ಸಾರಾಂಶ
ಭಾರಿ ಬಿರುಗಾಳಿಯಿಂದ ಅಂತರ್ ರಾಜ್ಯ ರಸ್ತೆಗೆ ಅಡ್ಡಲಾಗಿ ಭಾರಿ ಗಾತ್ರದ ಮರ ಬಿದ್ದಿದ್ದು, ಮತ್ತೊಂದೆಡೆ ಮನೆಯ ಮೇಲೆ ತೆಂಗಿನ ಮರ ಬಿದ್ದಿರುವ ಘಟನೆ ಸೋಮವಾರ ಬೆಳಗ್ಗೆ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಬಿರುಗಾಳಿಯಿಂದ ಅಂತರ್ ರಾಜ್ಯ ರಸ್ತೆಗೆ ಅಡ್ಡಲಾಗಿ ಭಾರಿ ಗಾತ್ರದ ಮರ ಬಿದ್ದಿದ್ದು, ಮತ್ತೊಂದೆಡೆ ಮನೆಯ ಮೇಲೆ ತೆಂಗಿನ ಮರ ಬಿದ್ದಿರುವ ಘಟನೆ ಸೋಮವಾರ ಬೆಳಗ್ಗೆ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಜರುಗಿದೆ.ತಾಲೂಕಿನ ಲೊಕ್ಕನಹಳ್ಳಿ ರಸ್ತೆಯಲ್ಲಿ ಬೂದಿ ಪಡಗ ಗ್ರಾಮದ ಹಳ್ಳದ ಬಳಿ ಬೆಳಗಿನ ಜಾವ ಬಿರುಗಾಳಿಗೆ ಭಾರಿ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅಲ್ಲದೇ ಗ್ರಾಮದ ಕಮಲಮ್ಮ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಯ ಮೇಲ್ಚಾವಣಿ ಹೆಂಚುಗಳು ಸೇರಿದಂತೆ ಮನೆಗೆ ಹಾನಿಯಾಗಿದೆ. ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
ವಾಹನ ಸವಾರರ ಪರದಾಟ: ಈ ರಸ್ತೆಯು ಬೂದಿಪಡಗ, ಲೋಕ್ಕನಹಳ್ಳಿ, ಒಡೆಯರ ಪಾಳ್ಯ ಮತ್ತು ವಿವಿಧ ಗ್ರಾಮಗಳು ಸೇರಿದಂತೆ ತಮಿಳುನಾಡಿನ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ದಿನನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಬೆಳಗಿನ ಜಾವ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.ಮರಗಳ ತೆರವು ಸಂಚಾರಕ್ಕೆ ಮುಕ್ತ: ರಸ್ತೆಗೆ ಮರ ಅಡ್ಡಲಾಗಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮರ ತೆರವುಗೊಳಿಸಿದರು.
ಈ ರಸ್ತೆಯಲ್ಲಿ ಹಲವಾರು ಮರಗಳು ಒಣಗಿ ನಿಂತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಒಣಗಿರುವ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು.ವತ್ಸಲ, ಪಿಜಿ ಪಾಳ್ಯ ಗ್ರಾಮ