ಸಾರಾಂಶ
ದೊಡ್ಡಬಳ್ಳಾಪುರ: ಸಾರ್ವಜನಿಕರಲ್ಲಿನ ಮೌಡ್ಯತೆಯನ್ನು ನಿವಾರಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಕರ್ನಾಟಕ ಸರ್ಕಾರದ ವತಿಯಿಂದ ಮೌಡ್ಯ ಮುಕ್ತ "ವೈಜ್ಞಾನಿಕ ಅಕಾಡೆಮಿ " ಸ್ಥಾಪಿಸಲು ವಿಧಾನ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಈ ಕುರಿತು ಮಾಹಿತಿ ನೀಡಿದ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್, ಪರಿಷತ್ತು ರಾಜ್ಯದ ಪ್ರತಿ ಜಿಲ್ಲೆ ತಾಲೂಕುವಾರು ಅಧ್ಯಕ್ಷರನ್ನೊಳಗೊಂಡು ಹೋಬಳಿ ಮಟ್ಟದಲ್ಲಿ ಸಮಿತಿಗಳು ಪ್ರಾರಂಭವಾಗಿ ಜನ ಸಾಮಾನ್ಯರು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯ, ವೈಜ್ಞಾನಿಕ ಕೌಶಲ್ಯ, ಚಿಂತನಾ ಶೀಲತೆ, ಮನಸ್ಸಿನ ಸದೃಢತೆ ಬೆಳಸಲು ಶ್ರಮಿಸುತ್ತಿದೆ. ಶೈಕ್ಷಣಿಕ, ವೈಜ್ಞಾನಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನಾ ಕಾವ್ಯಗಳನ್ನು ರಾಜ್ಯಮಟ್ಟದಲ್ಲಿಯೂ ಹಮ್ಮಿಕೊಳ್ಳುತ್ತಾ ಜನಮನದಲ್ಲಿ ನೆಲೆಗೊಂಡಿದೆ. "ವಿಜ್ಞಾನ-ಸಾಹಿತ್ಯ-ಸಂಸ್ಕೃತಿ " ಸಮಾಗಮಗೊಳಿಸಿ ಮಕ್ಕಳಲ್ಲಿ ಮಾನವೀಯತೆ, ಸೌಹಾರ್ದತೆ, ಪ್ರಯೋಗಶೀಲತೆ ಬೆಳೆಸುವುದು ಪರಿಷತ್ತಿನ ಮುಖ್ಯ ಧ್ಯೇಯವಾಗಿದೆ ಎಂದರು.ರಾಜ್ಯ ಸರ್ಕಾರ ಈಗಾಗಲೇ ಮೌಢ್ಯಾಚರಣೆ ನಿಷೇಧ ಕಾನೂನು ಜಾರಿಗೆ ತಂದಿದ್ದು ಇದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ವಿಧಾನಮಂಡಲದಲ್ಲಿ ಮೌಢ್ಯ ಮುಕ್ತ ವೈಜ್ಞಾನಿಕ ಆಕಾಡಮಿ ಸರ್ಕಾರದ ವತಿಯಿಂದ ಸ್ಥಾಪನೆ ಬಗ್ಗೆ ಚರ್ಚಿಸುವುದು. ಪ್ರತೀ ವರ್ಷ ನಡೆಯುವ ವೈಜ್ಞಾನಿಕ ಸಮ್ಮೇಳನಕ್ಕೆ 1 ಕೋಟಿ 50 ಲಕ್ಷ ಅನುದಾನ ನೀಡುವುದು. ವಿಜ್ಞಾನ ಸಿರಿ ಮಾಸ ಪತ್ರಿಕೆಯನ್ನು ಗ್ರಾಮ ಪಂಚಾಯ್ತಿ ಮತ್ತು ಶಾಲಾ-ಕಾಲೇಜು, ಗ್ರಂಥಾಲಯಗಳಿಗೆ ಖರೀದಿಸಿ ನೀಡಲು ಶಿಕ್ಷಣ ಇಲಾಖೆಗೆ ಆದೇಶ ಮಾಡಿಸುವುದು. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಬಳಿ 10 ಎಕರೆ ಸ್ಥಳದಲ್ಲಿ 55 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ವಿಜ್ಞಾನ ಗ್ರಾಮಕ್ಕೆ ಪ್ರತೀವರ್ಷ 10 ಕೋಟಿ ಅನುದಾನ ನೀಡುವುದು. ಕಲ್ಯಾಣ ಕರ್ನಾಟಕದಲ್ಲಿ ವೈಜ್ಞಾನಿಕ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡುವುದು ಸೇರಿದಂತೆ 5 ಪ್ರಮುಖ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಮನವಿ ಪತ್ರದ ಮೂಲಕ ಆಗ್ರಹಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.2ಕೆಡಿಬಿಪಿ2-ದೊಡ್ಡಬಳ್ಳಾಪುರದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಬೆಂ.ಗ್ರಾ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.