ಉಪ್ಪಿನಂಗಡಿ: ಮಹಿಳೆ ಸಾವು, ಕೊಲೆ ಶಂಕೆ

| Published : Jun 18 2024, 12:49 AM IST

ಸಾರಾಂಶ

ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿ ಹರಡಿದ್ದು, ಆದರೆ ಅವರ ಸಾವಿನ ಕುರಿತು ಸಾಕಷ್ಟು ಅನುಮಾನಗಳು ಮೂಡಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ, ಮಹಜರು ನಡೆಸಿದರು.

ಉಪ್ಪಿನಂಗಡಿ: ಪೆರ್ನೆ ಗ್ರಾ.ಪಂ. ವ್ಯಾಪ್ತಿಯ ಬಿಳಿಯೂರಿನ ದರ್ಖಾಸು ಎಂಬಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಕಮಲಾ ಎಂಬವರ ಪುತ್ರಿ ಹೇಮಾವತಿ (೩೭) ಮೃತ ಮಹಿಳೆ. ಅವರು ಜೂನ್‌ ೧೬ರಂದು ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿ ಹರಡಿದ್ದು, ಆದರೆ ಅವರ ಸಾವಿನ ಕುರಿತು ಸಾಕಷ್ಟು ಅನುಮಾನಗಳು ಮೂಡಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ, ಮಹಜರು ನಡೆಸಿದರು. ಈ ವೇಳೆ ಸಾವಿನಲ್ಲಿ ಸಂಶಯವಿರುವುದು ದೃಢಪಟ್ಟಿದೆ. ಆಕೆಯ ಸಾವಿಗೆ ಸಂಬಂಧಿಸಿ ಅಕ್ಕನ ಗಂಡ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು, ಆ ರಾತ್ರಿ ಮನೆಯಲ್ಲಿದ್ದ ಹೇಮಾವತಿ ಅವರ ಅಕ್ಕನ ಮಗನಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಅಪ್ರಾಪ್ತ ಬಾಲಕನನ್ನು ಹಾಗೂ ಆತನ ತಂದೆ ಶಂಕರ ಮತ್ತು ಸಹೋದರರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.ಸಂಶಯಕ್ಕೆ ಕಾರಣವಾದ ನಡೆಗಳು: ಜೂ.೧೭ರ ಬೆಳಗ್ಗೆ ಸುಮಾರು ೬:೩೦ಗೆ ಶಂಕರ, ಮೃತ ಹೇಮಾವತಿಯವರ ಮನೆಯ ಪಕ್ಕದಲ್ಲಿರುವ ಮನೆಗೆ ತೆರಳಿದ್ದು, ಹೇಮಾವತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಅಲ್ಲದೆ ತನ್ನ ಮಗನ ಮೇಲೆಯೂ ಪರಚಿದ ಗಾಯಗಳಾಗಿದೆ ಎಂದು ಹೇಳಿದ್ದರು. ಆಗ ಆ ಮನೆಯವರು ಈ ವಿಷಯವನ್ನು ನೀನು ಪೊಲೀಸರಿಗೆ ತಿಳಿಸದಿದ್ದರೆ, ನಾವು ಹೇಳಬೇಕಾಗುತ್ತದೆ ಎಂದಾಗ, ನಾನೇ ಹೇಳುತ್ತೇನೆ ಎಂದು ಹೇಳಿ ಅಲ್ಲಿಂದ ಬಂದು ಪೊಲೀಸರಿಗೂ ವಿಷಯ ತಿಳಿಸಿದ್ದ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.

ಘಟನೆ ಕುರಿತಾಗಿ ಅಪ್ರಾಪ್ತ ಬಾಲಕ, ಆತನ ತಂದೆ ಶಂಕರ ಹಾಗೂ ಶಂಕರನ ಇನ್ನಿಬ್ಬರು ಮಕ್ಕಳನ್ನು ಠಾಣೆಗೆ ಕರೆದೊಯ್ದ ಉಪ್ಪಿನಂಗಡಿ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ. ಶಂಕಿತ ಬಾಲಕ ಅಪ್ರಾಪ್ತ ವಯಸ್ಕನಾಗಿದ್ದು, ವಿಚಾರಣೆ ವೇಳೆ ಭಿನ್ನ ಭಿನ್ನ ಹೇಳಿಕೆ ನೀಡುತ್ತಿರುವುದರಿಂದ ತಕ್ಷಣಕ್ಕೆ ಕೃತ್ಯ ನಡೆಸಿದವರು ಯಾರು ಎನ್ನುವುದನ್ನು ದೃಢಪಡಿಸಲು ಆಗುತ್ತಿಲ್ಲ ಎಂದು ತನಿಖಾಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹೇಮಾವತಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.