ಪೊಲೀಸ್‌ ಬಂದೋಬಸ್ತ್‌ನಲ್ಲಿ ಯೂರಿಯಾ ವಿತರಣೆ..!

| Published : Jul 30 2025, 12:46 AM IST

ಸಾರಾಂಶ

ಗೊಬ್ಬರ ಬರುತ್ತದೆ ಎಂಬ ಖಚಿತ ಮಾಹಿತಿಯೊಂದಿಗೆ ಸೋಮವಾರ ಮದ್ಯಾಹ್ನದಿಂದಲೇ ಬಂದ ರೈತರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು

ಮುಳಗುಂದ: ಜಿಲ್ಲೆಯಾದ್ಯಂತ ಯೂರಿಯಾ ಗೊಬ್ಬರದ ಅಭಾವ ಮುಂದುವರೆದಿದ್ದು, ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಲಾರಿ (550 ಪಾಕೇಟ್) ಗೊಬ್ಬರ ಬಂದಿದ್ದರಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಒಮ್ಮೇಲೆ ಮುಗಿ ಬಿದ್ದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಣಕ್ಕೆ ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಗದಗ ಗ್ರಾಮೀಣ ಸಿಪಿಐ ಸಿದ್ದರಾಮೇಶ ಗಡೇದ ಸಿಬ್ಬಂದಿಯೊಂದಿಗೆ ಬಂದು ಗೊಬ್ಬರ ವಿತರಿಸಲಾದ ಘಟನೆದಲ್ಲಿ ನಡೆಯಿತು.

ಗೊಬ್ಬರ ಬರುತ್ತದೆ ಎಂಬ ಖಚಿತ ಮಾಹಿತಿಯೊಂದಿಗೆ ಸೋಮವಾರ ಮದ್ಯಾಹ್ನದಿಂದಲೇ ಬಂದ ರೈತರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಆದರೆ ಸಂಜೆ ಲೋಡ್‌ ಬಂದಾಗ ಜಿಟಿಜಿಟಿ ಮಳೆಯಲ್ಲಿ ನಿಂತ ರೈತರ ಸಹನೆ ಮೀರಿ ಹೋಗಿತ್ತು. ಗೊಬ್ಬರಕ್ಕಾಗಿ ಸಣ್ಣ ಪುಟ್ಟ ಗಲಾಟೆಗಳು ನಡೆದವು. ಇನ್ನು ಪರಿಸ್ಥಿತಿ ಕೈಮೀರಿ ಹೋಗಬಹುದೆನ್ನುವ ಕಾರಣಕ್ಕೆ ಪೊಲೀಸರು ವಿತರಣೆ ಮಾಡದೇ ಲಾರಿಯನ್ನು ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಯಿತು. ರಾತ್ರಿ 10 ಗಂಟೆಯಿಂದಲೇ ರೈತರ ಸರದಿ ಪ್ರಾರಂಭವಾಗಿ ಬೆಳಗಿನ ಹೊತ್ತಿಗೆ ಅದು ಹನುಮನ ಬಾಲದಂತೆ ಬೆಳೆಯುತ್ತಾ ಹೋಗಿ ಕಿಮೀ ಗಟ್ಟಲೆ ಬೆಳೆದ ಕಾರಣ ಪೊಲೀಸರು ಬ್ಯಾರಿಕೇಡ್‌ ಹಾಕಿ ನಿಯಂತ್ರಣ ಮಾಡಿದರು.

ಸರದಿಯಲ್ಲಿ ಮಹಿಳೆಯರು, ವಯೋವೃದ್ಧರು, ಯುವಕರು, ಮಕ್ಕಳು ಹೀಗೆ ಮನೆ ಮಂದಿಯಲ್ಲ ಆಧಾರ ಕಾರ್ಡ್ ಹಿಡಿದು ನೂರಾರು ಜನ ಗೊಬ್ಬರಕ್ಕಾಗಿ ಸರದಿಗೆ ಇಳಿದರು.

ಜನ ಹೆಚ್ಚುತ್ತಿದ್ದಂತೆ ಪೊಲೀಸ್ ಬಂದೋಬಸ್ತ್‌ ಹೆಚ್ಚುತ್ತಾ ಹೋಗಿ ಎರಡು ಪೊಲೀಸ್ ವಾಹನ ಬಂದು ಡಿವೈಎಸ್‌ಪಿ ಸ್ಥಳಕ್ಕಾಗಮಿಸಿ ವಿತರಣೆ ಸ್ಥಳದಲ್ಲಿ ಬ್ಯಾರಿಕೇಡ್‌ ಹಾಕಿಸಿ ಗೊಬ್ಬರ ವಿತರಣೆ ಪ್ರಾರಂಭಿಸಲಾಯಿತು. ಒಬ್ಬರಿಗೆ ತಲಾ ಎರಡು ಚೀಲದಂತೆ ವಿತರಣೆ ಮಾಡಲಾಯಿತು.

ಎರಡು ಚೀಲ ಗೊಬ್ಬರ ಸಾಕಾಗುತ್ತಿಲ್ಲ:ಒಬ್ಬ ರೈತರಿಗೆ ಎರಡು ಚೀಲ ಗೊಬ್ಬರ ಸಾಕಾಗುತ್ತಿಲ್ಲ. ಇದನ್ನು ಒಯ್ದು ಯಾವ ಮೂಲೆಗೆ ಹಾಕಬೇಕು ಎಂದು ಕೆಲ ರೈತರು ಗೊಣಗಿದರೆ ಇನ್ನು ಕೆಲ ರೈತರು ತಾಸುಗಟ್ಟಲೆ ಕಾಯ್ದು ಸರ್ಕಾರ, ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಗೊಬ್ಬರ ಸಿಗದೆ ಬರಿಗೈಯಲ್ಲಿ ಮನೆ ಸೇರಿಕೊಳ್ಳುವಂತಾಯಿತು.

ಸದ್ಯ 550 ಪಾಕೆಟ್ ಗೊಬ್ಬರ ಮಾತ್ರ ಬಂದಿದ್ದು, ಮುಂದೆ ಯಾವಾಗ ಬರುತ್ತದೆ ಎಂಬ ಮಾಹಿತಿ ಇಲ್ಲ. ಇದು ರೈತರಿಗೆ ಸಾಕಾಗುತ್ತಿಲ್ಲ ಎಂದು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘದ ಕಾರ್ಯದರ್ಶಿ ಮಂಜುನಾಥ ಅಳಗವಾಡಿ ತಿಳಿಸಿದ್ದಾರೆ.ತೊಂದರೆಯಾಗದಂತೆ ಗೊಬ್ಬರ ವಿತರಣೆಯಾಗುತ್ತಿದೆ. ರೈತರು ಸಹಕಾರ ನೀಡುತ್ತಿದ್ದು, ಬಂದೋಬಸ್ತ್‌ ಹೆಚ್ಚಿಸಿ ವಿತರಣೆ ಮಾಡುತ್ತಿದ್ದೇವೆ. ಇನ್ನು ಹೆಚ್ಚು ಗೊಬ್ಬರ ವಿತರಣೆಯಾಗಬೇಕಿದೆ ಎಂದು ಗದಗ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಹೇಳಿದ್ದಾರೆ.

ಆಧಾರ ಕಾರ್ಡ್‌ ತೆಗೆದುಕೊಂಡು ರಾತ್ರಿ 3 ಕ್ಕೆ ಸರದಿಗೆ ಬಂದು ನಿಂತರೆ ಗೊಬ್ಬರ ಸಿಗಲಿಲ್ಲ. ಸರಿಯಾಗಿ ಗೊಬ್ಬರ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಳೆಗಳು ಕುಂಠಿತವಾಗುತ್ತಿವೆ. ರೈತರು ಕಂಗಾಲಾಗುತ್ತಿದ್ದಾರೆ. ಸಮರ್ಪಕ ಗೊಬ್ಬರ ಪೂರೈಸದಿದ್ದಲ್ಲಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ.