ಉಪ್ಪಿನಂಗಡಿ: ಯಕ್ಷಗಾನ ಕ್ಷೇತ್ರದ ಕಲಾ ದಿಗ್ಗಜ ಪಾತಾಳ ವೆಂಕಟರಮಣ ಭಟ್ ಸಂಸ್ಥಾಪಿತ ಪಾತಾಳ ಯಕ್ಷ ಪ್ರತಿಷ್ಠಾನ ಉಪ್ಪಿನಂಗಡಿ ವತಿಯಿಂದ ಕೊಡಮಾಡುವ ಪಾತಾಳ ಸ್ಮೃತಿ ಗೌರವವನ್ನು ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿರುವ ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅವರಿಗೆ ಆ.೬ ರಂದು ಪ್ರದಾನ ಮಾಡಲಾಯಿತು. ಕಸಾಪ ಪೂರ್ವ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದ ಸಾಹಿತಿ ಮುಳಿಯ ಶಂಕರ್ ಭಟ್‌, ಯಾವ ಅಧಿಕಾರ, ಸ್ಥಾನ ಮಾನವೂ ಇಲ್ಲದೆ ಸಮಾಜದ ಸೇವೆ ಮಾಡಬಹುದೆನ್ನುವುದನ್ನು ಪುತ್ತಿಲ ಕಾರ್ಯರೂಪದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಅಗಣಿತ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಮಾಡಲು ಪ್ರೇರಣೆ-ಸಹಕಾರ ನೀಡಿದ ಅಸಂಖ್ಯ ಪರಿವಾರದ ಬಂಧುಗಳಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದರು.

‘ಪಾತಾಳರ ನೆನಪು ಕೃತಿ’ ಎಂಬ ಪುಸ್ತಕ ಬಿಡುಗಡೆ ಮಾಡಿದ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, ಪಾತಾಳ ಅವರ ಜೀವನ ಶೈಲಿ, ಅವರು ಸನಾತನ ಸಂಸ್ಕೃತಿ ಮತ್ತು ಆಚರಣೆಗೆ ನೀಡುತ್ತಿದ್ದ ಒತ್ತು ಅನುಕರಣೀಯವಾಗಿದೆ ಎಂದರು. ವಿದ್ವಾನ್ ಮೇಲುಕೋಟೆ ಉಮಾಕಾಂತ್ ಭಟ್ ಮಾತನಾಡಿ, ನಾವಿಂದು ಪಾತಾಳರ ಸ್ಮರಣೆ ಮಾಡುವುದೆಂದರೆ ಅವರಂತೆ ದಿವ್ಯ ಪ್ರಜೆಗಳಾಗುವ ಸಂಕಲ್ಪ ತೊಡಬೇಕು ಎಂದರು. ಯಕ್ಷ ಪ್ರೇಮಿಗಳ ಮಧ್ಯೆ, ಗಣ್ಯಾತಿ ಗಣ್ಯರ ಪಾತಾಳ ವೆಂಕಟರಮಣ ಭಟ್ ಅವರೊಂದಿಗೆ ಅವರ ಮನೆಯ, ತೋಟದ ಕೆಲಸದಾಳುಗಳಾಗಿ, ಕೊನೆ ದಿನಗಳಲ್ಲಿ ಅವರ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿದ್ದ ೭ ಮಂದಿಯನ್ನು ಪಾತಾಳ ವೆಂಕಟರಮಣ ಭಟ್ ಅವರ ಮಕ್ಕಳು ಗೌರವಪೂರ್ವಕ ಸನ್ಮಾನಿಸಿದರು.

ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಗಣ್ಯರಾದ ಡಾ. ವಸಂತ ಕುಮಾರ ತಾಳ್ತಜೆ, ವೇದವ್ಯಾಸ ರಾಮಕುಂಜ, ಕೇಶವ ಭಟ್ ಪಲ್ಲದಕೋಡಿ, ಸುಜೀರ್ ಗಣಪತಿ ನಾಯಕ್, ನರಸಿಂಹ ಭಟ್ ಮೂಡಾಜೆ, ಕಂಗ್ವೆ ವಿಶ್ವನಾಥ ಶೆಟ್ಟಿ, ಡಾ. ಎಂ ಎನ್ ಭಟ್, ಪ್ರಶಾಂತ್ ಗಾಣಿಗ ಶಿವಾಜಿನಗರ, ಕೈಲಾರ್ ರಾಜಗೋಪಾಲ ಭಟ್, ಲೋಕೇಶ್ ಬೆತ್ತೋಡಿ ಭಾಗವಹಿಸಿದ್ದರು. ಪಾತಾಳರ ನೆನಪಿಗಾಗಿ ವಿವಿಧ ಸಂಘ ಸಂಸ್ಥೆಗಳಿಗೆ ಧನ ಸಹಾಯ ವಿತರಿಸಲಾಯಿತು. ಶ್ರೀ ಕೃಷ್ಣ ಪರಂಧಾಮ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಮಹಾಲಿಂಗೇಶ್ವರ ಭಟ್ ಬಿಲ್ಲಂಪದವು ನಿರೂಪಿಸಿದರು. ಅಂಬಾ ಪ್ರಸಾದ್ ಪಾತಾಳ ಸ್ವಾಗತಿಸಿ , ಶ್ರೀರಾಮ ಭಟ್ ಪಾತಾಳ ವಂದಿಸಿದರು.