ಹಲುವಾಗಲುದಲ್ಲಿ 66 ಹಳ್ಳಿಗಳ ಒಡತಿ ಊರಮ್ಮದೇವಿ ಜಾತ್ರೆ ಇಂದಿನಿಂದ

| Published : May 14 2024, 01:00 AM IST

ಹಲುವಾಗಲುದಲ್ಲಿ 66 ಹಳ್ಳಿಗಳ ಒಡತಿ ಊರಮ್ಮದೇವಿ ಜಾತ್ರೆ ಇಂದಿನಿಂದ
Share this Article
  • FB
  • TW
  • Linkdin
  • Email

ಸಾರಾಂಶ

ಹಲುವಾಗಲು, ಕಣವಿ ಗ್ರಾಮಗಳ ಗ್ರಾಮದೇವತೆಯಾದ ಊರಮ್ಮದೇವಿಯ ವಿವಿಧ ಹರಕೆ, ಪೂಜೆಗೆ ಇಡೀ ಊರಲ್ಲಿ ಸಂಭ್ರಮ ಮನೆ ಮಾಡಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಮಾಜಿ ಸಿಎಂ ದಿ.ನಿಜಲಿಂಗಪ್ಪ ಹುಟ್ಟೂರಾದ ತಾಲೂಕಿನ ಹಲುವಾಗಲು ಗ್ರಾಮದಲ್ಲಿ 9 ವರ್ಷಗಳ ನಂತರ ಅತ್ಯಂತ ವಿಜೃಂಭಣೆಯಿಂದ ಊರಮ್ಮದೇವಿ ಜಾತ್ರೆಯನ್ನು ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಹಲುವಾಗಲು, ಕಣವಿ ಗ್ರಾಮಗಳ ಗ್ರಾಮದೇವತೆಯಾದ ಊರಮ್ಮದೇವಿಯ ವಿವಿಧ ಹರಕೆ, ಪೂಜೆಗೆ ಇಡೀ ಊರಲ್ಲಿ ಸಂಭ್ರಮ ಮನೆ ಮಾಡಿದೆ.

ಕಾರ್ಯಕ್ರಮಗಳು: ಮೇ 14 ರಂದು ಬೆಳಿಗ್ಗೆ 8 ಗಂಟೆಗೆ ದೇವಿಯ ಅಲಂಕಾರ, ಪುಷ್ಪಾರ್ಚನೆ, 9 ಗಂಟೆಗೆ ದೃಷ್ಟಿ ಇಡುವುದು, ಮಾಂಗಲ್ಯಧಾರಣೆ, ಪೂಜೆ, 11 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಗ್ರಾಮದೊಳಗೆ ದೇವಿಯು ಸಕಲ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಚೌತಮನೆ ಕಟ್ಟೆಗೆ ಪ್ರತಿಷ್ಠಾಪನೆಗೊಳ್ಳುವುದು.

ಮೇ 15ರಂದು ಬೆಳಿಗ್ಗೆ 6 ಗಂಟೆಗೆ ಗ್ರಾಮದ ಸುತ್ತ ಚರಗ ಹೊಡೆಯುವುದು, ದೇವಿಯ ಸನ್ನಿಧಿಯಲ್ಲಿ ರಾಣಿಗರಿಂದ ವಿವಿಧ ವಿನೋದಾವಳಿಗಳು, ಶ್ರೀದೇವಿಯ ಗುಣಗಾನ, ಹಾಸ್ಯಗಾರರಿಂದ ನರ್ತನ, ಸಂಜೆ 4 ಗಂಟೆಗೆ ರೈತರಿಗೆ ಹುಲುಸು ಕೊಡುವುದು, ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಮೇ 16ರಂದು ಶ್ರೀದೇವಿಯ ಸ್ತೋತ್ರ, ಮಧ್ಯಾಹ್ನ 3 ಗಂಟೆಗೆ ಬನ್ನಿಮಂಟಪಕ್ಕೆ ದೊಡ್ಡ ಬಂಡಿ ರಥದ ಮೂಲಕ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಗಡಿ ಜಾತ್ರೆಗೆ ಹೋಗುವುದು, ನಂತರ ಬನ್ನಿ ಮಂಟಪದಲ್ಲಿ ಶ್ರೀದೇವಿಯು ಗ್ರಾಮಸ್ಥರಿಗೆ ಅಭಯ ಕೊಡುವುದು.

ಮೇ 17ರಂದು ಬೆಳಿಗ್ಗೆ 9 ಗಂಟೆಗೆ ಶ್ರೀದೇವಿಯ ಪುನಾರ್ಚನೆ ಮತ್ತು ಮಹಾ ಮಂಗಳಾರತಿ ನೆರವೇರಲಿದೆ.

ದೇವಿಯ ಇತಿಹಾಸ: ಕಟ್ಟಿಗೆಯಿಂದ ಮಾಡಿದ ಎರಡು ದೇವತೆಗಳುಳ್ಳ ಪೆಟ್ಟಿಗೆ ತುಂಗಭದ್ರಾ ನದಿಯಲ್ಲಿ ತೇಲುತ್ತಾ ಗರ್ಭಗುಡಿ ಗ್ರಾಮದ ನದಿ ತಟದಲ್ಲಿ ಬಂದು ನಿಂತಿತು. ಬಡಿಗೇರ ವ್ಯಕ್ತಿಯೋರ್ವ ಮೀನುಗಾರರ ಸಹಾಯದಿಂದ ದಡಕ್ಕೆ ಇದನ್ನು ತರುತ್ತಾನೆ. ನಂತರ ದನ ಕಾಯುವ ಹುಡುಗನ ಮೈಯಲ್ಲಿ ದೇವಿ ಮೈದುಂಬಿ ತನ್ನ ಇತಿಹಾಸ ತಿಳಿಸುತ್ತಾಳೆ. ಆಗ ಗರ್ಭಗುಡಿ ಗ್ರಾಮದಲ್ಲಿ ಮೊದಲನೆ ಪೂಜೆ ನಡೆಯುತ್ತದೆ. ಗರ್ಭಗುಡಿ ಗ್ರಾಮವೇ ದೇವಿಯ ತವರು ಮನೆ ಎನ್ನುವುದು ಹಿರಿಯರ ಹೇಳಿಕೆ.ಬಳಿಕ ಗರ್ಭಗುಡಿ ಗ್ರಾಮದಿಂದ ದೇವಿಮೂರ್ತಿಯುಳ್ಳ ಪೆಟ್ಟಿಗೆ ಕಳ್ಳತನವಾಗಿ ದಾವಣಗೆರೆ ತಾಲೂಕಿನ ಮಾಗನಹಳ್ಳಿ ಮತ್ತು ಬೇತೂರು ಸಮೀಪದ ಗಡಿ ಬೇವಿನಮರದ ಸ್ಥಳದಲ್ಲಿ ತಂದು ಬಿಡುತ್ತಾರೆ. ಆಗ ಮಾಗನಹಳ್ಳಿ ಮತ್ತು ಬೇತೂರು ಗ್ರಾಮದವರು ಇದು ನಮ್ಮದೆಂದು ವ್ಯಾಜ್ಯ ಮಾಡಿದಾಗ ಬಾಲಕನೊಬ್ಬನ ಮೈಯಲ್ಲಿ ಅವತರಿಸಿದ ದೇವಿ ನಾನು ಗರ್ಭಗುಡಿ ಗ್ರಾಮದ ಮಗಳೆಂದು ಹೇಳುತ್ತಾಳೆ. ನಂತರ ಮಾಗನಹಳ್ಳಿ ಹಾಗೂ ಗರ್ಭಗುಡಿ ಗ್ರಾಮದವರು ನಮಗೆ ಸೇರಿದ ದೇವಿ ಎಂದು ವಾದ ಮಾಡುತ್ತಿರುವಾಗ ಅಂತಿಮವಾಗಿ ನಾನು ಎಲ್ಲಿಯೂ ಇರುವುದಿಲ್ಲ. 66 ಹಳ್ಳಿಗಳ ಒಡತಿ, ನನ್ನ ಕರೆದು ಎಲ್ಲರೂ ಪೂಜೆ ಪುನಸ್ಕಾರ ಮಾಡಿರಿ ಎಂದು ಹೇಳುತ್ತಾಳೆ. ಅಲ್ಲಿಂದ ಇಲ್ಲಿವರೆಗೂ ಯಾವ ವಾಹನವಿಲ್ಲದೇ ತಲೆ ಮೇಲೆ ಹೊತ್ತು ದೇವಿಯನ್ನು ನಡೆದುಕೊಂಡೇ ಊರಿಂದೂರಿಗೆ ತಲುಪಿಸುತ್ತಾರೆ ಎನ್ನುತ್ತಾರೆ ಹಿರಿಯರಾದ ಹಲುವಾಗಲು ಸಣ್ಣಿಂಗಪ್ಪ.ಮಾಗನಹಳ್ಳಿ ಗ್ರಾಮದಿಂದ ಹಲುವಾಗಲು ಬಳಿ ಇರುವ ಗರ್ಭಗುಡಿ ಗ್ರಾಮದವರೆಗೆ 66 ಹಳ್ಳಿಗಳಲ್ಲಿ ಈ ದೇವಿಯ ಭಕ್ತರಿದ್ದಾರೆ. ಗರ್ಭಗುಡಿ ಗ್ರಾಮ ದೇವಿಯ ತವರು ಮನೆಯಾದರೆ, ಹರಿಹರ ಗಂಡನ ಮನೆ ಎನಿಸಿಕೊಂಡಿದೆ.