ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಉದ್ಯಮಿಯೊಬ್ಬರನ್ನು ಅಪಹರಿಸಿ ಹಲ್ಲೆಗೈದು ಬೆದರಿಸಿ ₹7 ಲಕ್ಷ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಯುಪಿಎಸ್ಸಿ ಆಕಾಂಕ್ಷಿ, ವಿಜಯನಗರದ ನಿವಾಸಿ ಸಚಿನ್(28) ಮತ್ತು ಪ್ರಕಾಶ್ ನಗರದ ಗೌರಿಶಂಕರ(27) ಬಂಧಿತರು. ಆರೋಪಿಗಳಿಂದ ₹7 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಆಟೋರಿಕ್ಷಾ, ಎರಡು ಮೊಬೈಲ್ ಫೋನ್ ಹಾಗೂ ಒಂದು ಚಾಕುವನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಸರವಣ ಮತ್ತು ಯಶ್ ಎಂಬುವವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳು ಜ.5ರಂದು ಮಧ್ಯಾಹ್ನ 12.50ರ ಸುಮಾರಿಗೆ ರಾಜಾಜಿನಗರದ ಡಾ। ರಾಜ್‌ಕುಮಾರ್ ರಸ್ತೆಯಲ್ಲಿ ಉದ್ಯಮಿ ಚೇತನ್ ಶಾ ಎಂಬುವವರನ್ನು ಅಪಹರಿಸಿ ಬೆದರಿಸಿ ₹7 ಲಕ್ಷ ಸುಲಿಗೆ ಮಾಡಿ ಬಳಿಕ ಅವರನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಏನಿದು ಪ್ರಕರಣ?:
ದೂರುದಾರ ಚೇತನ್ ಶಾ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಯಾಕ್ಟರಿ ಹೊಂದಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ರಾಜಾಜಿನಗರ 4ನೇ ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ಚೇತನ್ ಅವರ ಹಿರಿಯ ಮಗಳು ದ್ವಿತೀಯ ಪಿಯುಸಿ ತೇರ್ಗಡೆಯಾದ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಮೇ ತಿಂಗಳಲ್ಲಿ ನಗರದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯದಲ್ಲಿ ಬಿಬಿಎ ಪದವಿಗೆ ಸೇರಿಸಲು ಪ್ರಯತ್ನಿಸುತ್ತಿದ್ದರು.₹4 ಲಕ್ಷಕ್ಕೆ ಸೀಟು ಕೊಡಿಸಲು ಒಪ್ಪಿಗೆ: ತಮ್ಮ ಪುತ್ರಿಯ ಸ್ನೇಹಿತ ಯಶ್ ಎಂಬಾತ ‘ನನ್ನ ಸ್ನೇಹಿತ ಸಚಿನ್ ಎಂಬಾತನಿಗೆ ಆ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪರಿಚಿತರು ಇದ್ದು, ನಿಮ್ಮ ಮಗಳಿಗೆ ಬಿಬಿಎಗೆ ಸೀಟು ಕೊಡಿಸುತ್ತಾನೆ’ ಎಂದು ಹೇಳಿದ್ದ. ಅದರಂತೆ ಚೇತನ್, ಸಚಿನ್‌ನನ್ನು ಭೇಟಿ ಮಾಡಿದಾಗ, ‘ಸೀಟು ಕೊಡಿಸಲು ₹4 ಲಕ್ಷ ಖರ್ಚಾಗಲಿದೆ’ ಎಂದು ಹೇಳಿದ್ದ. ಇದಕ್ಕೆ ಚೇತನ್ ಒಪ್ಪಿದ್ದರು. ಆದರೆ, ಹಲವು ದಿನ ಕಳೆದರೂ ಸಚಿನ್ ಮಾಹಿತಿ ನೀಡಿಲ್ಲ.
ಬೇರೆ ವ್ಯಕ್ತಿಯ ಸಹಾಯದಿಂದ ಸಿಕ್ಕ ಸೀಟು:ಈ ನಡುವೆ ಚೇತನ್ ಅವರು ಬೇರೊಬ್ಬರ ಸಹಾಯದಿಂದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯದಲ್ಲಿ ತಮ್ಮ ಮಗಳನ್ನು ಬಿಬಿಎ ಪದವಿಗೆ ಸೇರಿಸಿದ್ದರು. ಈ ವಿಚಾರ ತಿಳಿದ ಸಚಿನ್, ಚೇತನ್ ಅವರನ್ನು ಭೇಟಿಯಾಗಿ ‘ನಾನೇ ನಿಮ್ಮ ಮಗಳಿಗೆ ಬಿಬಿಎ ಪದವಿಗೆ ಸೀಟು ಕೊಡಿಸಿದ್ದೇನೆ. ಹೀಗಾಗಿ ನನಗೆ ₹4 ಲಕ್ಷ ನೀಡಬೇಕು’ ಎಂದು ಬೇಡಿಕೆ ಇರಿಸಿದ್ದಾನೆ. ಆಗ ಚೇತನ್ ಅವರು, ‘ನೀನು ನನ್ನ ಮಗಳಿಗೆ ಸೀಟು ಕೊಡಿಸಿಲ್ಲ. ಬೇರೆ ವ್ಯಕ್ತಿಯ ಸಹಾಯದಿಂದ ನನ್ನ ಮಗಳಿಗೆ ಸೀಟು ಕೊಡಿಸಿದ್ದೇನೆ. ಹೀಗಾಗಿ ನಾನು ಯಾವುದೇ ಹಣ ನೀಡುವುದಿಲ್ಲ’ ಎಂದಿದ್ದಾರೆ. ಇದರಿಂದ ಕೋಪಗೊಂಡ ಸಚಿನ್, ಚೇತನ್ ಜತೆಗೆ ಜಗಳ ತೆಗೆದು ಬೆದರಿಕೆ ಹಾಕಿ ಹೊರಟು ಹೋಗಿದ್ದ.
ಹಾಡಹಗಲೇ ಅಪಹರಣ!ಜ.5ರಂದು ಮಧ್ಯಾಹ್ನ 12.50ರ ಸುಮಾರಿಗೆ ಚೇತನ್ ರಾಜಾಜಿನಗರದ ಡಾ। ರಾಜ್‌ಕುಮಾರ್ ರಸ್ತೆಯಲ್ಲಿ ತೆರಳುವಾಗ, ನಾಲ್ವರು ಸಹಚರರೊಂದಿಗೆ ಆಟೋರಿಕ್ಷಾದಲ್ಲಿ ಬಂದ ಸಚಿನ್, ಏಕಾಏಕಿ ಕಾರು ಅಡ್ಡಹಾಕಿದ್ದಾನೆ. ಬಳಿಕ ಚೇತನ್ ಅವರನ್ನು ಅವರದ್ದೇ ಕಾರಿನಲ್ಲಿ ಅಪಹರಿಸಿದ್ದರು. ಚೇತನ್ ಮೇಲೆ ಕೈಗಳಿಂದ ಹಲ್ಲೆ ಮಾಡಿ ₹7 ಲಕ್ಷಕ್ಕೆ ಬೇಡಿಕೆ ಇರಿಸಿದ್ದಾರೆ.
₹7 ಲಕ್ಷ ಸುಲಿಗೆ:ಇದರಿಂದ ಭಯಗೊಂಡ ಚೇತನ್, ಪತ್ನಿಗೆ ಕರೆ ಮಾಡಿ ₹7 ಲಕ್ಷ ಕೊಡಿಸಿದ್ದರು. ಆರೋಪಿಗಳು ಚೇತನ್ ಅವರನ್ನು ನಗರದ ವಿವಿಧೆ ರಸ್ತೆಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ನಿನ್ನ ಮತ್ತು ನಿನ್ನ ಕುಟುಂಬವನ್ನು ಮುಗಿಸಿ ಬಿಡುವುದಾಗಿ ಬೆದರಿಸಿ ಮಧ್ಯಾಹ್ನ 2.30ರ ಸುಮಾರಿಗೆ ಡಾ.ರಾಜ್ ಕುಮಾರ್ ರಸ್ತೆಯ ನವರಂಗ್ ಬಾರ್ ಬಳಿ ಚೇತನ್‌ನನ್ನು ಬಿಟ್ಟು ಪರಾರಿಯಾಗಿದ್ದರು.ಆರೋಪಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ!: ಆರೋಪಿ ಸಚಿನ್ ಬಿಬಿಎ ಪದವೀಧರನಾಗಿದ್ದು, ನಗರದ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ತನ್ನ ಸ್ನೇಹಿತರ ಜತೆಗೆ ಸೇರಿಕೊಂಡು ಸಂಚು ರೂಪಿಸಿ ಉದ್ಯಮಿ ಚೇತನ್ ಅವರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ. ಮತ್ತೊಬ್ಬ ಆರೋಪಿ ಗೌರಿ ಶಂಕರ್ ಆಟೋ ಚಾಲಕನಾಗಿದ್ದಾನೆ. ಎಲ್ಲಾ ಆರೋಪಿಗಳು ಜಿಮ್‌ನಲ್ಲಿ ಸ್ನೇಹಿತರಾಗಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.