ಕುಡಿಯುವ ನೀರು ಯೋಜನೆಗೆ ಅಡ್ಡಿ ಮಾಡಬೇಡಿ

| Published : Jul 27 2025, 01:52 AM IST

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಮೃತ್ 2 ಯೋಜನೆಯಡಿ 313ಕೋಟಿ ರೂಪಾಯಿಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಾಟದಹೊಸಹಳ್ಳಿ ಕೆರೆಯಿಂದ ನೀರನ್ನು ಗೌರಿಬಿದನೂರುನಗರಕ್ಕೆ ಕುಡಿಯುವ ಉದ್ದೇಶದಿಂದ ತೆಗೆದುಕೊಂಡು ಹೋಗಲಾಗುತ್ತಿದ್ದು, ಇದರಿಂದ ಗೌರಿಬಿದನೂರುನಗರಕ್ಕೆ ಮಾತ್ರವಲ್ಲದೆ ಮಾರ್ಗಮಧ್ಯದ 8 ಗ್ರಾಮಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುತ್ತದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕೇಂದ್ರ ಮತ್ತು ರಾಜ್ಯಸರ್ಕಾರದ ಸಮಪಾಲುದಾರಿಕೆಯಲ್ಲಿ ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ ಹದಿನಾಲ್ಕು ಸಾವಿರ ಕೋಟಿ ರುಪಾಯಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಖಾತೆಸಚಿವ ಬಿ.ಎಸ್.ಸುರೇಶ್ ತಿಳಿಸಿದರು.ಅವರು ಶನಿವಾರ ಚಿಕ್ಕಬಳ್ಳಾಪುರಜಿಲ್ಲೆಯ ಗೌರಿಬಿದನೂರಿನ ಗೊಟಕನಾಪುರದಲ್ಲಿ ಅಮೃತ್ 2 ಯೋಜನೆಯಡಿ ವಾಟದಹೊಸಹಳ್ಳಿ ಕೆರೆಯಿಂದ ಗೌರಿಬಿದನೂರು ನಗರಕ್ಕೆ ಕುಡಿಯುವ ನೀರು ಪೂರೈಸಲು 66.60 ಕೋಟಿ ರುಪಾಯಿಗಳ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗೌರಿಬಿದನೂರಿಗೆ ನೀರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಮೃತ್ 2 ಯೋಜನೆಯಡಿ 313ಕೋಟಿ ರೂಪಾಯಿಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಾಟದಹೊಸಹಳ್ಳಿ ಕೆರೆಯಿಂದ ನೀರನ್ನು ಗೌರಿಬಿದನೂರುನಗರಕ್ಕೆ ಕುಡಿಯುವ ಉದ್ದೇಶದಿಂದ ತೆಗೆದುಕೊಂಡು ಹೋಗಲಾಗುತ್ತಿದ್ದು, ಇದರಿಂದ ಗೌರಿಬಿದನೂರುನಗರಕ್ಕೆ ಮಾತ್ರವಲ್ಲದೆ ಮಾರ್ಗಮಧ್ಯದ 8 ಗ್ರಾಮಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುತ್ತದೆ ಎಂದರು.

ವಾಟದಹೊಸಹಳ್ಳಿ ಕೆರೆಯ ಶೇ.40ರಷ್ಟು ನೀರನ್ನುಮಾತ್ರ ಉದ್ಧೇಶಿತ ಯೋಜನೆಗೆ ಬಳಸಿಕೊಳ್ಳಲಾಗುವುದು. ಉಳಿದ ಶೇ.60ರಷ್ಟು ನೀರು ಈ ಮೊದಲಿನಂತೆ ನೆರೆಹೊರೆಯಗ್ರಾಮಗಳ ಕೃಷಿ ಮತ್ತಿತರ ಉದ್ಧೇಶಗಳಿಗೆ ಬಳಕೆಯಾಗಲಿದೆ. ಗೌರಿಬಿದನೂರುನಗರಕ್ಕೆ ನೀರುತೆಗೆದುಕೊಂಡು‌ ಹೋದರೆ ಕೆರೆಯ ನೀರು ಖಾಲಿಯಾಗುತ್ತದೆ, ತೊಂದರೆಯಾಗುತ್ತದೆ ಎಂಬುದು ತಪ್ಪುಕಲ್ಪನೆ. ಉದ್ದೇಶಿತ ಯೋಜನೆಯಿಂದ 83,000 ಜನರ ಕುಡಿಯುವ ನೀರಿಗೆ ಸಹಾಯವಾಗಲಿದೆ ಎಂದರು.

ಕೆರೆಗೆ ಎತ್ತಿನಹೊಳೆ ನೀರುಇದೇ ವಾಟದಹೊಸಹಳ್ಳಿಕೆರೆಗೆ ಎತ್ತಿನಹೊಳೆ ಯೋಜನೆಯ ನೀರನ್ನುಹರಿಸಲಾಗುವುದು. ಹೀಗಾಗಿ ಕೆರೆಯಲ್ಲಿ‌ ನೀರಿಗೆ ಯಾವುದೇ ಸಮಸ್ಯೆ ಮತ್ತು ಕೊರತೆಆಗುವುದಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಕುಡಿಯುವ ನೀರಿನ ಯೋಜನೆಗೆ ಯಾರೂ ತಕರಾರು ತೆಗೆಯಬಾರದು ಮತ್ತು ಅಡ್ಡಿಪಡಿಸಬಾರದು. ಎತ್ತಿನಹೊಳೆ ಯೋಜನೆಯ ನೀರಿನ ಸಂಪರ್ಕ ವಾಟದಹೊಸಹಳ್ಳಿ ದೊರೆಯುವುದು ಖಚಿತ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಇತ್ತೀಚಿಗೆ ನಗರೀಕರಣ ಹೆಚ್ಚಾಗುತ್ತಿದ್ದು, ನಗರಗಳು ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಮೂಲಭೂತ ಸೌಕರ್ಯದಡಿ ಕುಡಿಯುವ ನೀರನ್ನು ಆದ್ಯತೆಯ ಮೇಲೆ ಒದಗಿಸುವುದು ಕೇಂದ್ರ ಮತ್ತು ರಾಜ್ಯಸರ್ಕಾರಗಳ ಹೊಣೆಗಾರಿಕೆ. ಎತ್ತಿನಹೊಳೆ ಯೋಜನೆ ನೀರು ಇನ್ನು 2 ವರ್ಷಗಳಲ್ಲಿ ಚಿಕ್ಕಬಳ್ಳಾಪುರಜಿಲ್ಲೆಗೆ ದೊರೆಯಲಿದೆ ಎಂದರು.

ಎತ್ತಿನಹೊಳೆ ಯೋಜನೆ ತ್ವರಿತ

ಕುಡಿಯುವ ನೀರಿಗೆ ಮೊದಲು ಒತ್ತು ಕೊಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅರಣ್ಯ ಇಲಾಖೆಒಪ್ಪಿಗೆ ಮತ್ತು ಭೂಸ್ವಾಧೀನ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಚಿಕ್ಕಬಳ್ಳಾಪುರ,ಕೋಲಾರ,ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ನೀಡಿದ ನಂತರ ಉಳಿದ ಯೋಜನೆಗಳೆಂದು ಮುಖ್ಯಮಂತ್ರಿಗಳು ತಿಳಿಸಿದ್ದು, ಎತ್ತಿನಹೊಳೆ ಕಾಮಗಾರಿಯನ್ನು ತ್ವರಿತವಾಗಿ ಪೂರೈಸಲು ಒತ್ತುನೀಡಲಾಗುತ್ತಿದೆ ಎಂದರು.

ಶಾಸಕರ ಮಾತಿನ ಮೇಲೆ ಭರವಸೆ ಇಡಿಚಿಕ್ಕಬಳ್ಳಾಪುರ ಲೋಕಸಭಾಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ವಾಟದಹೊಸಹಳ್ಳಿ ಕೆರೆಯ ಕುಡಿಯುವನೀರಿನ ಯೋಜನೆಗೆ ಶಂಕುಸ್ಥಾಪನೆಯಾದ ಮೇಲೆ ಕಾಮಗಾರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಈ ಕೆರೆಗೆ ಎತ್ತಿನಹೊಳೆ ನೀರನ್ನು ಹರಿಸುವವರೆಗೂ ಗೌರಿಬಿದನೂರು ನಗರಕ್ಕೆ ಒಂದು‌ಹನಿ ನೀರು ತೆಗೆಯುವುದಿಲ್ಲ ಎಂದು ಸ್ಥಳೀಯ ಶಾಸಕರು ಸ್ಪಷ್ಟವಾಗಿ ಹೇಳಿರುವುದು ಸ್ವಾಗತಾರ್ಹ. ಈ ಭಾಗದ ಜನತೆ ಅವರಮೇಲೆ ನಂಬಿಕೆಇಟ್ಟು ಕುಡಿಯುವನೀರಿನ ಯೋಜನೆಗೆ ಸಹಕರಿಸಬೇಕುಈ ಸಂದರ್ಭದಲ್ಲಿ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಜಿಪಂ ಸಿಇಒ ಡಾ. ವೈ ನವೀನ್ ಭಟ್, ಎಸ್ಪಿ ಕುಶಲ್ ಚೌಕ್ಸೆ, ನಗರಸಭಾ ಉಪಾಧ್ಯಕ್ಷ ಲಕ್ಷೀನಾರಾಯಣ, ಪೌರಾಯುಕ್ತ ಕೆ ಜಿ ರಮೇಶ್, ಮುಖ್ಯ ಅಭಿಯಂತರ ಪ್ರವೀಣ್ ಲಿಂಗಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್ ಲತಾ, ನಗರಸಭಾ ಸದ್ಯಸರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.