ಸಾರಾಂಶ
ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಬುಧವಾರ ತಾಲೂಕಿನ ವಿವಿಧ ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಘಗಳ ಮುಂದೆ ಗದ್ದಲ ಗಲಾಟೆ ಮಾಡಿ ಪ್ರತಿಭಟನೆ ನಡೆಸಿದರೂ, ಗುರುವಾರ ಸಹ ರೈತರಿಗೆ ಸರಿಯಾಗಿ ಗೊಬ್ಬರ ಸಿಗದೆ ಪರದಾಡಿದ ದೃಶ್ಯ ಕಂಡು ಬಂತು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಬುಧವಾರ ತಾಲೂಕಿನ ವಿವಿಧ ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಘಗಳ ಮುಂದೆ ಗದ್ದಲ ಗಲಾಟೆ ಮಾಡಿ ಪ್ರತಿಭಟನೆ ನಡೆಸಿದರೂ, ಗುರುವಾರ ಸಹ ರೈತರಿಗೆ ಸರಿಯಾಗಿ ಗೊಬ್ಬರ ಸಿಗದೆ ಪರದಾಡಿದ ದೃಶ್ಯ ಕಂಡು ಬಂತು.ತಾಲೂಕಿನ ಹಲುವಾಗಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ರೈತರು ಯೂರಿಯಾ ಗೊಬ್ಬರಕ್ಕಾಗಿ ಬುಧವಾರ ಸಂಘದ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು. ಆದರೆ ಗುರುವಾರ ಸರತಿ ಸಾಲಿನಲ್ಲಿ ನಿಂತು ಬಂದ ರೈತರಿಗೆ ಎರಡು ಚೀಲ ಗೊಬ್ಬರ ವಿತರಿಸಲಾಯಿತು. ಬಳಿಕ ಎಲ್ಲಾ ರೈತರಿಗೆ ಗೊಬ್ಬರ ಸಿಗದ ಕಾರಣ ಸುಮಾರು 390 ರೈತರಿಗೆ ನಾಳೆ ಕೊಡುವುದಾಗಿ ಹೇಳಿ ಸಂಘದಿಂದ ಟೊಕನ್ ಕೊಟ್ಟು ವಾಪಸು ಕಳಿಸಲಾಯಿತು.
ಇನ್ನೂ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಗುರುವಾರ ಒಬ್ಬ ರೈತನಿಗೆ ಒಂದು ಚೀಲದಂತೆ 350 ಜನಕ್ಕೆ ಗೊಬ್ಬರ ವಿತರಿಸಲಾಯಿತು. ಆದರೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನಕ್ಕೆ ಗೊಬ್ಬರ ಸಿಗದೆ ವಾಪಸು ಹೋದರು.ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಯೂರಿಯಾ ಗೊಬ್ಬರ ಸ್ಟಾಕ್ ಇಲ್ಲದ ಪರಿಣಾಮ ಸುಮಾರು 400ಕ್ಕೂ ಹೆಚ್ಚು ರೈತರು ಬಂದು ವಾಪಸು ತೆರಳಿದ ದೃಶ್ಯ ಕಂಡು ಬಂತು.
ಅರಸೀಕೆರೆ ಸಹಕಾರ ಸಂಘದಲ್ಲಿ 180 ಚೀಲ ಯೂರಿಯಾ ಗೊಬ್ಬರ ಇದೆ. ಆದರೆ ರೈತರು ಮುಗಿಬಿದ್ದ ಕಾರಣ ಯಾರಿಗೂ ವಿತರಿಸದೆ ಹೆಚ್ಚಿನ ಗೊಬ್ಬರ ಬಂದ ಮೇಲೆ ಎಲ್ಲರಿಗೂ ವಿತರಿಸಲಾಗುವುದು ಎಂದು ಸಂಘದವರು ಹೇಳಿದ್ದಾರೆ ಎನ್ನಲಾಗಿದೆ.ಒಟ್ಟಿನಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಗುರುವಾರವು ಸಹ ಪರದಾಡಿದ ಘಟನೆ ನಡೆಯಿತು.