ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದಲ್ಲಿರುವ ಅರ್ಬನ್ ಬ್ಯಾಂಕಿಗೆ 85 ವರ್ಷಗಳ ಇತಿಹಾಸವಿದೆ. ಪಟವರ್ಧನ ಮಹರಾಜರ ಕಾಲದಲ್ಲಿ ಹಣದುಬ್ಬರ ತೊಂದರೆ ಉಂಟಾದಾಗ ಅಪ್ಪಾರಾವ ಶಿಂಧೆಯವರು ಬ್ಯಾಂಕ್ ಸ್ಥಾಪನೆ ಮಾಡಿದರು ಎಂದು ಅಧ್ಯಕ್ಷ ರಾಹುಲ ಕಲೂತಿ ಹೇಳಿದರು.ಬುಧವಾರ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕೇವಲ ವರ್ಷ ಪೂರೈಸುವುದಲ್ಲ. ಬದಲಾಗಿ ಪೂರೈಸಿದ ವರ್ಷದಲ್ಲಿ ಏನು ಸಾಧನೆ ಮಾಡಿದೆ ಎಂಬುವುದು ಮುಖ್ಯ. ಹಿಂದಿನ ಕಾಲದಲ್ಲಿ ಬಡತನ, ಹಣದುಬ್ಬರ, ನಿರುದ್ಯೋಗದಿಂದ ಜನರು ನರಳುತ್ತಿದ್ದರು. ಅದಕ್ಕೆ ಪರಿಹಾರವಾಗಿ ಈ ಬ್ಯಾಂಕ್ ಪ್ರಾರಂಭಿಸಲಾಯಿತು. ಡಿ.ಕೆ.ಶಿವಕುಮಾರ್ ಅವರು ನಮ್ಮ ತಾತ ಮಾಜಿ ಶಾಸಕ ದಿ.ರಾಮಣ್ಣ ಕಲೂತಿ ಅವರ ಕಾಲದಲ್ಲಿ ನಗರಕ್ಕೆ ಬಂದಿದ್ದರು ಎಂದು ನೆನಪಿಸಿಕೊಂಡ ಅವರು, ಬ್ಯಾಂಕ್ ಕಟ್ಟಡ ಉದ್ಘಾಟನೆಗೆ ಸ್ವಂತ ಕರ್ಚಿನಲ್ಲಿ ಆಗಮಿಸಿರುವುದು ಹೆಮ್ಮೆಯ ಸಂಗತಿ. ಬ್ಯಾಂಕ್ 6 ಹೊಸ ಶಾಖೆ ಪ್ರಾರಂಭಿಸಲಿದೆ ಎಂದು ಹೇಳಿದರು.
ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ನೀರಾವರಿ ಯೋಜನೆಗಳ ಅನುಷ್ಠಾನ ಈ ಭಾಗಕ್ಕೆ ಅವಶ್ಯಕವಾಗಿದೆ. ಮಳೆಗಾಲದಲ್ಲಿ ಪ್ರವಾಹ ಬಂದು ಮುಳುಗಡೆ ಆದರೆ, ಬೇಸಿಗೆಯಲ್ಲಿ ಬರದಿಂದ ರೈತರು ತತ್ತರಿಸುತ್ತಾರೆ. ಸರಿಯಾಗಿ ನೀರಾವರಿ ಸೌಲಭ್ಯಗಳಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಹೆಸರಿನಲ್ಲಿ ಕಟ್ಟಿದ ಆಲಮಟ್ಟಿ ಜಲಾಶಯದಲ್ಲಿ 524 ಮೀ.ನೀರು ಸಂಗ್ರಹಿಸಲಾಗುತ್ತಿಲ್ಲ. ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಮೂಲ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು, ರಾಜ್ಯದ ಬಹುಬೇಡಿಕೆಯ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಅಗತ್ಯ ಸಹಕಾರ, ಆರ್ಥಿಕ ಸಹಾಯ ನೀಡಬೇಕು. ಉತ್ತರ ಕರ್ನಾಟಕದ ಶಾಸಕರು, ಸಚಿವರು, ಜನಪ್ರತಿನಿಧಿಗಳು ಪ್ರಧಾನಿಮಂತ್ರಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕೆಂದು ಹೇಳಿದರು.ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಸಹಕಾರಿ ಸಂಘಗಳು ತೆಗೆದುಕೊಂಡ ನಿರ್ಧಾರದಿಂದ ಉತ್ತರ ಕರ್ನಾಟಕದಲ್ಲಿ 50ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳು ನಿರ್ಮಾಣಗೊಂಡಿವೆ. ಸಹಕಾರಿ ಬ್ಯಾಂಕಗಳು ಸಾಲ ನೀಡಿದ್ದರಿಂದ ಕಾರ್ಖಾನೆ ಕ್ರಾಂತಿ ಉಂಟಾಗಿದೆ. ಅರ್ಬನ್ ಬ್ಯಾಂಕಿನ ಪಾತ್ರ ತುಂಬಾ ಇದೆ. ಬ್ಯಾಂಕಿನ ಹಿರಿಯ ನಿರ್ದೇಶಕರು ಸೇರಿಕೊಂಡು ಒಬ್ಬ ಯುವಕನಿಗೆ ಅಧಿಕಾರದ ಚುಕ್ಕಾಣೆ, ಬ್ಯಾಂಕಿನ ಜವಾಬ್ದಾರಿ ನಿರ್ವಹಣೆ ನೀಡಿರುವುದು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಸಂಪೂರ್ಣ ಜಾರಿಗೊಳಿಸಬೇಕು, ಸಹಕಾರ ಸಂಘಗಳಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸಮಾಡಬೇಕಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಹುಟ್ಟಿರುವ ಸಹಕಾರ ಚಳುವಳಿ ಮಹರಾಷ್ಟ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯದಲ್ಲಿ ಸಹಕಾರ ಸಂಘಗಳನ್ನು ಬೆಳೆಸಿ ಶಕ್ತಿ ತುಂಬಬೇಕಿದೆ ಎಂದು ಅಭಿಪ್ರಾಯಪಟ್ಟರು.