ಸಾರಾಂಶ
ಸಮಾಜ ಕಲ್ಯಾಣ ಸಚಿವರಾಗಿದ್ದಾಗ ದಲಿತರಿಗೆ ಅನ್ಯಾಯ ಮಾಡಿದ್ದೀರಾ ಎಂದು ಮಾದಿಗ ಮುಖಂಡರ ಆರೋಪ
ಗನ್‌ಮ್ಯಾನ್ ದೂರು ಆಧರಿಸಿ ಮೂವರ ಬಂಧನ । ಐಜಿಪಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ನಂತರ ಕ್ರಮಕನ್ನಡಪ್ರಭ ವಾರ್ತೆ ಚಿತ್ರದುರ್ಗಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸುತ್ತಿರುವ ವೇಳೆ ಮೀಟಿಂಗ್ ಹಾಲ್ ಗೆ ನುಗ್ಗಿ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಠಾಣೆ ಪೊಲೀಸರು ಮೂವರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ. ಮಾದಿಗ ಮಹಾಸಭಾದ ಹನುಮಂತಪ್ಪ ದುರ್ಗಾ, ದೇವರಾಜ್, ಸತೀಶ್ ಬಂಧಿತರು.
ಇಲ್ಲಿನ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಮಾದಿಗರ ಆತ್ಮಗೌರವ ಸಮಾವೇಶದಲ್ಲಿ ಪಾಳ್ಗೊಳ್ಳಲು ಚಿತ್ರದುರ್ಗಕ್ಕೆ ಆಗಮಿಸಿದ್ದ ಗೋವಿಂದ ಕಾರಜೋಳ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಗೋಷ್ಠಿ ನಡೆಯುವ ವೇಳೆ ಏಕಾಏಕಿ ನುಗ್ಗಿದ ಹನುಮಂತಪ್ಪ ದುರ್ಗಾ ಸೇರಿದಂತೆ ಹಲವರು ಕಾರಜೋಳ ವಿರುದ್ಧ ಘೋಷಣೆ ಕೂಗಿದರು. ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ದಲಿತರಿಗೆ ಅನ್ಯಾಯ ಮಾಡಿದ್ದೀರಾ ಎಂದು ಕಿಡಿಕಾರಿದರು.ದಿಡೀರ್ ದಾಂಧಲೆಗೆ ತೀವ್ರ ಆಕ್ರೋಶಕ್ಕೆ ಒಳಗಾದ ಮಾಜಿ ಸಚಿವ ಗೋವಿಂದ ಕಾರಜೋಳ, ಗಲಾಟೆ ಮಾಡುವವರ ಹೊರ ಹೋಗುವಂತೆ ಏರು ದನಿಯಲ್ಲಿ ಸೂಚಿಸಿದರು. ನನ್ನ ಜೀವ ಮಾನದಲ್ಲಿ ಇಂತಹದ್ದೊಂದು ಪ್ರಕರಣ ಎದುರಿಸಿಲ್ಲ. ಏನಾದರೂ ಹೇಳುವುದಿದ್ದರೆ ಹೊರಗಡೆ ಚರ್ಚಿಸೋಣ. ಅದು ಬಿಟ್ಟು ಸುದ್ದಿಗೋಷ್ಠಿಯಲ್ಲಿ ಬಂದು ಗಲಾಟೆ ಮಾಡುತ್ತೀರಾ ಎಂದು ಕಿಡಿಕಾರಿದರು. ಇದು ಗೂಂಡಾಗಿರಿ, ಗೂಂಡಾರಾಜ್ಯ ಆಗಿದೆ ಎಂದು ಕಿಡಿ ಕಾರಿದರು.
ಕೂಡಲೇ ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಗಮನಹರಿಸಬೇಕು. ಗಲಾಟೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಾರಜೋಳ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರದ ಅವರು ಘೋಷಣೆ ಕೂಗುವುದು ಮುಂದುವರಿಸಿದರು. ತಕ್ಷಣವೇ ಎಸ್ಪಿ ಹಾಗೂ ಪೂರ್ವ ವಲಯದ ಡಿಐಜಿಗೆ ದೂರವಾಣಿ ಮೂಲಕ ಮಾತನಾಡಿದ ಕಾರಜೋಳ ಗಲಾಟೆ ಮಾಡಿದವರ ಬಂಧಿಸದಿದ್ದರೆ ಎಸ್ಪಿ ಕಚೇರಿ ಮುಂದೆ ಫ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ನಂತರ ಕಾರಜೋಳ ಅವರ ಗನ್ ಮ್ಯಾನ್ ನೀಡಿದ ದೂರಿನ ಅನ್ವಯ ನಗರ ಪೊಲೀಸ್ ಠಾಣೆಯಲ್ಲಿ ಹತ್ತು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಹನುಮಂತಪ್ಪದುರ್ಗ ಸೇರಿದಂತೆ ಮೂವರ ಬಂಧಿಸಿ ಬಿಡುಗಡೆ ಮಾಡಲಾಗಿದೆ.
ವರ್ಗಾವಣೆ ದಂಧೆಯಲ್ಲಿಮುಳುಗಿದ ಸರ್ಕಾರ ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರುವರೆ ತಿಂಗಳಾಗಿದ್ದು ಒಂದೆ ಒಂದು ಹೊಸ ಕಾಮಗಾರಿ ಕೈಗೊಂಡಿಲ್ಲ. ಸಚಿವರುಗಳು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆಂದು ಆರೋಪಿಸಿದರು. ಕರ್ನಾಟಕದಲ್ಲಿ ದೀನ ದಲಿತರಿಗೆ ರಕ್ಷಣೆಯಿಲ್ಲದಂತಾಗಿದೆ. ಪೃಥ್ವಿಸಿಂಗ್ ಎಂಬ ಯುವಕನಿಗೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಸಹೋದರ ಹಾಗೂ ಸಹಚರರು ಸೇರಿಕೊಂಡು ಬೆಳಗಾವಿಯಲ್ಲಿ ಚಾಕುವಿನಿಂದ ಇರಿದಿದ್ದಾರೆ. ಕಾಟಾಚಾರಕ್ಕೆ ಪೊಲೀಸರು ಎಫ್.ಐಆರ್ ದಾಖಲಿಸಿದ್ದಾರೆ. ಇದುವರೆಗೂ ಯಾರನ್ನು ಬಂಧಿಸಿಲ್ಲ. ವೆಂಟಮುರಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿರುವುದು ಇಡಿ ದೇಶವೇ ನಾಚಿ ತಲೆತಗ್ಗಿಸುವಂತ ಹೇಯ ಕೃತ್ಯ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೋಲಾರದಲ್ಲಿ ವಸತಿ ಶಾಲೆ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಚಗೊಳಿಸಲಾಗಿದೆ. ಸಮಾಜ ಕಲ್ಯಾಣ ಸಚಿವರು ದಲಿತರಾಗಿದ್ದುಕೊಂಡು ದಲಿತರನ್ನೆ ಹೀನಾಯವಾಗಿ ಕಾಣುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು? ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೆಣ್ಣುಮಕ್ಕಳು ಸ್ನಾನ ಮಾಡುವ ದೃಶ್ಯಗಳನ್ನು ವೀಡಿಯೋ ಮಾಡಿರುವವರನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.ಕಾಟಾಚಾರದ ಅಧಿವೇಶನಬೆಳಗಾವಿಯ ಸುವರ್ಣ ಸೌಧದಲ್ಲಿ ಹತ್ತು ದಿನಗಳ ಕಾಲ ಕಾಂಗ್ರೆಸ್ ಕಾಟಾಚಾರಕ್ಕಾಗಿ ಅಧಿವೇಶನ ನಡೆಸಿದೆ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆ, ಉದ್ಯಮಗಳು ಬಂದ್ ಆಗಿವೆ. ಮಹಾರಾಷ್ಟ್ರದಲ್ಲಿ ಒಂದು ಯೂನಿಟ್‌ಗೆ ನಾಲ್ಕು ರು.ಗಳನ್ನು ನಿಗದಿಪಡಿಸಲಾಗಿದೆ. ನಮ್ಮ ರಾಜ್ಯದಲ್ಲಿಯೂ ಅದರಂತೆ ದರ ನಿಗದಿಪಡಿಸಿ ಉದ್ಯಮಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಲು ಕಟ್ಟಿದರೆ ರೈತರ ಬಡ್ಡಿ ಮನ್ನಾ ಎಂದು ಆಸೆ ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ರೈತರ ಬಳಿ ಎಲ್ಲಿ ಹಣವಿದೆ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಮೂರು ಲಕ್ಷದವರೆಗೆ ಸಾಲ ನೀಡಲಾಗಿತ್ತು. 17 ಲಕ್ಷ 29 ಸಾವಿರ ರೈತರಿಗೆ 13400 ಕೋಟಿ ರು ಬೆಳೆ ಸಾಲ ಬಡ್ಡಿಯಿಲ್ಲದಂತೆ ನಮ್ಮ ಸರ್ಕಾರ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಲೂ ರೈತರ ಬಗ್ಗೆ ಕಳಕಳಿಯಿದ್ದರೆ ಎರಡು ಲಕ್ಷ ರು ಗಳವರೆಗೆ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದರು.
11144 ಕೋಟಿ ರು ಗಳ ಎಸ್ಸಿಪಿ, ಟಿಎಸ್ಪಿ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡಿದೆ. ಈ ಅನುದಾನವ ವಾಪಾಸು ಕೊಡುವಂತೆ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಒತ್ತಾಯಿಸಿತ್ತು. ರಾಜ್ಯದ ನೀರಾವರಿ ಯೋಜನೆಗಳಿಗೆ ಸರ್ಕಾರ ಅನುದಾಯ ಕಾಯ್ದಿರಿಸಿಲ್ಲವೆಂದು ಕಾರಜೋಳ ದೂರಿದರು.ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
---------------------