ಕನ್ನಡಪ್ರಭ ವಾರ್ತೆ ನಿಪ್ಪಾಣಿ ಪ್ರಧಾನಮಂತ್ರಿ ಘರಕುಲ ಯೋಜನೆಯಡಿ ಪಟ್ಟಣ ವ್ಯಾಪ್ತಿಯ ದಾಯಿಂಗಡೆ ಮಳಾದಲ್ಲಿ ನಿರ್ಮಿಸಿರುವ ಜಿ ಪ್ಲಸ್ ಟು ಮನೆಗಳ ಹಂಚಿಕೆಗಾಗಿ ಬುಧವಾರ ನಡೆದ ಆಶ್ರಯ ಯೋಜನಾ ಸಮಿತಿ ಸಭೆಯಲ್ಲಿ ಭಾರಿ ಗದ್ದಲ ಉಂಟಾಗಿ ಕೊನೆಗೆ ಸಭೆಯನ್ನೇ ರದ್ದುಪಡಿಸಲಾಯಿತು. ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮೊದಲ ನಾಲ್ಕು ಹಂತದಲ್ಲಿ ಹಣ ಪಾವತಿಸಿದ 600 ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಪ್ರಧಾನಮಂತ್ರಿ ಘರಕುಲ ಯೋಜನೆಯಡಿ ಪಟ್ಟಣ ವ್ಯಾಪ್ತಿಯ ದಾಯಿಂಗಡೆ ಮಳಾದಲ್ಲಿ ನಿರ್ಮಿಸಿರುವ ಜಿ ಪ್ಲಸ್ ಟು ಮನೆಗಳ ಹಂಚಿಕೆಗಾಗಿ ಬುಧವಾರ ನಡೆದ ಆಶ್ರಯ ಯೋಜನಾ ಸಮಿತಿ ಸಭೆಯಲ್ಲಿ ಭಾರಿ ಗದ್ದಲ ಉಂಟಾಗಿ ಕೊನೆಗೆ ಸಭೆಯನ್ನೇ ರದ್ದುಪಡಿಸಲಾಯಿತು. ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮೊದಲ ನಾಲ್ಕು ಹಂತದಲ್ಲಿ ಹಣ ಪಾವತಿಸಿದ 600 ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ವಿರೋಧ ವ್ಯಕ್ತಪಡಿಸಿ, 948 ಫಲಾನುಭವಿಗಳು ಹಣ ಪಾವತಿಸಿದ್ದು, ಎಲ್ಲರಿಗೂ ಲಾಟರಿ ನಡೆಸಬೇಕು ಎಂದು ಆಗ್ರಹಿಸಿದರು.ಇದಕ್ಕೆ ಶಾಸಕಿ 800 ಮನೆಗಳು ಸಿದ್ಧವಾಗಿರುವುದರಿಂದ 800 ಮಂದಿಗೆ ಮನೆ ಹಂಚಿಕೆ ಮಾಡಲು ಸಿದ್ಧವಿದೆ. ಆದರೆ ಇದಕ್ಕೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ, ಪರಸ್ಪರ ವಿರುದ್ಧ ಘೋಷಣೆ ಮತ್ತು ಗದ್ದಲ ಉಂಟಾಯಿತು. ಬೆಳಗ್ಗೆ 11.30ಕ್ಕೆ ಆರಂಭವಾದ ಸಭೆ ಮಧ್ಯಾಹ್ನ 4.30ರವರೆಗೆ ಯಾವುದೇ ತೀರ್ಮಾನವಿಲ್ಲದೆಯೇ ನಡೆಯಿತು. ಮನೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅನೇಕ ಫಲಾನುಭವಿಗಳು ಕುಟುಂಬ ಸದಸ್ಯರೊಂದಿಗೆ ಸಭೆಗೆ ಆಗಮಿಸಿದ್ದರು. ಆದರೆ, ಸಂಜೆವರೆಗೆ ಯಾರಿಗೂ ಮನೆಗಳ ವಿತರಣೆ ಆಗಲಿಲ್ಲ. ಕೆಲ ಫಲಾನುಭವಿಗಳು ನಾಲ್ಕು ಹಂತದ ಹಣ ಪಾವತಿಸಿದ್ದರೂ ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಅಳಲು ತೋಡಿಕೊಂಡರು. ಬಳಿಕ ಪರಿಶೀಲನೆ ನಡೆಸಿದಾಗ ಅವರ ಹೆಸರು ಪಟ್ಟಿಯಲ್ಲಿ ಇರುವುದಾಗಿ ತಿಳಿದುಬಂತು.ಈ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಈ ಯೋಜನೆಯಲ್ಲಿ ಯಾವುದೇ ಪಕ್ಷಪಾತ ಅಥವಾ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲ ನಿರಾಶ್ರಿತರಿಗೆ ಮನೆ ನೀಡಲಾಗುವುದು. ಆದರೆ, ಮೊದಲಿಗೆ ನಾಲ್ಕು ಹಂತದ ಹಣ ಪಾವತಿಸಿದವರಿಗೆ ಆದ್ಯತೆ ನೀಡಬೇಕು. ಎಸ್ಸಿ-ಎಸ್ಟಿ ವರ್ಗಕ್ಕೆ 108 ಮನೆ ನೀಡುವ ಗುರಿ ಇತ್ತಾದರೂ ವಾಸ್ತವವಾಗಿ 203 ಮಂದಿಗೆ ಮನೆ ನೀಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕಾಗಿ ₹27 ಕೋಟಿ ಅನುದಾನ ಮಂಜೂರಾಗಿದ್ದು, ಜೊಲ್ಲೆ ಗ್ರೂಪ್‌ನಿಂದ ₹1 ಕೋಟಿ ವೆಚ್ಚ ಮಾಡುವುದಾಗಿ ತಿಳಿಸಿದರು.ಬಳಿಕ ಲಕ್ಷ್ಮಣ ಚಿಂಗಳೆ ಮಾತನಾಡಿ, ಅಧಿಕಾರಿಗಳು ಫಲಾನುಭವಿಗಳ ಪಟ್ಟಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.ಸಭೆಯಲ್ಲಿ ಗೊಂದಲ ಹೆಚ್ಚಾಗುತ್ತಿದ್ದಂತೆ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಸಭೆಯನ್ನು ಮುಂದೂಡಿದರು. ಸ್ಥಳದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಸಭೆ ರದ್ದಾದ ಬಳಿಕವೂ ಮಹಿಳೆಯರು ನಮಗೆ ಮನೆ ಬೇಕು ಎಂದು ಘೋಷಣೆಗಳನ್ನು ಕೂಗಿದರು.