ಕಂಬಳವೆನ್ನುವುದು ನಮ್ಮ ಸಂಸ್ಕೃತಿ, ಹೆಮ್ಮೆ ಮತ್ತು ಗೌರವವಾಗಿದೆ. ಹಳ್ಳಿಗೆ ಸೀಮಿತವಾಗಿದ್ದ ಕಂಬಳವನ್ನು ರಾಜ್ಯದಲ್ಲಿ ಈಗಾಗಲೇ ಆಯೋಜನೆ ಮಾಡಲಾಗಿದ್ದು, ಇದು ಮುಂದಕ್ಕೆ ರಾಷ್ಟ್ರದ ಆಕರ್ಷಣೆಗೊಳಗಾಗುವಂತೆ ಮಾಡಬೇಕಾಗಿದೆ ಎಂದು ನ್ಯಾಯವಾದಿ ಮಹೇಶ್ ಕಜೆ ಹೇಳಿದರು.
ಉಪ್ಪಿನಂಗಡಿ: ಕಂಬಳವೆನ್ನುವುದು ನಮ್ಮ ಸಂಸ್ಕೃತಿ, ಹೆಮ್ಮೆ ಮತ್ತು ಗೌರವವಾಗಿದೆ. ಹಳ್ಳಿಗೆ ಸೀಮಿತವಾಗಿದ್ದ ಕಂಬಳವನ್ನು ರಾಜ್ಯದಲ್ಲಿ ಈಗಾಗಲೇ ಆಯೋಜನೆ ಮಾಡಲಾಗಿದ್ದು, ಇದು ಮುಂದಕ್ಕೆ ರಾಷ್ಟ್ರದ ಆಕರ್ಷಣೆಗೊಳಗಾಗುವಂತೆ ಮಾಡಬೇಕಾಗಿದೆ ಎಂದು ನ್ಯಾಯವಾದಿ ಮಹೇಶ್ ಕಜೆ ಹೇಳಿದರು.
ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಂಡ ಉಬಾರ್ ಕಂಬಳೋತ್ಸವದಲ್ಲಿ ಮಾ. ೨೯ರಂದು ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ರಾಜ್ಯ ಸರಕಾರ ಈಗಾಗಲೇ ಕಂಬಳಕ್ಕೆ ಅನುದಾನ ಮಂಜೂರು ಮಾಡಿದ್ದು, ಈ ಭಾಗದ ೧೩ ಜನ ಶಾಸಕರು ರಾಜಕೀಯ ಬಿಟ್ಟು ಒಮ್ಮತದಿಂದ ಕಂಬಳಕ್ಕಾಗಿ ಧ್ವನಿ ಎತ್ತಿದಾಗ ಕಂಬಳಕ್ಕೆ ಎಷ್ಟು ಬೇಕಾದರೂ ಅನುದಾನ ತರಿಸಬಹುದು. ಸರಕಾರಿ ಜಾಗ ಇರುವ ಪ್ರತಿ ಊರಿನಲ್ಲೂ ಕಂಬಳದ ಕರೆಗಳನ್ನು ನಿರ್ಮಿಸಿ ಕಂಬಳ ನಡೆಸಬಹುದು ಎಂದರು.ವೇದಿಕೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ ನಾಯಕ್ ಕಂಪ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನೋಟರಿ ವಕೀಲೆ ಅರುಣಾ ದಿನಕರ್ ರೈ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಸುಮಾ ಅಶೋಕ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.ಕಂಬಳ ಸಮಿತಿ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಯುವಕನ ರಕ್ಷಣೆ:
ಕಂಬಳದ ಕೋಣವೊಂದು ನದಿ ನೀರಿಗೆ ಇಳಿದಿದ್ದು, ಅದರೊಂದಿಗೆ ಅದನ್ನು ನಿಯಂತ್ರಿಸುತ್ತಿದ್ದ ಯುವಕನೂ ಎಳೆದೊಯ್ಯಲ್ಪ್ಪಟ್ಟು ನೀರಿನಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದಾಗ ಕಂಬಳ ಕೋಣಗಳ ಬೇರೆ ತಂಡದೊಂದಿಗೆ ಬಂದಿದ್ದ ರಕ್ಷಿತ್ ಎಂಬ ತರುಣ ನದಿಗೆ ಹಾರಿ ಅಪಾಯದಲ್ಲಿದ್ದ ಯುವಕನನ್ನು ರಕ್ಷಿಸಿದರು.ರಕ್ಷಿತ್ ಅವರ ಸಕಾಲಿಕ ಸಮಯ ಪ್ರಜ್ಞೆ ಹಾಗೂ ಸಾಹಸಮಯ ಕಾರ್‍ಯವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶ್ಲಾಘಿಸಿ, ಗೌರವಿಸಿದರು.