ಸಾರಾಂಶ
ನಗರಸಭಾ ಸದಸ್ಯೆಯೊಂದಿಗೆ ಅನುಚಿತವಾಗಿ ವರ್ತನೆ ಆರೋಪ
ಕನ್ನಡ ಪ್ರಭ ವಾರ್ತೆ ಉಡುಪಿನಗರಸಭಾ ಸದಸ್ಯೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಶಾಸಕ ಮತ್ತು ನಗರಸಭೆ ಸದಸ್ಯರೆಲ್ಲರೂ ಆಗ್ರಹಿಸಿದ ಪ್ರಸಂಗ ಸೋಮವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.ನಗರಸಭೆ ಸದಸ್ಯೆ ಕಲ್ಪನಾ ಸುಧಾಮ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿರುವ ಮಣಿಪಾಲದ ಮಣ್ಣಪಳ್ಳದ ಅಭಿವೃದ್ಧಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲು ಜಿಲ್ಲಾಡಳಿತ ಯೋಚಿಸುತ್ತಿದೆ. ಈ ಬಗ್ಗೆ ಡಿಸಿ ಅವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗರಸಭೆ ಸದಸ್ಯೆ ಎಂದು ನೋಡದೆ ತನ್ನ ಜೊತೆ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಪೊಲೀಸ್ ಇಲಾಖೆಗೆ ಸೇರಿದ ಕಾನೂನು ಸುವ್ಯವಸ್ಥೆ ಬಿಟ್ಟು, ಇಂತಹ ಕಂದಾಯ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬೇಕಾಗಿಲ್ಲ. ಸಾಧ್ಯವಿದ್ದರೆ ಮಣ್ಣಪಳ್ಳ ಸಹಿತ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲಿ ಎಂದು ಸದಸ್ಯರು ಸವಾಲು ಹಾಕಿದರು.ಈ ಸಂದರ್ಭ ಶಾಶಕ ಯಶ್ಪಾಲ್ ಸುವರ್ಣ ಮತ್ತು ನಗರಸಭೆ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಎಸ್ಪಿ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮಣ್ಣಪಳ್ಳವನ್ನು ಖಾಸಗಿಯವರಿಗೆ ವಹಿಸದೇ, ನಗರಸಭೆಯ ಮೂಲಕವೇ ಅಭಿವೃದ್ಧಿಪಡಿಸಲು ಜಿಲ್ಲಾಡಳಿತವನ್ನು ಆಗ್ರಹಿಸಬೇಕು ಎಂದು ಅಭಿಪ್ರಾಯಪಟ್ಟರು.ಈ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರೆಲ್ಲರೂ ಸೇರಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸೋಣ ಎಂದು ಸಲಹೆ ನೀಡಿದರು.
ನಗರದಲ್ಲಿ ಭಾರಿ ಗಾತ್ರದ 561 ಜಾಹೀರಾತು ಫಲಕಗಳಿದ್ದು, ಅವುಗಳಿಂದ ನಗರಸಭೆಗೆ ವಾರ್ಷಿಕ 26 ಲಕ್ಷ ರು. ಆದಾಯ ಬರುತ್ತಿದೆ ಎಂದು ಅಧಿಕಾರಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದಾಗ, ಸದಸ್ಯರು ನಗರದಲ್ಲಿ ಅಧಿಕೃತ, ಅನಧಿಕೃತ ಸಾವಿರಕ್ಕೂ ಹೆಚ್ಚು ಫಲಕಗಳಿವೆ. ಮಳೆಗಾಲದಲ್ಲಿ ಅವುಗಳಿಂದ ಅಪಾಯ ಉಂಟಾಗಬಹುದು ಎಂದರು.ಕೊನೆಗೆ ಅನಧಿಕೃತ ಜಾಹೀರಾತು ಫಲಕಗಳನ್ನು ಗುರುತಿಸುವ ಸಮಿತಿ ರಚನೆಗೆ ನಿರ್ಧರಿಸಲಾಯಿತು.
ನಗರದಲ್ಲಿ ಅಪಾಯಕಾರಿ ಮರಗಳ ತೆರವಿಗೆ 6 ತಿಂಗಳು, ಒಂದು ವರ್ಷ ಎಂದು ಕಾಯದೆ ತ್ವರಿತಗತಿಯಲ್ಲಿ ತೆರವು ಮಾಡಬೇಕು. ಮಳೆಗಾಲಕ್ಕೂ ಮುನ್ನ ಚರಂಡಿಗಳಲ್ಲಿರುವ ಹೂಳೆತ್ತಿ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡಬೇಕು ಎಂದು ವಿಪಕ್ಷ ಸದಸ್ಯರಾದ ರಮೇಶ್ ಕಾಂಚನ್ ಹಾಗೂ ಅಮೃತಾ ಕೃಷ್ಣಮೂರ್ತಿ ಆಗ್ರಹಿಸಿದರು.ಸದಸ್ಯರಾದ ವಿಜಯ ಕೊಡವೂರು, ಸುಮಿತ್ರಾ ನಾಯಕ್, ಗಿರೀಶ್ ಆಂಚನ್ ಚರ್ಚೆಗಳಲ್ಲಿ ಭಾಗವಹಿಸಿದರು. ಶಾಸಕ ಯಶ್ಪಾಲ್ ಸುವರ್ಣ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಉದಯ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.