ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಆವರಣದಲ್ಲಿ ಕಟ್ಟಿದ್ದ ಜೇನು ಗೂಡನ್ನು ೧೩ ಹರೆಯದ ಶಾಲಾ ವಿದ್ಯಾರ್ಥಿಯೇ ಸುರಕ್ಷಿತವಾಗಿ ತೆರವುಗೊಳಿಸಿದ್ದಾನೆ.
ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಆವರಣದಲ್ಲಿ ಕಟ್ಟಿದ್ದ ಜೇನು ಗೂಡನ್ನು ೧೩ ಹರೆಯದ ಶಾಲಾ ವಿದ್ಯಾರ್ಥಿಯೇ ಸುರಕ್ಷಿತವಾಗಿ ತೆರವುಗೊಳಿಸಿದ್ದಾನೆ.
ಶಾಲಾ ಆವರಣದ ಪೊಟರೆಯಲ್ಲಿ ಜೇನು ನೊಣಗಳು ಹಾರಾಡುತ್ತಿದ್ದು, ಕ್ರೀಡಾಂಗಣದಲ್ಲಿ ಆಡುತ್ತಿದ್ದ ಮಕ್ಕಳಿಗೆ ಕಚ್ಚಿರುವ ಘಟನಾವಳಿ ನಡೆದಿತ್ತು. ಇದರಿಂದ ಕಳವಳಕ್ಕೀಡಾದ ಶಾಲಾ ಆಡಳಿತ ಪೊಟರೆಯಲ್ಲಿ ಆಶ್ರಯ ಪಡೆದಿರುವ ಜೇನು ಕುಟುಂಬವನ್ನು ತೆರವುಗೊಳಿಸಲು ನಿರ್ಧರಿಸಿತ್ತು. ಹೊಗೆಯನ್ನು ಹಾಕಿ ಜೇನು ನೊಣಗಳನ್ನು ಓಡಿಸಬಹುದೆಂಬ ಸಲಹೆ ವ್ಯಕ್ತವಾಗಿತ್ತು. ಈ ಸಲಹೆಯನ್ನು ಆಲಿಸಿದ ಈ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಗವಿನ್ ರೇಶಿಮೆ ಎಂಬಾತ, “ಹೊಗೆಯನ್ನು ಹಾಯಿಸಿದರೆ ಜೇನು ನೊಣಗಳು ಸಾಯುವ ಸಂಭವವಿದೆ. ಅವಕಾಶ ಕೊಟ್ಟರೆ ನಾನೇ ಜೇನು ಕುಟುಂಬವನ್ನು ತೆರವುಗೊಳಿಸುತ್ತೇನೆ’’ ಎಂದು ಶಾಲಾಡಳಿತಕ್ಕೆ ತಿಳಿಸುತ್ತಾನೆ.೧೩ ವರ್ಷದ ವಿದ್ಯಾರ್ಥಿಯಿಂದ ಅಪಾಯಕಾರಿ ಜೇನು ನೊಣಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಶಾಲಾಡಳಿತ ಒಪ್ಪಿಗೆ ನೀಡಲಿಲ್ಲ. ಜೇನು ನೊಣಗಳ ಸುರಕ್ಷತೆ ಬಗ್ಗೆ ಸಂಶೋಧಕರನಾಗಿರುವ ಗವಿನ್ ಗೆ ಆತನ ಹೆತ್ತವರು ಬೆಂಗಾವಲಾಗಿ ನಿಲ್ಲುವ ಭರವಸೆ ನೀಡಿದ ಬಳಿಕ ಶಾಲಾಡಳಿತ ಒಪ್ಪಿಗೆ ನೀಡಿತು. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಈತನಿಗೆ ಅಚ್ಚರಿ ಕಾದಿತ್ತು. ಪೊಟರೆಯಲ್ಲಿ ಸಣ್ಣ ಪ್ರಮಾಣದಲ್ಲಿ ಜೇನು ನೊಣಗಳಿರಬಹುದೆಂದು ಅಂದಾಜಿಸಿದ್ದ ಆತನಿಗೆ ಪೊಟರೆಯೊಳಗೆ ಹಲವು ಹಂತಗಳಲ್ಲಿ ಗೂಡು ಕಟ್ಟಿಕೊಂಡಿದ್ದ ಜೇನು ತುಪ್ಪಭರಿತ ದೊಡ್ಡ ಪ್ರಮಾಣದ ಜೇನು ಗೂಡು ಕಾಣಿಸಿತ್ತು. ಯಾವೊಂದೂ ಜೇನು ನೊಣಗಳಿಗೆ ಹಾನಿಯಾಗದಂತೆ ತಾನು ಮೊದಲೇ ತಂದಿರಿಸಿದ ಜೇನು ಗೂಡಿಗೆ ಜೇನು ನೊಣಗಳನ್ನು ಸ್ಥಳಾಂತರಿಸಿ, ಗೂಡಿನಲ್ಲಿದ್ದ ಜೇನು ತುಪ್ಪವನ್ನು ಗವಿನ್ ಸಂಗ್ರಹಿಸಿದ.
ಮಾತ್ರವಲ್ಲದೆ ಕ್ರೀಡಾಂಗಣದಲ್ಲಿನ ಚಿಕ್ಕು ಮರದಲ್ಲಿದ್ದ ಕೋಲ್ಜೇನನ್ನು ಕೂಡ ಸ್ಥಳಾಂತರಿಸಿದನು. ತನ್ಮೂಲಕ ತಾನು ಕಲಿಯುತ್ತಿರುವ ಶಾಲೆಯ ವಿದ್ಯಾರ್ಥಿಗಳ ಸುರಕ್ಷತೆ ಖಾತರಿಪಡಿಸಿದನು. ಜೊತೆಗೆ ಪ್ರಕೃತಿಯಲ್ಲಿ ಪರೋಪಕಾರಿ ಜೀವಿಯಾಗಿರುವ ಜೇನು ನೊಣಗಳನ್ನೂ ರಕ್ಷಿಸುವಲ್ಲಿ ಸಫಲನಾದನು.ಇನ್ನೋವೇಟರ್ ಅವಾರ್ಡ್: ಜೇನು ಕೃಷಿಕರಿಗೆ ಉಪಯುಕ್ತವಾಗುವ, ಜೇನು ನೋಣಗಳ ಸುರಕ್ಷತೆಯನ್ನಾಧರಿಸಿದ ಜೇನು ಗೂಡಿನೊಳಗಿನ ವಿದ್ಯಮಾನಗಳನ್ನು ತಿಳಿಯುವ ಸಾಧನವನ್ನು ಗವಿನ್ ರೇಶಿಮೆ ಈಗಾಗಲೇ ಸಂಶೋಧಿಸಿದ್ದು, ಈತನ ‘ಹೈವ್ ಗಾಡ್ ೩೬೦’ ಸ್ಮಾರ್ಟ್ ಇಲೆಕ್ಟ್ರಿಕ್ ಸ್ಮೋಕರ್ ವಿತ್ ಹೈವ್ ಮಾನಿಟರಿಂಗ್ ಸಿಸ್ಟಮ್ ಎಂಬ ವಿಜ್ಞಾನ ಮಾದರಿ ಸಂಶೋಧನೆಗೆ ನವಾಚರ ೨೬ –ಐರಿಸ್ ಜೂನಿಯರ್ ಸ್ಪರ್ಧೆಯಲ್ಲಿ ಟಾಪ್ ತ್ರಿ ಇನ್ನೋವೇಟರ್ ಅವಾರ್ಡ್ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಗವಿನ್ ರೇಶಿಮೆ ಅವರು ಇರ್ದೆ ಬೆಟ್ಟಂಪಾಡಿ ನಿವಾಸಿಗರಾದ ಶಿವಪ್ರಸಾದ್ –ರೇಣುಕಾ ದಂಪತಿ ಪುತ್ರನಾಗಿದ್ದು, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.