ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ರಾಜ್ಯಾದ್ಯಂತ ಯೂರಿಯಾ ರಸಗೊಬ್ಬರಕ್ಕಾಗಿ ಪರದಾಟ ನಡೆದಿರುವ ಬೆನ್ನಲ್ಲೇ ರೈತರ ಹೆಸರಿನಲ್ಲಿ ಯೂರಿಯಾವನ್ನು ಲೂಟಿ ಹೊಡೆಯಲಾಗಿರುವ ವದಂತಿ ದಟ್ಟವಾಗಿದೆ. ರೈತರ ಆಧಾರ್ ಕಾರ್ಡ್‌ಗೆ ಯೂರಿಯಾ ವಿತರಣೆಯಾಗಿರುವ ಲೆಕ್ಕಚಾರವೇ ಈ ಅನುಮಾನಕ್ಕೆ ಕಾರಣವಾಗಿದೆ.
ಹೌದು, ರೈತರಿಗೆ ಬೇಕಾಗಿದ್ದು ನಾಲ್ಕಾರು ಚೀಲವಾಗಿದ್ದರೂ, ಅದೇ ಆಧಾರ್ ಕಾರ್ಡ್‌ನಲ್ಲಿ 50 ಚೀಲದ ವರೆಗೂ ರಸಗೊಬ್ಬರ ಪಡೆಯಲಾಗಿದೆ ಎನ್ನುವುದೇ ಅನುಮಾನಕ್ಕೆ ಕಾರಣವಾಗಿದೆ.ಕೊಪ್ಪಳ ಜಿಲ್ಲೆಯೊಂದರಲ್ಲಿಯೇ 1,36,550 ರೈತರು 7,16,230 ಯೂರಿಯಾ ರಸಗೊಬ್ಬರ ಪಡೆದಿದ್ದಾರೆ. ಆದರೆ, ಇದರಲ್ಲಿ ಬಹುತೇಕ ರೈತರ ಹೆಸರಿನ ಆಧಾರ್ ಕಾರ್ಡ್‌ನಲ್ಲಿ 50 ಚೀಲಗಳಷ್ಟು ಯೂರಿಯಾ ರಸಗೊಬ್ಬರವನ್ನು ಖರ್ಚು ಹಾಕಲಾಗಿದೆ.
ನಾಲ್ಕು ಚೀಲ ಯೂರಿಯಾ ಬೇಕು ಎಂದು ಖರೀದಿಗೆ ಹೋಗಿದ್ದ ರೈತರ ಆಧಾರ್ ಕಾರ್ಡ್ ಎಂಟ್ರಿ ಮಾಡುವ ವೇಳೆ ರೈತ ಖರೀದಿಸಿದ್ದು ನಾಲ್ಕೇ ಚೀಲ ಆಗಿದ್ದರೂ 50 ಚೀಲ ಎಂದು ಖರ್ಚು ಹಾಕಲಾಗಿದೆ. ಈ ಮೂಲಕ ರೈತರ ಹೆಸರಿನಲ್ಲಿಯೇ ರಸಗೊಬ್ಬರ ಮಾರಾಟ ಮಾಡುವ ಅಂಗಡಿ ಮಾಲೀಕರು ಭಾರಿ ಗೋಲ್‌ಮಾಲ್ ಮಾಡಿದ್ದಾರೆ.30ರಿಂದ 50 ಚೀಲ್ ರೈತರ ಆಧಾರ್ ಕಾರ್ಡ್‌ಗೆ ಯೂರಿಯಾ ಬಳಕೆಯ ಖರ್ಚು ಬಿದ್ದಿರುವ ರೈತರನ್ನು ಪರಿಶೀಲನಗೆ ಒಳಪಡಿಸಿದರೆ ಇದರ ಬಣ್ಣ ಬಯಲಾಗುತ್ತದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಅಧಿಕ ಯೂರಿಯಾ ರಸಗೊಬ್ಬರವನ್ನು ಏಪ್ರಿಲ್‌ನಿಂದ ಜುಲೈ ಅಂತ್ಯದ ವರೆಗೂ ವಿತರಿಸಿದ ಲೆಕ್ಕಚಾರವಿದೆ. ಆದರೂ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಮಾತ್ರ ಪರಿತಪಿಸುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿಯೇ ಬರೋಬ್ಬರಿ 32 ಸಾವಿರ ಟನ್ ಯೂರಿಯಾ ರಸಗೊಬ್ಬರ ಮಾರಾಟವಾಗಿದೆ. ಇದು ಈ ಹಿಂದಿನ ಎಲ್ಲ ವರ್ಷಗಳ ದಾಖಲೆ ಮೀರಿದೆ.
ಅಧಿಕಾರಿಗಳಿಗೆ ಅನುಮಾನ:ಜಿಲ್ಲೆಯಲ್ಲಿ ಯೂರಿಯಾ ಸಮಸ್ಯೆ ಕುರಿತು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳೇ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಯೂರಿಯಾ ಖರೀದಿಸಿರುವ ಆಧಾರ್ ಕಾರ್ಡ್ ಮಾಹಿತಿಯನ್ನು ಬೆನ್ನಟ್ಟಿದ್ದಾರೆ.
ಒಟಿಪಿ ಬಂದರೂ ಮೋಸ:ರಸಗೊಬ್ಬರ ಅಕ್ರಮ ತಡೆಯಲು ಖರೀದಿಗೆ ರೈತರ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಆಧಾರ್ ಸಂಖ್ಯೆ ನೋಂದಾಯಿಸಿದ ಬಳಿಕ ರೈತರ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದರ ಆಧಾರದಲ್ಲಿಯೇ ಹಂಚಿಕೆ ಮಾಡಲಾಗುತ್ತದೆ. ಆದರೆ, ಅಂಗಡಿ ಮಾಲೀಕರು ಮಾತ್ರ ಹೆಚ್ಚುವರಿ ಚೀಲ ನಮೂದಿಸಿ ರೈತರಿಂದ ಒಟಿಪಿ ಪಡೆದಿದ್ದಾರೆ. ಹೀಗಾಗಿಯೇ ಯೂರಿಯಾ ಸಮಸ್ಯೆಗೂ ಕಾರಣವಾಗಿದೆ ಎನ್ನಲಾಗುತ್ತದೆ.
ಹೀಗೆ ಹೆಚ್ಚುವರಿಯಾಗಿ ಪಡೆದಿರುವ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಾರೆ ಎನ್ನುವುದು ಸದ್ಯಕ್ಕೆ ಇರುವ ಗಂಭೀರ ಆರೋಪ. ಸಾಮಾನ್ಯವಾಗಿ ಆಧಾರ್ ಲಿಂಕ್ ಇಲ್ಲದೆ ಒಂದು ಚೀಲ ಯೂರಿಯಾ ರಸಗೊಬ್ಬರ ಮಾರಾಟ ಮಾಡುವುದಕ್ಕೆ ಅವಕಾಶ ಇಲ್ಲ. ಆದರೂ ಸಹ ಕಾಳಸಂತೆಯಲ್ಲಿ ಹೇಗೆ ಯೂರಿಯಾ ಮಾರಾಟ ಮಾಡುತ್ತಾರೆ ಎನ್ನುವುದಕ್ಕೆ ಈ ಅಕ್ರಮವೇ ಸಾಕ್ಷಿಯಾಗಿದೆ.