ಬೆಳ್ತಂಗಡಿ: ಗುರುವಾಯನಕೆರೆಯಿಂದ ಉಪ್ಪಿನಂಗಡಿವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 13 ಕೋಟಿ ರೂ. ಅಂದಾಜುಪಟ್ಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.

ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಅವರ ಪ್ರಯತ್ನದಲ್ಲಿ ಈಗಾಗಲೇ ರಸ್ತೆಯ 9.50 ಕಿ.ಮೀ. ಉದ್ದ ಚತುಷ್ಪಥ ರಸ್ತೆಯಾಗಿದೆ. ಉಳಿದ ಭಾಗದಲ್ಲಿ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ 1.270 ಕಿ.ಮೀ. ಚತುಷ್ಪಥ ರಸ್ತೆ, ಆಯ್ದ ಭಾಗಗಳಲ್ಲಿ ತಡೆಗೋಡೆ, ಆರ್‌ಸಿಸಿ ಚರಂಡಿ ನಿರ್ಮಾಣ, ಭೂಸ್ವಾಧೀನ ವೆಚ್ಚಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ರಾಜ್ಯ ಸಚಿವ ಸಂಪುಟವು 13 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.

ಹೋರಾಟಕ್ಕೆ ಫಲ: ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸರ್ಕಾರದ ಗಮನ ಸೆಳೆದಿದ್ದರು. ಸಾರ್ವಜನಿಕರೊಂದಿಗೆ ಸೇರಿ, ಪ್ರತಿಭಟನೆಯನ್ನು ನಡೆಸಿದ್ದರು. ವಿಧಾನಸಭೆಯಲ್ಲಿ ಕೂಡ ರಸ್ತೆ ವಿಚಾರ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆದಿದ್ದರು. ಇದೀಗ, ರಸ್ತೆ ಅಭಿವೃದ್ಧಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಎಸ್‌ಎಚ್‌ಡಿಪಿ ಯೋಜನೆಯಡಿ ವಾರ್ಷಿಕವಾಗಿ ಶಾಸಕರುಗಳಿಗೆ ಲಭ್ಯವಾಗುವ 12 ಕೋಟಿ ರು. ಅನುದಾನದಲ್ಲಿ ಸಂಪೂರ್ಣ 12. ಕೋಟಿ ರು. ಮೊತ್ತವನ್ನು ಕೂಡ ಆದ್ಯತೆಯ ಮೇರೆಗೆ ಇದೇ ರಸ್ತೆಗೆ ಕುಪ್ಪೆಟ್ಟಿ- ಉಪ್ಪಿನಂಗಡಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಈಗಾಗಲೇ ಶಾಸಕರು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಮಂಜೂರಾತಿ ದೊರೆತ ತಕ್ಷಣವೇ ಟೆಂಡ‌ರ್ ಪ್ರಕ್ರಿಯೆಗಳನ್ನು ಮುಗಿಸಿ ಸುಸಜ್ಜಿತ ರಸ್ತೆಯು ನಿರ್ಮಾಣಗೊಳ್ಳಲಿದೆ ಎಂದು ಶಾಸಕ ಹರೀಶ್ ಪೂಂಜಾ ಈ ಹಿಂದೆ ಭರವಸೆ ನೀಡಿದ್ದರು. ಇದೀಗ ರಸ್ತೆ ಅಭಿವೃದ್ಧಿಗೆ ಸರ್ಕಾರ ಅನುಮೋದನೆ ನೀಡಿದ್ದು ವಾಹನ ಸವಾರರಿಗೆ ನಿಟ್ಟುಸಿರು ಬಿಡುವಂತಾಗಿದೆ.