ಸ್ತುತ ನೇಮಕಾತಿ ಪ್ರಕ್ರಿಯೆಯಲ್ಲೇ ಉರ್ದು ಮಾಧ್ಯಮದ ಶಿಕ್ಷಕರ ಹುದ್ದೆ ಸೇರ್ಪಡೆಗೊಳಿಸಿ ತಕ್ಷಣ ವಿಶೇಷ ಅಧಿಸೂಚನೆ ಹೊರಡಿಸಬೇಕು

ಕೊಪ್ಪಳ: ನಗರದ ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮೂಲಕ ರಾಜ್ಯ ಸರ್ಕಾರವು ಇತ್ತೀಚೆಗೆ ಹೊರಡಿಸಿರುವ 15,000 ಶಿಕ್ಷಕರ ನೇಮಕಾತಿ ಆದೇಶದಲ್ಲಿ ಉರ್ದು ಮಾಧ್ಯಮ ಶಾಲಾ ಶಿಕ್ಷಕರ ಹುದ್ದೆ ಕಡೆಗಣಿಸಲಾಗಿದ್ದು, ತಕ್ಷಣವೇ ಪೂರಕ ಆದೇಶ ಹೊರಡಿಸಿ ಉರ್ದು ಶಿಕ್ಷಕರ ನೇಮಕಾತಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪಗೆ ಮನವಿ ಸಲ್ಲಿಸಲಾಯಿತು.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು, ಪ್ರಸ್ತುತ ನೇಮಕಾತಿ ಪ್ರಕ್ರಿಯೆಯಲ್ಲೇ ಉರ್ದು ಮಾಧ್ಯಮದ ಶಿಕ್ಷಕರ ಹುದ್ದೆ ಸೇರ್ಪಡೆಗೊಳಿಸಿ ತಕ್ಷಣ ವಿಶೇಷ ಅಧಿಸೂಚನೆ ಹೊರಡಿಸಬೇಕು ಹಾಗೂ ಉರ್ದು ಮಾಧ್ಯಮ ಶಾಲೆಗಳ ಉಳಿವು ಮತ್ತು ವಿದ್ಯಾರ್ಥಿಗಳ ಭವಿಷ್ಯ ರಕ್ಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್, ಗೌರವ ಅಧ್ಯಕ್ಷ ಬಸವರಾಜ್ ಶೀಲವಂತರ್, ಎಐಡಿವೈಓ ರಾಜ್ಯ ಸಮಿತಿ ಸದಸ್ಯ ಶರಣು ಗಡ್ಡಿ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ಮಖಬೂಲ್ ರಾಯಚೂರು, ಮೌಲಾ ಹುಸೇನ್ ಹಣಗಿ, ಗಾಳೆಪ್ಪ ಮುಂಗೋಲಿ ಹಾಗೂ ಕಾನೂನು ವಿದ್ಯಾರ್ಥಿಗಳಾದ ಆಸಿಫ್, ಮೊಹಮ್ಮದ್ ಜಾವೀದ್, ಮೊಹಮ್ಮದ್ ಬಿಲಾಲ್ ಇತರರಿದ್ದರು.