ಉಡುಪಿಯ ಉಪ್ಪೂರು ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿವು ಬೀದಿ ನಾಯಿಗಳ ಶೆಲ್ಟರ್‌ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು.

ಉಡುಪಿ: ಇಲ್ಲಿನ ಉಪ್ಪೂರು ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿವು ಬೀದಿ ನಾಯಿಗಳ ಶೆಲ್ಟರ್‌ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು.

ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಿಲ್ಲಾಡಳಿತವು ಉಳ್ಳೂರಿನಲ್ಲಿ 9 ಎಕರೆ ಪ್ರದೇಶದಲ್ಲಿ 18 ಸಾವಿರ ಬೀದಿನಾಯಿಗಳನ್ನು ಸಾಕುವ ಶೆಲ್ಟರ್ ನಿರ್ಮಾಣ ಮಾಡಲು ತಯಾರಿ ನಡೆಸಿದೆ. ಇದಕ್ಕೆ ಗ್ರಾಮಸ್ಥರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.ಉಪ್ಪೂರು ಗ್ರಾಮದಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಇದೆ. ಉಡುಪಿ ಮಹಾನಗರ ಪಾಲಿಕೆಯಾದಾಗ ನಮ್ಮ ಊರು ಕೂಡ ಅದರ ವ್ಯಾಪ್ತಿಗೆ ಬರುತ್ತದೆ. ನಮ್ಮದೇನೂ ಕುಗ್ರಾಮವಲ್ಲ. ಅಭಿವೃದ್ಧಿಗೆ ಅವಕಾಶ ಇರುವ ಗ್ರಾಮ. ಈಗಾಗಲೇ ಉಪ್ಪೂರುನಲ್ಲಿ ಸ್ಥಾಪನೆಯಾಗಬೇಕಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಉಪ ವಿಭಾಗ, ಪೊಲೀಸ್ ಕ್ವಾಟ್ರಸ್, ಕಾಲೇಜುಗಳು ಕೂಡ ರದ್ದಾಗಿವೆ. ಅಲ್ಲೀಗ ಬೀದಿ ನಾಯಿಗಳ ಶೆಲ್ಟರ್ ನಿರ್ಮಾಣವಾದರೆ ಊರಿನ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಒಂದೇ ಪರಿಸರದಲ್ಲಿ ಸಾವಿರಾರು ನಾಯಿಗಳನ್ನು ಸಾಕಿದರೇ ಊರಿನ ನೆಮ್ಮದಿ ನಾಶವಾಗುತ್ತದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜಿಲ್ಲಾಡಳಿತ ಗ್ರಾಪಂಗೂ ಮಾಹಿತಿ ನೀಡದೆ ಏಕಾಏಕಿ ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ಇದಕ್ಕೆ ಇಡೀ ಗ್ರಾಮದ ವಿರೋಧ ಇದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಭೀದ್ ಗದ್ಯಾಳ ಪ್ರತಿಭಟನಾಕಾರರ ಅಹವಾಲು ಆಲಿಸಿ, ಮನವಿ ಸ್ವೀಕರಿಸಿದರು, ಮೊದಲು ತಮ್ಮ ಊರಿನ ಬಡ ಜನರಿಗೆ ಭೂಮಿ, ಹಕ್ಕುಪತ್ರ ಕೊಡಿ. ಮೊದಲು ಜನರ ಕಾಳಜಿ ನಂತರ ನಾಯಿ ಶೆಲ್ಟರ್ ಮಾಡಿ. ಬೀದಿ ನಾಯಿ ಶೆಲ್ಟರ್ ಯೋಜನೆಯನ್ನು ಬೇರೆ ನಿರ್ಜನ ಪ್ರದೇಶಕ್ಕೆ ವರ್ಗಾವಣೆ ಮಾಡಿ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.