮಕ ಸ್ಪಂದನವನ್ನು ನಿರೀಕ್ಷಿಸುತ್ತೇವೆ ಎಂದು ಉಪ್ಪಿನಂಗಡಿ ವರ್ತಕ ಸಂಘದ ಪದಾಧಿಕಾರಿ ಲೋಕೇಶ್ ಆಚಾರ್ಯ ಪ್ರತಿಕ್ರಿಯಿಸಿದ್ದಾರೆ.