ಸಾರಾಂಶ
ಕುಷ್ಟಗಿ ತಾಲೂಕಿನ ಹನುಮಸಾಗರ, ಹನುಮನಾಳ ಮತ್ತಿತರ ಗ್ರಾಮಗಳಲ್ಲಿ ಗುಡುಗು ಗಾಳಿ ಸಮೇತ ಮಳೆಯಾಗಿದ್ದು, ಹಲವೆಡೆ ಪಪ್ಪಾಯಿ ಗಿಡಗಳು, ಹಾಗೂ ವೀಳ್ಯದೆಲೆ ಬಳ್ಳಿ ನೆಲಕಚ್ಚಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕುಷ್ಟಗಿ/ಹನುಮಸಾಗರ: ಪಟ್ಟಣ ಹಾಗೂ ತಾಲೂಕಿನ ಹನುಮಸಾಗರ, ಹನುಮನಾಳ ಮತ್ತಿತರ ಗ್ರಾಮಗಳಲ್ಲಿ ಗುಡುಗು ಗಾಳಿ ಸಮೇತ ಮಳೆಯಾಗಿದ್ದು, ಹಲವೆಡೆ ಬೆಳೆಗಳು ಹಾಳಾಗಿವೆ.
ತುಗ್ಗಲಡೋಣಿ ಗ್ರಾಮದ ಶಿವಪುತ್ರಪ್ಪ ಕುಣಿ ಮಿಂಚಿ ಅವರು 1 ಎಕರೆ 23 ಗುಂಟೆ ಜಮೀನಿನಲ್ಲಿ ಪಪ್ಪಾಯಿ ಬೆಳೆದಿದ್ದು, ಗುರುವಾರ ಸಂಜೆ ಸುರಿದ ಗಾಳಿ-ಮಳೆಯಿಂದಾಗಿ ಹಾನಿಗೀಡಾಗಿದೆ. ಹಿರೇಗೊಣ್ಣಾಗರ ಶಿವಶರಣಪ್ಪ ಮೆಣಸಿಗೇರಿ ಎಂಬವರಿಗೆ ಸೇರಿದ ತೋಟದಲ್ಲಿ ಸುಮಾರು ಒಂದು ಸಾವಿರದಷ್ಟು ಪಪ್ಪಾಯಿ ಗಿಡಗಳು ನೆಲಕಚ್ಚಿವೆ.ರೈತ ಸಿದ್ದಪ್ಪ ವ್ಯಾಪಾರಿ ಎಂಬವರಿಗೆ ಸೇರಿದ ತೋಟದಲ್ಲಿ 600ಕ್ಕೂ ಅಧಿಕ ಪಪ್ಪಾಯಿ ಗಿಡಗಳು, ರಂಗಪ್ಪ ಮೆಣಸಿಗೇರಿ ಎಂಬ ರೈತನಿಗೆ ಸೇರಿದ ತೋಟದಲ್ಲಿ 500ಕ್ಕೂ ಹೆಚ್ಚು ಪಪ್ಪಾಯಿ ಗಿಡಗಳು ಹಾಳಾಗಿವೆ.
ಮಡಿಕೇರಿ ಗ್ರಾಮದ ರೈತ ಯಲ್ಲಪ್ಪ ಬಸಪ್ಪ ಗೋನಾಳ ಅವರ ತೋಟದಲ್ಲಿ ಎಲೆಬಳ್ಳಿಯು ಸಂಪೂರ್ಣ ನೆಲಕಚ್ಚಿ ಹೋಗಿದ್ದು, ಒಟ್ಟಿನಲ್ಲಿ ಈ ಅಕಾಲಿಕ ಮಳೆಯಿಂದಾಗಿ ಹಾಗೂ ಬೀಸಿದ ಗಾಳಿಯಿಂದಾಗಿ ರೈತರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಹಾರ ಒದಗಿಸಿಕೊಡಬೇಕು ಎಂದು ರೈತರು ಕೋರಿದ್ದಾರೆ.ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ: ಗಾಳಿ-ಮಳೆಯಿಂದ ಹಾಳಾದ ತೋಟಗಳಿಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಪ್ಪ ಶಾಂತಗೇರಿ, ಕಂದಾಯ ನಿರೀಕಕ್ಷಕ ಉಮೇಶಗೌಡ, ಗ್ರಾಮ ಆಡಳಿತ ಅಧಿಕಾರಿ ಸಂಗಮೇಶ, ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಗುರುನಾಥ ಹೊಸಮನಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.