ಅರ್ಬನ್ ಬ್ಯಾಂಕ್‌ಗಳು ನಾಯಕತ್ವ ಬೆಳೆಸುವ ಸಹಕಾರಿ ಸಂಸ್ಥೆಗಳಾಗಿವೆ-ಸಚಿವ ಎಚ್‌ಕೆಪಿ

| Published : Oct 21 2024, 12:34 AM IST / Updated: Oct 21 2024, 12:35 AM IST

ಅರ್ಬನ್ ಬ್ಯಾಂಕ್‌ಗಳು ನಾಯಕತ್ವ ಬೆಳೆಸುವ ಸಹಕಾರಿ ಸಂಸ್ಥೆಗಳಾಗಿವೆ-ಸಚಿವ ಎಚ್‌ಕೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಬನ್ ಸಹಕಾರಿ ಬ್ಯಾಂಕ್‌ಗಳು ಕೇವಲ ಹಣದ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿರದೇ ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಬೆಳೆಸುವ ಸಹಕಾರಿ ಸಂಸ್ಥೆಗಳಾಗಿವೆ. ಈ ನಿಟ್ಟಿನಲ್ಲಿ ಹಾವೇರಿಯ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್ ಮಹಿಳೆಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಹಾವೇರಿ: ಅರ್ಬನ್ ಸಹಕಾರಿ ಬ್ಯಾಂಕ್‌ಗಳು ಕೇವಲ ಹಣದ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿರದೇ ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಬೆಳೆಸುವ ಸಹಕಾರಿ ಸಂಸ್ಥೆಗಳಾಗಿವೆ. ಈ ನಿಟ್ಟಿನಲ್ಲಿ ಹಾವೇರಿಯ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್ ಮಹಿಳೆಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ರಜನಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್ ನಿ. ಇದರ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯಾವುದೇ ಸಂಸ್ಥೆಗಳು ತಮ್ಮ ಸುದೀರ್ಘ ಕಾಲದ ಸಾಧನೆಗಳನ್ನು ಮೆಲುಕು ಹಾಕಲಿಕ್ಕೆ ಬೆಳ್ಳಿ ಮಹೋತ್ಸವ, ಗೋಲ್ಡನ್ ಜ್ಯೂಬ್ಲಿ, ಡೈಮಂಡ್ ಜ್ಯೂಬ್ಲಿ, ಶತಮಾನೋತ್ಸವ ಹೀಗೆ ಮಹೋತ್ಸವ ಆಚರಣೆ ಮಾಡುತ್ತವೆ. ಅದೇ ಸಾಲಿನಲ್ಲಿ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಬ್ಯಾಂಕ್ ಕೂಡ ಬೆಳ್ಳಿ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆ ಎನಿಸುತ್ತದೆ. ಮಹಿಳೆಯರೇ ಕಟ್ಟಿ ಬೆಳೆಸಿದ ಬ್ಯಾಂಕು ಹೆಮ್ಮೆ ಪಡುವ ರೀತಿಯಲ್ಲಿ ಬೆಳೆದು ನಿಂತಿದೆ. ಇಷ್ಟು ಗಟ್ಟಿಯಾಗಿ ಬೆಳೆಯಲಿಕ್ಕೆ ನಿರ್ದೇಶಕರು ಹಾಗೂ ನೌಕರದಾರರ ಪಾತ್ರ ಬಹಳ ಮುಖ್ಯವಾಗಿದೆ. ಸಾರ್ವಜನಿಕರ ವಿಶ್ವಾಸಾರ್ಹತೆ ಬೆಳೆಸಿಕೊಂಡು ಸಹಕಾರಿ ಬ್ಯಾಂಕ್‌ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು ಎಂದರು.ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಇನ್ನೂ ಸಿಗುತ್ತಿಲ್ಲ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಕೊಡಲಾಗುತ್ತಿಲ್ಲ. ಪುರುಷರಿಗೆ ಸಮಾನವಾಗಿ ಮಹಿಳೆಯರನ್ನು ಎಲ್ಲಿಯವರೆಗೂ ತರಲು ಆಗುವುದಿಲ್ಲವೋ ಅಲ್ಲಿವರೆಗೂ ಮೀಸಲಾತಿ ನೀಡುವ ಮೂಲಕ ಮುಖ್ಯ ವಾಹಿನಿಗೆ ತರುವುದು ಅಗತ್ಯವಿದೆ. ಬ್ಯಾಂಕ್‌ಗಳು ಸಾಲ ಕೊಡುತ್ತವೆ. ಸಾಲ ವಸೂಲಿ ಮಾಡುತ್ತವೆ. ಆದರೆ ಉದ್ಯೋಗ ಸೃಷ್ಟಿಸಲು ಆಗುತ್ತಿಲ್ಲ. ಉದ್ಯೋಗ ಸೃಷ್ಟಿಗೆ ಸಾಲ ಕೇಳಿದರೆ ಬಹಳ ವಿಚಾರ ಮಾಡುತ್ತೇವೆ. ಹಾಗಾಗಿ ಪ್ರತಿ ತಿಂಗಳು ನಡೆಯುವ ಮೀಟಿಂಗ್‌ನಲ್ಲಿ ಉದ್ಯೋಗ ಸೃಷ್ಟಿ ಮಾಡಿಸುವ ಕುರಿತು ಚರ್ಚೆಯಾಗಬೇಕು. ಉದ್ಯೋಗ ಸೃಷ್ಟಿಗೆ ಹೆಚ್ಚು ಆದ್ಯತೆ ನೀಡಿದರೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಯುತ್ತದೆ. ಬ್ರ‍್ಯಾಂಚ್‌ಗಳು ಕೂಡ ಬೆಳೆಯುತ್ತವೆ. ಪ್ರತಿ ವರ್ಷ ಇಂಡಸ್ಟ್ರಿ, ವ್ಯಾಪಾರ, ಸೇವಾ ಕ್ಷೇತ್ರದಲ್ಲಿ ಕನಿಷ್ಠ ೧೨ ಉದ್ಯೋಗ ಕೇಂದ್ರಗಳನ್ನು ಸೃಷ್ಟಿ ಮಾಡಿಸಬೇಕು ಎಂದರು.ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಿಯದರ್ಶಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆಯಲ್ಲಿ ಬ್ಯಾಂಕಿನ ಸಂಸ್ಥಾಪಕ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರಂಭದಲ್ಲಿ ಬ್ಯಾಂಕ್ ಸ್ಥಾಪನೆಗೆ ಕಾರಣೀಭೂತರಾಗಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಲಾಯಿತು.ಸಮಾರಂಭದಲ್ಲಿ ಇನಕಮ್ ಟ್ಯಾಕ್ಸ್ ಆ್ಯಡಿಷನಲ್ ಕಮಿಷನರ ಪ್ರಿಯದರ್ಶಿನಿ ಬಸೇಗಣ್ಣಿ, ದಂತ ಆರೋಗ್ಯಾಧಿಕಾರಿ ಡಾ. ಕಲ್ಪನಾ ಎಂ.ಎಸ್., ಬ್ಯಾಂಕಿನ ತಜ್ಞ ಸುಧಾಕರ ಭಟ್, ಪುಂಡಲೀಕ ಹೇರೂರ, ಮಲ್ಲಮ್ಮ, ಷಣ್ಮುಖಪ್ಪ ಮುಚ್ಚಂಡಿ, ಕೊಟ್ರೇಶಪ್ಪ ಬಸೇಗಣ್ಣಿ, ರತ್ನವ್ವ ಹೇರೂರ, ಯಶೋಧಾ ಮಾಸೂರ, ರತ್ನಾ ಅಂಗಡಿ, ನೇತ್ರಾವತಿ ಮೇಳದವರ, ಅಂಜನಾ ಕುಂಠೆ, ಲೀಲಾ ಗಡಾದ, ಸುಧಾ ಆನೂರಶೆಟ್ರ, ಪ್ರವೀಣಾ ಕೋರಿಶೆಟ್ಟರ, ಹೇಮಲತಾ ಕರ್ಜಗಿ, ಶೈಲಾ ಬಸೇಗಣ್ಣಿ, ಪಾರ್ವತಿ ಭಾವನೂರ, ಬಸವರಾಜ ಚಿಕ್ಕಮಠ, ಕವಿತಾ ಕಿತ್ತೂರ, ಎನ್.ಜಿ. ರಟ್ಟೀಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಬ್ಯಾಂಕಿನ ಉಪಾಧ್ಯಕ್ಷೆ ವಿಮಲ ಹಿಂಚಿಗೇರಿ ಸ್ವಾಗತಿಸಿದರು. ಭೂಮಿಕಾ ರಜಪೂತ ಪ್ರಾರ್ಥಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.